ADVERTISEMENT

ರಾಜ್ಯದಲ್ಲಿ ಜೂನ್‌ 7ರ ವರೆಗೂ ಲಾಕ್‌ಡೌನ್‌ ವಿಸ್ತರಣೆ– ಸಿಎಂ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 21 ಮೇ 2021, 19:29 IST
Last Updated 21 ಮೇ 2021, 19:29 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ    

ಬೆಂಗಳೂರು:ಇದೇ 24 ಕ್ಕೆ ಕೊನೆಗೊಳ್ಳಬೇಕಾಗಿದ್ದ ಲಾಕ್‌ಡೌನ್ ಅನ್ನು ಜೂನ್‌ 7 ರವರೆಗೆ ವಿಸ್ತರಿಸಲಾಗಿದ್ದು, ಈಗ ಜಾರಿಯಲ್ಲಿರುವ ಕಠಿಣ ನಿಯಮಗಳೇ ಮುಂದುವರಿಯಲಿವೆ.

ಕೋವಿಡ್‌ ನಿಯಂತ್ರಣಕ್ಕೆ ತರಲು ಲಾಕ್‌ಡೌನ್‌ ಮುಂದುವರಿಸುವುದು ಸೂಕ್ತ ಎಂದು ತಜ್ಞರ ಸಮಿತಿ ಸಲಹೆ ನೀಡಿತ್ತು. ಈ ಬೆನ್ನಲ್ಲೇ, ಶುಕ್ರವಾರ ಸಂಜೆ ಸಚಿವರ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ತೀರ್ಮಾನ ತೆಗೆದುಕೊಂಡಿದ್ದಾರೆ.

ಈಗಿರುವುದಕ್ಕಿಂತ ಇನ್ನಷ್ಟು ಬಿಗಿ ನಿಯಮಗಳನ್ನು ಜಾರಿ ಮಾಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್‌.ಅಶೋಕ ಗುರುವಾರ ಹೇಳಿದ್ದರು. ಆದರೆ ಹೊಸದಾಗಿ ಯಾವುದೇ ಕಠಿಣ ನಿಯಮಗಳನ್ನು ಜಾರಿ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿಲ್ಲ.

ADVERTISEMENT

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ‘ಹಳ್ಳಿ ಹಳ್ಳಿಗೂ ಕೋವಿಡ್‌ ವಿಸ್ತರಿಸುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಕಠಿಣ ನಿಯಮಗಳನ್ನು (ಲಾಕ್‌ಡೌನ್) 14 ದಿನಗಳ ಕಾಲ ಮುಂದುವರಿಸಲಾಗುವುದು. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ರಾಜ್ಯದಲ್ಲಿ ಲಾಕ್‌ಡೌನ್‌ ವಿಧಿಸಿದ ಬಳಿಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಾರಂಭಿಸಿದೆ. ಸಾರ್ವಜನಿಕರೂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ರಾಜ್ಯದ ಎಲ್ಲ ಭಾಗದಲ್ಲೂ ನಿಯಂತ್ರಣಕ್ಕೆ ತರಲು ಕಠಿಣ ನಿಯಮ ಪಾಲಿಸಬೇಕಾಗಿದೆ. ಈ ಸಂಬಂಧ ತಜ್ಞರು ನೀಡಿರುವ ಅಭಿಪ್ರಾಯವನ್ನು ಪರಿಗಣಿಸಿದ್ದೇವೆ’ ಎಂದು ಹೇಳಿದರು.

ಬೆಳಿಗ್ಗೆ 9.45 ಬಳಿಕ ಕಠಿಣ ಕ್ರಮ: ‘ಈಗಿರುವಂತೆ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುತ್ತದೆ. ಮಾರಾಟಗಾರರು 9.45 ಕ್ಕೇ ಬಾಗಿಲು ಹಾಕಿ ಮನೆಗಳಿಗೆ ಹೋಗಬೇಕು. ಅ ಬಳಿಕ ರಸ್ತೆಗಳಿಗೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಯಡಿಯೂರಪ್ಪ ಎಚ್ಚರಿಕೆ
ನೀಡಿದರು.

‘ಬೆಂಗಳೂರು ನಗರ ಮತ್ತು ಇತರ ಕೆಲವು ನಗರಗಳಲ್ಲಿ ಕೆಲವು ಅನಗತ್ಯವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ. ಮಾಸ್ಕ್‌ ಧರಿಸುವುದೂ ಸೇರಿ ಮಾರ್ಗಸೂಚಿಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದೂ ಹೇಳಿದರು.

ಕಪ್ಪುಶಿಲೀಂಧ್ರ: ಬಡವರಿಗೆ ಉಚಿತ ಚಿಕಿತ್ಸೆ

ಕಪ್ಪು ಶಿಲೀಂಧ್ರ ಸೋಂಕಿನಿಂದ ಬಳಲುತ್ತಿರುವವರಿಗೆ ರಾಜ್ಯದ ಎಲ್ಲ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು. ಇದರ ಚಿಕಿತ್ಸೆಗೆ ಹೆಚ್ಚು ಹಣ ಬೇಕಾಗುತ್ತದೆ. ಬಡವರಿಗೆ ಅದನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.

ಅಂತರಜಿಲ್ಲಾ ಓಡಾಟಕ್ಕೆ ಅವಕಾಶ

ಅಂತರರಾಜ್ಯ ಮತ್ತು ಅಂತರಜಿಲ್ಲಾ ಓಡಾಟಕ್ಕೆ ಷರತ್ತುಬದ್ಧ ಅವಕಾಶ ನೀಡಲಾಗಿದ್ದು, ಅನುಮತಿ ಪಡೆದವರು ಪ್ರಯಾಣಿಸಬಹುದು. ಖಾಲಿ ಸರಕು ವಾಹನಗಳು ಹಾಗೂ ಸರಕು ಸಾಗಣಿಕೆ ವಾಹನಗಳ ಸಂಚಾರಕ್ಕೂ ಯಾವುದೇ ನಿರ್ಬಂಧವಿಲ್ಲ ಎಂದು ಮಾರ್ಗಸೂಚಿ ಹೇಳಿದೆ.

ಡಿ.ಸಿ.ಗಳಿಗೆ ಪರಮಾಧಿಕಾರ

ಆಯಾ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.‘ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ಹೆಚ್ಚುವರಿ ಕಠಿಣ ನಿಯಮಗಳನ್ನು ಜಾರಿಗೊಳಿಸಬಹುದು’ ಎಂದು ಶುಕ್ರವಾರ ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.