ಬೆಂಗಳೂರು: ಅರಣ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಕಾಡಿನ ಬೆಂಕಿ ತಡೆಯಲು ಬಳಸಬೇಕಾಗಿದ್ದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಹಣವನ್ನು ಅರಣ್ಯ ಅಧಿಕಾರಿಗಳ ಓಡಾಟಕ್ಕಾಗಿ ಐಷಾರಾಮಿ ವಾಹನಗಳ ಖರೀದಿಗೆ ಬಳಸಲಾಗಿದೆ.
ಅರಣ್ಯ ಸಂರಕ್ಷಣಾ ಕಾಯ್ದೆ 1980 ಅನ್ನು ಉಲ್ಲಂಘಿಸಿ ಕೇಂದ್ರ ಅರಣ್ಯ ಇಲಾಖೆಯಿಂದ ಛೀಮಾರಿ ಹಾಕಿಸಿಕೊಂಡು ದಂಡ ತೆತ್ತಿದ್ದ ಪವನ ವಿದ್ಯುತ್ ಕಂಪನಿಯೊಂದರ ಸಿಎಸ್‌ಆರ್ ನಿಧಿಯ ಹಣವನ್ನೇ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
ಈ ರೀತಿ ಖರೀದಿಸಿದ ಟೊಯೊಟಾ ಇನ್ನೊವಾ ಕ್ರಿಸ್ಟಾ ವಾಹನವನ್ನು ಬೆಳಗಾವಿ ವಿಭಾಗದ ಡಿಸಿಎಫ್ ಅವರಿಗೂ, ಮಹೀಂದ್ರಾ ಸ್ಕಾರ್ಪಿಯೊ ವಾಹನವನ್ನು ಎಸಿಎಫ್ ಅವರ ಬಳಕೆಗೂ ನೀಡಲಾಗಿದೆ. ಮಹೀಂದ್ರಾ ಬೊಲೇರೊವನ್ನೂ ಖರೀದಿಸಲಾಗಿದೆ. ಮೆಸರ್ಸ್ ವಿಂಡ್ ವರ್ಲ್ಡ್ (ಹಿಂದೆ ಈ ಕಂಪನಿಗೆ ಎನರ್ಕಾನ್ ಇಂಡಿಯಾ ಎಂಬ ಹೆಸರಿತ್ತು) ಕಂಪನಿಯ ಸಿಎಸ್‌ಆರ್ ನಿಧಿಯಿಂದ ವಾಹನಗಳನ್ನು ಖರೀದಿಸಲಾಗಿದೆ.
ವಿಂಡ್ ವರ್ಲ್ಡ್ ಕಂಪನಿಯು ಅರಣ್ಯ ರಕ್ಷಣೆ, ವನ್ಯಜೀವಿ ಸಂರಕ್ಷಣೆ ಮತ್ತು ಕಾಡಿನ ಬೆಂಕಿ ತಡೆಗೆಂದು ₹64.23 ಲಕ್ಷ ಮೊತ್ತವನ್ನು ‘ದಾಂಡೇಲಿ ಅಣಶಿ ಹುಲಿ ಪ್ರತಿಷ್ಠಾನ’ದ ಖಾತೆಗೆ ಜಮೆ ಮಾಡಿತ್ತು. ಅಧಿಕಾರಿಗಳು ಈ ಮೊತ್ತದಲ್ಲಿ ಇನ್ನೊವಾ ಕ್ರಿಸ್ಟಾ ಖರೀದಿಗೆ ₹19 ಲಕ್ಷ, ಮಹೀಂದ್ರಾ ಸ್ಕಾರ್ಪಿಯೊಗೆ ₹15.5 ಲಕ್ಷ ಮತ್ತು ಮಹೀಂದ್ರಾ ಬೊಲೇರೊಗೆ ₹10 ಲಕ್ಷ ಬಳಸಿಕೊಂಡಿದ್ದಾರೆ. 2025–26ನೇ ಸಾಲಿನ ಹುಲಿ ಪ್ರತಿಷ್ಠಾನ ಆಡಳಿತ ಮಂಡಳಿಯ ಸಭೆಯಲ್ಲಿ (ಜನವರಿ 25) ಘಟನೋತ್ತರ ಮಂಜೂರಾತಿ ಪಡೆಯುವ ಷರತ್ತಿನಡಿ ವಾಹನಗಳ ಖರೀದಿಗೆ ಅನುಮತಿ ನೀಡಲಾಗಿತ್ತು.
ಬೆಂಕಿ ತಡೆ ವಾಚರ್‌ಗಳಿಗಾಗಿ 10 ಕಾರ್ಮಿಕರಿಗೆ ನಾಲ್ಕು ತಿಂಗಳಿಗೆ ₹6.97 ಲಕ್ಷ, ಫೈರ್ ಲೈನ್ ನಿರ್ವಹಣೆಗೆ ₹6.25 ಲಕ್ಷ ಮತ್ತು ಅಗ್ನಿ ಶಾಮಕ ಸಾಧನಗಳ ಖರೀದಿಗೆ ₹6.50 ಲಕ್ಷ ಬಳಸಲಾಗಿದೆ.
ಬೆಳಗಾವಿ ಡಿಸಿಎಫ್ ಅವರಿಗೆ ಎರಡು ವರ್ಷಗಳ ಹಿಂದೆ ಹೊಸ ಟಾಟಾ ಹ್ಯಾರಿಯರ್ ವಾಹನ ನೀಡಲಾಗಿತ್ತು. ಅದು ಇನ್ನೂ ಉತ್ತಮ ಸ್ಥಿತಿಯಲ್ಲಿದೆ. ಇನ್ನೊವಾ ಬಂದ ನಂತರವೂ ಹ್ಯಾರಿಯರ್ ವಾಹನವನ್ನೂ ಇಟ್ಟುಕೊಳ್ಳಲಾಗಿತ್ತು. ಇತ್ತೀಚೆಗಷ್ಟೇ ಹ್ಯಾರಿಯರ್ ವಾಹನವನ್ನು ಕಾರ್ಯಯೋಜನೆ ವಿಭಾಗಕ್ಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದ ಹಿಂದಿನ ನಿರ್ದೇಶಕ ಶ್ರೀನಿವಾಸುಲು ಅವರು ₹ 50 ಲಕ್ಷ ಮೊತ್ತವನ್ನು ಸಿಎಸ್‌ಆರ್ ನಿಧಿಯಿಂದ ಪಡೆಯಲು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾದಾಗ ಕೆನರಾ ವೃತ್ತದ ಅಂದಿನ ಸಿಸಿಎಫ್ ಎನ್.ಎಲ್.ಶಾಂತಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ‘ಕಂಪನಿಯು ಕಾನೂನು ಉಲ್ಲಂಘನೆ ಮಾಡಿದ್ದು, ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಒಪ್ಪಂದ ಸರಿಯಲ್ಲ ಎಂದು ಹೇಳಿದ್ದರು. ಆದರೆ, ಈಗ ಆ ಸತ್ಸಂಪ್ರದಾಯವನ್ನು ಉಲ್ಲಂಘಿಸಲಾಗಿದೆ’ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಈ ಬಗ್ಗೆ ಮಾಹಿತಿ ಇಲ್ಲ ವರದಿ ತರಿಸಿಕೊಂಡು ತಪ್ಪೆಸಗಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದುಈಶ್ವರ ಖಂಡ್ರೆ ಅರಣ್ಯ ಸಚಿವ
‘ವಾಹನ ಖರೀದಿ ತನಿಖೆ ನಡೆಯಲಿ’
‘ಅರಣ್ಯ ರಕ್ಷಣೆ ಮತ್ತು ಸಮೃದ್ಧಿಗೆ ಬಳಸಬೇಕಾದ ಮೊತ್ತವನ್ನು ಅಧಿಕಾರಿಗಳು ತಮ್ಮ ವಿಲಾಸಿ ಜೀವನಕ್ಕೆ ಬಳಸಿಕೊಂಡಿದ್ದಾರೆ. ಹಿಂದಿನ ಡಿಸಿಎಫ್ ಮರಿಯಾ ಕ್ರಿಸ್ತು ರಾಜ ಅವಧಿಯಲ್ಲಿ ಈ ವಾಹನಗಳನ್ನು ಖರೀದಿಸಲಾಗಿದೆ. ಇಲಾಖೆಯಿಂದ ಎರಡು ವರ್ಷಗಳ ಹಿಂದಷ್ಟೆ ಖರೀದಿಸಿದ್ದ ವಾಹನಗಳು ಈಗಲೂ ಸುಸ್ಥಿತಿಯಲ್ಲಿವೆ. ಆದರೂ ಐಷಾರಾಮಿ ವಾಹನ ಖರೀದಿಸಲಾಗಿದೆ. ಇದೇ ಅಧಿಕಾರಿ ಅವಧಿಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ತಮ್ಮ ಕಚೇರಿ ನವೀಕರಣ ಮಾಡಿಸಿಕೊಂಡಿದ್ದರು. ಆದ್ದರಿಂದ ಸಿಎಸ್‌ಆರ್ ನಿಧಿಯ ದುರ್ಬಳಕೆ ಕುರಿತು ತನಿಖೆ ನಡೆಸಬೇಕು’ ಎಂದು ಆರ್‌ಟಿಐ ಕಾರ್ಯಕರ್ತ ರಾಘವೇಂದ್ರ ಒತ್ತಾಯಿಸಿದ್ದಾರೆ.
ಪವನ ವಿದ್ಯುತ್ ಕಂಪನಿಯ ಲೋಪವೇನು?
ಮೆಸರ್ಸ್ ವಿಂಡ್ ವರ್ಲ್ಡ್ ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಮತ್ತು ಮಾರಿಕಣಿವೆ ಅರಣ್ಯ ಪ್ರದೇಶದಲ್ಲಿ ಪವನ ವಿದ್ಯುತ್ ಯೋಜನೆಗಳ ಪರವಾನಗಿ ನವೀಕರಣಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಸ್ಥಳ ತಪಾಸಣೆ ನಡೆಸಿದ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ದಕ್ಷಿಣ ಪ್ರಾದೇಶಿಕ ಕಚೇರಿ ಡಿಐಜಿಯವರು ‘ಕಂಪನಿಯು ಗಂಭೀರ ಉಲ್ಲಂಘನೆಗಳನ್ನು ಮಾಡಿರುವುದು ದೃಢಪಟ್ಟಿದೆ. ಆದ್ದರಿಂದ ಕಂಪನಿ ಮತ್ತು ಉಲ್ಲಂಘನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶಿಫಾರಸು ಮಾಡಿದ್ದರು.
ಇದೇ ಯೋಜನೆಗೆ ವನ್ಯಜೀವಿ ವಿಭಾಗದ ಅನುಮೋದನೆ ಕೋರಿ ಕಂಪನಿಯು ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವವು 2024ರ ಅಕ್ಟೋಬರ್‌ನಲ್ಲಿ ವನ್ಯಜೀವಿ ಮಂಡಳಿ ಸಭೆಯಲ್ಲಿ ಚರ್ಚೆಗೆ ಬಂದಾಗ ‘ಕಂಪನಿ ಮತ್ತು ಉಲ್ಲಂಘನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದರು. ಬೆಳಗಾವಿಯಲ್ಲೂ ಈ ಕಂಪನಿ ಅರಣ್ಯ ಕಾಯ್ದೆಗಳನ್ನು ಉಲ್ಲಂಘಿಸಿತ್ತು. ಕಂಪನಿಯು 174 ಹೆಕ್ಟೇರ್ ಅರಣ್ಯ ಭೂಮಿಯನ್ನು ಪವನ ವಿದ್ಯುತ್ ಯೋಜನೆಗಾಗಿ ಪರಿವರ್ತನೆ ಮಾಡಲು 2010 ರಲ್ಲಿ ಅನುಮತಿ ಪಡೆದಿತ್ತು.
ಅನುಮತಿ ಇಲ್ಲದೇ ಆರ್‌ಸಿಸಿ ಕಟ್ಟಡ ನಿರ್ಮಾಣ ಅನುಮೋದನೆಗಿಂತ ಹೆಚ್ಚು ಅರಣ್ಯ ಭೂಮಿಯ ಬಳಕೆ ಮರಗಳ ಅಕ್ರಮ ಕಡಿತ ಅರಣ್ಯ ಅತಿಕ್ರಮಣ ಮುಂತಾದ ಉಲ್ಲಂಘನೆ ಮಾಡಿತ್ತು. ಈ ಕಾರಣದಿಂದ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್–82 ರ ಅಡಿ ಕಂಪನಿಗೆ ನೀಡಿದ್ದ ಗುತ್ತಿಗೆಯನ್ನು ರದ್ದುಗೊಳಿಸಲು ಪಿಸಿಸಿಎಫ್ ಹಾಗೂ ಅರಣ್ಯಪಡೆ ಮುಖ್ಯಸ್ಥರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.