
ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಿಪಿಐ ಶತಮಾನೋತ್ಸವ ಸಮಾರೋಪ ಸಮಾರಂಭ
ಬೆಂಗಳೂರು: ‘ದೇಶದಲ್ಲಿ ಮತೀಯ ಶಕ್ತಿಗಳು ಪ್ರಬಲವಾಗಿ ಬೆಳೆದು ಜಾತ್ಯತೀತ ಪರಿಕಲ್ಪನೆಗೆ ಧಕ್ಕೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ಜತೆಯಲ್ಲಿ ಸಮಾನ ಮನಸ್ಕ ಸಂಘಟನೆಗಳು ಒಗ್ಗಟ್ಟಾಗದೇ ಇದ್ದರೆ ದೇಶದ ಭವಿಷ್ಯಕ್ಕೆ ಧಕ್ಕೆಯಾಗಬಹುದು’ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಆತಂಕ ವ್ಯಕ್ತಪಡಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಿಪಿಐ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಮಾತ್ರವಲ್ಲದೇ ಕಮ್ಯುನಿಸ್ಟರು, ದಲಿತ, ರೈತ ಚಳವಳಿಗಳ ಸಂಗಾತಿಗಳು, ಪ್ರಾದೇಶಿಕ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಧೃವೀಕರಣಕ್ಕೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.
‘ಕಮ್ಯುನಿಸ್ಟರು ದೇಶಪ್ರೇಮ, ಸಮಾನತೆ, ಹೋರಾಟದ ವಿಚಾರಗಳನ್ನು ಜನರಲ್ಲಿ ಮೂಡಿಸಿದರು. ದುಡಿಯುವ ಜನ, ಭೂ ರಹಿತರ ಪರ ಧ್ವನಿಯಾದವರು. ಸಂಸತ್ತಿನಲ್ಲಿ ಮಾತ್ರವಲ್ಲದೇ ನಾಲ್ಕೈದು ರಾಜ್ಯಗಳಲ್ಲಿ ಅಧಿಕಾರವನ್ನು ಸ್ಥಾಪಿಸಿ ಜನಪರವಾಗಿ ಕೆಲಸ ಮಾಡಿದರು. ಆನಂತರ ಬಲ ಕಡಿಮೆಯಾಗಿ ಮತೀಯ ಶಕ್ತಿಗಳು ಪ್ರಬಲವಾಗಿವೆ. ಶತಮಾನದ ನೆಪದಲ್ಲಿ ಈಗ ಸಿಪಿಐಗೆ ಚೈತನ್ಯ ತುಂಬುವ ಕೆಲಸ ಆಗುತ್ತಿದೆ. ಹಿಂದೆ ಪ್ರಗತಿಪರ ಸಂಘಟನೆಗಳ ಸಮನ್ವಯಕ್ಕೆ ಒತ್ತು ನೀಡಿದಂತೆ ಮರು ಚಾಲನೆ ನೀಡುವುದಕ್ಕೂ ಇದು ಸರಿಯಾದ ಸಮಯ’ ಎಂದು ತಿಳಿಸಿದರು.
ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಪ್ರಕಾಶ ಬಾಬು ಮಾತನಾಡಿ, ‘ಬ್ರಿಟೀಷರು ಭಾರತದ ಸಂಪತ್ತನ್ನು ಲೂಟಿ ಮಾಡಿದರು ಎಂದು ನಾವು ಹೇಳುತ್ತೇವೆ. ಈಗ ಬಿಜೆಪಿ ಅಧಿಕಾರ ಬಳಸಿಕೊಂಡು ಎಲ್ಲಾ ಕ್ಷೇತ್ರದಲ್ಲಿ ಲೂಟಿ ಹೊಡೆಯುತ್ತಿದೆ. ಬಿಜೆಪಿ ಆಸ್ತಿಯೇ ₹7000 ಕೋಟಿಯಷ್ಟಿದ್ದು, ಶ್ರೀಮಂತ ಪಕ್ಷವಾಗಿ ಬದಲಾಗಿದೆ. ಕಾಂಗ್ರೆಸ್ ಕೆಲವು ಕ್ಷೇತ್ರಗಳಲ್ಲಿ ಖಾಸಗೀಕರಣ ತಂದರೆ, ಬಿಜೆಪಿ ಇದನ್ನು ಮುಂದುವರಿಸಿದೆ. ಬಡ ಜನರಿಗೆ ಉದ್ಯೋಗ ನೀಡಿ ಖರೀದಿ ಶಕ್ತಿ ಹೆಚ್ಚಿಸಿದ್ದ ನರೇಗಾ ಯೋಜನೆ ಹೆಸರು, ನಿಯಮ ಬದಲಿಸಿ ರಾಜ್ಯಗಳಿಗೆ ನೀಡುವ ಅನುದಾನ ಕಡಿತಗೊಳಿಸಿದೆ ಆಶಯವನ್ನೇ ಹಾಳು ಮಾಡಿದೆ’ ಎಂದು ಟೀಕಿಸಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ ಪ್ರಕಾಶ ಮಾತನಾಡಿ, ‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಈಗ ಶತಮಾನೋತ್ಸವವನ್ನು ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಆಚರಿಸಿಕೊಳ್ಳುತ್ತಿದೆ. ಡಿಜಿಟಲ್ ಮಾಧ್ಯಮವನ್ನು ಬಳಸಿಕೊಂಡು ಜನರಲ್ಲಿ ತನ್ನ ವಿಚಾರಗಳನ್ನು ಬಿತ್ತುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ತೇಲುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ 2020ಗೆ ತಿದ್ದುಪಡಿ ತರಲು ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಎರಡೂವರೆ ವರ್ಷವಾದರೂ ಆಗಿಲ್ಲ. ಭೂಸ್ವಾಧೀನ ನೀತಿಯ ಮೂಲಕ ಜನರನ್ನು ಹೆದರಿಸಲಾಗುತ್ತಿದೆ. ಇಂತಹ ನೀತಿಗಳ ಬಗ್ಗೆ ಕಾಂಗ್ರೆಸ್‌ಗೆ ತಿಳಿಸೋರು ಯಾರು’ ಎಂದು ಪ್ರಶ್ನಿಸಿದರು.
ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಉಮಾ ಮಾತನಾಡಿ, ‘ಭಾರತದಲ್ಲಿ ಉನ್ನತ ಶಿಕ್ಷಣ ಸ್ವರೂಪವನ್ನೇ ಬದಲಿಸುವ ಹುನ್ನಾರ ನಡೆದಿದೆ. ಕುಂಭಮೇಳವೂ ಪಠ್ಯದ ಭಾಗವಾಗಿದೆ. ಮೊಘಲರ ಇತಿಹಾಸವನ್ನು ಕೈ ಬಿಡಲಾಗಿದೆ. ರಾಜ್ಯದಲ್ಲೂ ಕರ್ನಾಟಕ ಪಬ್ಲಿಕ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕೆಪಿಎಸ್ ಹೆಸರಲ್ಲಿ ಏಷಿಯನ್ ಅಭಿವೃದ್ದಿ ಬ್ಯಾಂಕ್‌ನಿಂದ ₹ 2000 ಕೋಟಿ ಸಾಲ ಪಡೆದಿದ್ದು, ಇನ್ನೂ ₹10 ಸಾವಿರ ಕೋಟಿ ಸಾಲ ಪಡೆಯುವ ಪ್ರಯತ್ನ ನಡೆದಿದೆ. ಹೊಸ ಕೆಪಿಎಸ್ ಶಾಲೆ ಆರಂಭಿಸುವ ಬದಲು ಈಗಿರುವ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿ ಮಕ್ಕಳು ಬರುವ ಹಾಗೆ ಮಾಡಿ’ ಎಂದು ಹೇಳಿದರು.
ಸಿಪಿಐ ಮುಖಂಡ ಎಂ.ದೀಪಕ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಪಿ.ವಿ.ಲೋಕೇಶ್, ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಕ್ಲಿಪ್ಟನ್ ಡಿ.ರೊಜಾರಿಯೊ, ಫಾರ್ವಡ್ ಬ್ಲಾಕ್ ರಾಜ್ಯ ಕಾರ್ಯದರ್ಶಿ ಜಿ.ಆರ್.ಶಿವಶಂಕರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.