ADVERTISEMENT

ಕಳಪೆ ಅಡಿಕೆ ಆಮದಿಗೆ ಕಡಿವಾಣ ಹಾಕಿ: ಬ್ರಿಜೇಶ್ ಚೌಟ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 15:33 IST
Last Updated 1 ಡಿಸೆಂಬರ್ 2025, 15:33 IST
ಬ್ರಿಜೇಶ್ ಚೌಟ
ಬ್ರಿಜೇಶ್ ಚೌಟ   

ನವದೆಹಲಿ: ಭೂತಾನ್, ಮ್ಯಾನ್ಮಾರ್, ಶ್ರೀಲಂಕಾ ಮತ್ತಿತರ ದೇಶಗಳಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಅಡಿಕೆ ಆಮದು ಆಗುತ್ತಿರುವ ಬಗ್ಗೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಕಳವಳ ವ್ಯಕ್ತಪಡಿಸಿದರು. 

ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಸೋಮವಾರ ಈ ವಿಷಯ ಪ್ರಸ್ತಾಪಿಸಿದ ಅವರು, ನೆರೆಯ ಸಣ್ಣ ದೇಶಗಳಿಂದ ಸುಂಕ ಮುಕ್ತ ಅಡಿಕೆ ಆಮದಿನಿಂದಾಗಿ ಕರ್ನಾಟಕವು ಸೇರಿ ನಮ್ಮ ದೇಶದ ಅಡಿಕೆ ಬೆಳೆಗಾರರಿಗೆ ದೊಡ್ಡ ಮಟ್ಟದ ಹೊಡೆತ ಬೀಳುತ್ತಿದೆ ಎಂದು ಗಮನ ಸೆಳೆದರು. 

2023ರ ಸೆಪ್ಟೆಂಬರ್‌ನಿಂದ 2024ರ ಆಗಸ್ಟ್‌ ವರೆಗಿನ ಅವಧಿಯಲ್ಲಿ ಭೂತಾನ್‌ನಿಂದ ಶೇ 57ರಷ್ಟು, ಮ್ಯಾನ್ಮಾರ್‌ನಿಂದ ಶೇ 39ರಷ್ಟು ಹಾಗೂ ಶ್ರೀಲಂಕಾದಿಂದ ಶೇ 2ರಷ್ಟು ಕಳಪೆ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. 

ADVERTISEMENT

ಭಾರತವು ಅಡಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, 2023-24ರ ಅವಧಿಯಲ್ಲಿ ಸುಮಾರು 14 ಲಕ್ಷ ಟನ್‌ ಅಡಿಕೆ ಉತ್ಪಾದಿಸಿದೆ. ಕರ್ನಾಟಕ 10 ಲಕ್ಷ ಟನ್‌ ಅಡಿಕೆ ಉತ್ಪಾದಿಸಿದೆ. ನಮ್ಮ ದೇಶದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಅಡಿಕೆ ಉತ್ಪಾದನೆಯಾಗುತ್ತಿರುವಾಗ, ನೆರೆಯ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಶೂನ್ಯ ಸುಂಕ ಪಾವತಿ ವ್ಯವಸ್ಥೆಯಡಿ ಆಮದು ಮಾಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.