ADVERTISEMENT

ಅನಧಿಕೃತ ಸ್ಪಾಗಳಿಗೆ ಕಡಿವಾಣ: ವೈದ್ಯಕೀಯ ಸ್ಪಾಗಳ ಮೇಲೆ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 19:48 IST
Last Updated 23 ನವೆಂಬರ್ 2025, 19:48 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ಅನಧಿಕೃತ ಸ್ಪಾಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವೈದ್ಯಕೀಯ ಸ್ಪಾಗಳನ್ನು ವೈದ್ಯಕೀಯ ಸಂಸ್ಥೆಗಳೆಂದು ಘೋಷಿಸಿ, ಆರೋಗ್ಯ ಇಲಾಖೆಯ ನಿಯಂತ್ರಣಕ್ಕೆ ತರಲಾಗಿದೆ.

‘ಜನರ ಆರೋಗ್ಯ ಕಾಳಜಿಯನ್ನು ಕಡೆಗಣಿಸಿ, ಕೇವಲ ವ್ಯಾಪಾರ ದೃಷ್ಟಿಯಿಂದ ಅನಧಿಕೃತವಾಗಿ ತಲೆಯೆತ್ತಿರುವ ವೈದ್ಯಕೀಯ ಸ್ಪಾಗಳ ಬಗ್ಗೆ ಆರೋಗ್ಯ ಇಲಾಖೆಗೆ ಹಲವಾರು ದೂರುಗಳು ಬಂದಿದ್ದವು. ಈ ಕ್ಷೇತ್ರದಲ್ಲಿ ಪರಿಣತರಲ್ಲದಿದ್ದರೂ ರಾಸಾಯನಿಕಗಳನ್ನು ಬಳಸಿ ಸೌಂದರ್ಯವರ್ಧಕ ಚಿಕಿತ್ಸೆ ನೀಡುತ್ತಿದ್ದ, ವೃದ್ಧರ ಮೂಳೆ-ಕೀಲು ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಂಡು ರೇಡಿಯೇಷನ್ ಥೆರಫಿ ಒದಗಿಸುತ್ತಿದ್ದ ಜಾಲವನ್ನು ಆರೋಗ್ಯ ಇಲಾಖೆ ಪತ್ತೆ ಮಾಡಿ ಕ್ರಮಕೈಗೊಂಡಿದೆ. ಆದರೂ ಹೆಚ್ಚಿನ ಕಣ್ಗಾವಲಿರಿಸುವುದು ಅತ್ಯಗತ್ಯ ಎಂಬುದನ್ನು ಮನಗಂಡು ಈ ಕೇಂದ್ರಗಳನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2007ರ ಅಡಿಯಲ್ಲಿ ವೈದ್ಯಕೀಯ ಸಂಸ್ಥೆಗಳ ವ್ಯಾಪ್ತಿಗೆ ತರಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

ಈ ಬಗ್ಗೆ ಹೊರಡಿಸಲಾದ ಆದೇಶಕ್ಕೆ ಸಂಬಂಧಿಸಿದಂತೆ ‘ಎಕ್ಸ್’ ಮಾಡಿರುವ ಅವರು, ‘ಲೇಸರ್ ಚಿಕಿತ್ಸೆಗಳು, ಲಿಪೊಸಕ್ಷನ್, ಕೂದಲು ಕಸಿ, ಐವಿ ಹೈಡ್ರೇಷನ್ ಥೆರಪಿ ಸೇರಿ ಇತರೆ ಸೌಂದರ್ಯ ವರ್ಧಕ ಚಿಕಿತ್ಸೆಯ ಗುಣಮಟ್ಟದ ಮೇಲೆ ಕಣ್ಗಾವಲಿಡಲು ಕ್ರಮ ಕೈಗೊಳ್ಳ ಲಾಗಿದೆ.ಅನಧಿಕೃತವಾಗಿ ವೈದ್ಯಕೀಯ ಅಭ್ಯಾಸ ಮಾಡುವ ಮತ್ತು ವೃತ್ತಿಪರರಲ್ಲದವರು ನಡೆಸುತ್ತಿರುವ ಸೌಂದರ್ಯವರ್ಧಕ ಚರ್ಮದ ಕ್ಲಿನಿಕ್‌ಗಳು, ಕೊರಿಯನ್ ಚರ್ಮದ ಆರೈಕೆ ಕೇಂದ್ರಗಳು, ಮಸಾಜ್ ಸೆಂಟರ್‌ಗಳು ಮತ್ತು ಸ್ಪಾಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಅಲೋಪಥಿ ಅಥವಾ ಆಯುರ್ವೇದದಂತಹ ವೈದ್ಯಕೀಯ ಪದವಿ ಪಡೆದ ವೈದ್ಯರು ತಮ್ಮ ಕ್ಷೇತ್ರಕ್ಕೆ ಸಂಬಂಧವಿಲ್ಲದ ಸೌಂದರ್ಯವರ್ಧಕ ಕ್ಲಿನಿಕ್‌ಗಳನ್ನು ಅನಧಿಕೃತವಾಗಿ ನಡೆಸುವುದನ್ನು ನಿಯಂತ್ರಿಸಲು ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಈ ಕ್ರಮವು ರಾಜ್ಯದಲ್ಲಿ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಪಾರದರ್ಶಕತೆ ತರಲು ಸಹಕಾರಿಯಾಗಲಿದೆ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.