ADVERTISEMENT

ಪ್ರತಿ ಗ್ರಾಮ ಪಂಚಾಯಿತಿಗೆ ₹ 1.50 ಕೋಟಿ ಅನುದಾನ:

ಜಿ.ಪಂ ಬದಲು ಗ್ರಾ.ಪಂ.ಗೆ ನರೇಗಾ ಹೊಣೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 20:43 IST
Last Updated 1 ಡಿಸೆಂಬರ್ 2020, 20:43 IST
ಡಾ.ಸಿ.ಎನ್.ಅಶ್ವತ್ಥನಾರಾಯಣ
ಡಾ.ಸಿ.ಎನ್.ಅಶ್ವತ್ಥನಾರಾಯಣ   

ರಾಮನಗರ:ಪ್ರತಿ ಗ್ರಾಮ ಪಂಚಾಯಿತಿಗೂ ವರ್ಷಕ್ಕೆ ₹ 1.50 ಕೋಟಿ ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದ್ದಾರೆ.

ಆಯಾ ಗ್ರಾಮಗಳ ನರೇಗಾ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿಗಳ ಬದಲು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

15ನೇ ಹಣಕಾಸು ಆಯೋಗದ ವರದಿಯಲ್ಲಿ ಗ್ರಾಮ ಪಂಚಾಯಿತಿಗಳಿಗೇ ನೇರವಾಗಿ ಹೆಚ್ಚು ಅನುದಾನ ನೀಡುವಂತೆ ಶಿಫಾರಸು ಮಾಡಲಾಗಿದೆ. ಅದರಂತೆ, ಗ್ರಾಮೀಣಾಭಿವೃದ್ಧಿಗೆ ಬೇಕಾದ ಎಲ್ಲ ಹಣಕಾಸು ನೆರವು ಒದಗಿಸಲಾಗುವುದು. ಆಡಳಿತ ವಿಕೇಂದ್ರೀಕರಣವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲಿದೆ ಎಂದು ಅವರು ನುಡಿದರು.

ADVERTISEMENT

‘ಗ್ರಾಮ ಸ್ವರಾಜ್ಯ’ ಬಿಜೆಪಿಯ ಪರಿಕಲ್ಪನೆಯಾಗಿದೆ. ಅದರಂತೆ ಗ್ರಾಮಗಳಿಗೆ ಅವಶ್ಯವಾದ ಉತ್ತಮ ಆರೋಗ್ಯ ವ್ಯವಸ್ಥೆ, ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಮೊದಲಾದ ಮೂಲ ಸೌಕರ್ಯಗಳು, ಕೆರೆ ಕುಂಟೆ ಮೊದಲಾದ ಜಲಮೂಲಗಳ ಅಭಿವೃದ್ಧಿ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ಇದರಿಂದಾಗಿ ಗ್ರಾಮಗಳು ಮುಂದೆ ಸ್ವಾಯತ್ತ ಸರ್ಕಾರಗಳ ರೀತಿಯಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.

‘ಕೇವಲ 6 ವರ್ಷಗಳ ಹಿಂದೆ ದೇಶದ ಗ್ರಾಮೀಣ ಪ್ರದೇಶದಲ್ಲಿ ಶೇ 30ರಷ್ಟು ಮನೆಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆ ಇತ್ತು. ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಶೌಚಾಲಯ ಕಟ್ಟುವುದೂ ಅಸಾಧ್ಯ ಎನ್ನುವಂಥ ಸ್ಥಿತಿ ಇತ್ತು. ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನದಿಂದಾಗಿ ಇವತ್ತು ಗ್ರಾಮದ ಪ್ರತಿ ಮನೆಯಲ್ಲೂ ಶೌಚಾಲಯ
ಗಳನ್ನು ಕಾಣಬಹುದು ಎಂದರು.

ಘೋಷಣೆಗಳಿಂದ ಪ್ರಯೋಜನವಿಲ್ಲ: ಕಾಂಗ್ರೆಸ್‌ ಕಳೆದ ಏಳು ದಶಕಗಳಲ್ಲಿ ಬರೀ ಘೋಷಣೆಗಳನ್ನು ಮಾಡುತ್ತಾ ಬಂದಿತ್ತು. ಅವುಗಳಲ್ಲಿ ಗರೀಬಿ ಹಠಾವೋ ಎನ್ನುವುದು ಕೂಡ ಒಂದು. ಇದರಿಂದ ಸಿಕ್ಕಿರುವ ಫಲಿತಾಂಶ ಮಾತ್ರ ಶೂನ್ಯ. ಇಂದಿಗೂ ದೇಶದಲ್ಲಿ ಬಡತನ ಜೀವಂತವಾಗಿದೆ. ಮಾತಿನ ಬದಲಿಗೆ ರಚನಾತ್ಮಕವಾಗಿ ಕೆಲಸ ಮಾಡಿದರೆ ಗ್ರಾಮಗಳು ಉದ್ಧಾರವಾಗುತ್ತವೆ. ಬಿಜೆಪಿ ಸರ್ಕಾರ ಘೋಷಣೆ ಬದಲು ಕೆಲಸ ಮಾಡುತ್ತಿದೆ.ಪರಿಣಾಮವಾಗಿ ಹಳ್ಳಿಗಳು ಸಾಕಷ್ಟು ಬದಲಾವಣೆ ಕಾಣುತ್ತಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.