ADVERTISEMENT

Covid-19 Karnataka Update: ಈ ತಿಂಗಳು ನಿತ್ಯ ಸರಾಸರಿ 1,116 ಮಂದಿಗೆ ಕೋವಿಡ್

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 15:08 IST
Last Updated 31 ಡಿಸೆಂಬರ್ 2020, 15:08 IST
ಚಿಕ್ಕಮಗಳೂರಿನಲ್ಲಿ ಕೋವಿಡ್‌ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿ ನೀಡಲು ಜನರು ಸಾಲು
ಚಿಕ್ಕಮಗಳೂರಿನಲ್ಲಿ ಕೋವಿಡ್‌ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿ ನೀಡಲು ಜನರು ಸಾಲು   

ಬೆಂಗಳೂರು: ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರ ಪೈಕಿ ಮತ್ತೆ ಇಬ್ಬರು ಕೋವಿಡ್ ಪೀಡಿತರಾಗಿದ್ದು, ಅಲ್ಲಿಂದ ಮರಳಿದವರಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ನೂರಕ್ಕೂ ಅಧಿಕ ಮಂದಿ ಪರೀಕ್ಷಾ ವರದಿಗಾಗಿ ಎದುರುನೋಡುತ್ತಿದ್ದಾರೆ.

ಬ್ರಿಟನ್‌ನಿಂದ ಇಲ್ಲಿಗೆ ಬಂದವರಲ್ಲಿ 63 ಮಂದಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆಯನ್ನು ಗುರುವಾರ ನಡೆಸಲಾಗಿದೆ. ಅದರಲ್ಲಿ ಇಬ್ಬರ ವರದಿ ಮಾತ್ರ ಬಂದಿದ್ದು, ಇನ್ನೂ 60 ಮಂದಿಯ ಪರೀಕ್ಷಾ ವರದಿ ಬಂದಿಲ್ಲ. ಅಲ್ಲಿಂದ ಬಂದವರಲ್ಲಿ ಈವರೆಗೆ ಒಟ್ಟು 2,028 ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಅವರಲ್ಲಿ 1,887 ಮಂದಿಗೆ ಸೋಂಕು ತಗುಲಿಲ್ಲ ಎನ್ನುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಇನ್ನೂ 108 ಮಂದಿಯ ವರದಿ ಬರಬೇಕಿದೆ.

ವಿವಿಧ ದೇಶಗಳಿಂದ ಬಂದ 797 ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ವಿಮಾನ ನಿಲ್ದಾಣಗಳಲ್ಲಿ 2.69 ಲಕ್ಷ ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ. ರಾಜ್ಯದಲ್ಲಿ ಹೊಸದಾಗಿ 952 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.19 ಲಕ್ಷ ದಾಟಿದೆ. ಈ ತಿಂಗಳು 34,599 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 1,116 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಸೋಂಕಿತರಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,090ಕ್ಕೆ ತಲುಪಿದೆ.

ADVERTISEMENT

ಒಂದೇ ದಿನ 1.6 ಲಕ್ಷ ಆರ್‌ಟಿ–ಪಿಸಿಆರ್ ಸೇರಿದಂತೆ 1.15 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ 1.40 ಕೋಟಿ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕೋವಿಡ್ ಪೀಡಿತರಲ್ಲಿ 1,282 ಮಂದಿಗೆ ಕಾಯಿಲೆ ವಾಸಿಯಾಗಿದ್ದು, ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 8.96 ಲಕ್ಷಕ್ಕೆ ತಲುಪಿದೆ.

194 ಮಂದಿ ಐಸಿಯುನಲ್ಲಿ: ಸೋಂಕಿತರಲ್ಲಿ ಸದ್ಯ 11,271 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 194 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಕಳೆದ 14 ದಿನಗಳ ಅವಧಿಯಲ್ಲಿ 68 ಸಾವಿರ ನೇರ ಸಂಪರ್ಕಿತರು ಹಾಗೂ 78 ಸಾವಿರ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಮತ್ತೆ 554 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.88 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 48 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 52,394ಕ್ಕೆ ತಲುಪಿದೆ. ದಕ್ಷಿಣ ಕನ್ನಡದಲ್ಲಿ 35, ತುಮಕೂರಿನಲ್ಲಿ 28, ಬೆಂಗಳೂರು ಗ್ರಾಮಾಂತರದಲ್ಲಿ 24, ಬೆಳಗಾವಿಯಲ್ಲಿ 23 ಪ್ರಕರಣಗಳು ವರದಿಯಾಗಿವೆ. ರಾಜ್ಯದ 27 ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.