ADVERTISEMENT

ವಿಜಯಲಕ್ಷ್ಮೀಗೆ ಅಶ್ಲೀಲ ಸಂದೇಶ: ಪೆಟ್ರೋಲ್ ಬಂಕ್ ಮ್ಯಾನೇಜರ್, ಲೆಕ್ಕಪರಿಶೋಧಕ ಸೆರೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 15:51 IST
Last Updated 4 ಜನವರಿ 2026, 15:51 IST
ವಿಜಯಲಕ್ಷ್ಮಿ
ವಿಜಯಲಕ್ಷ್ಮಿ   

ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಹಾಗೂ ಲೆಕ್ಕಪರಿಶೋಧಕರೊಬ್ಬರನ್ನು ಸೈಬರ್ ಅಪರಾಧ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಹುಬ್ಬಳ್ಳಿಯ ಕೇಶವಪುರ ನಿವಾಸಿ ಪೆಟ್ರೋಲ್ ಬಂಕ್ ಮ್ಯಾನೇಜರ್ ನಾಗರಾಜ್ ಗುಳ್ಳಪ್ಪ ತಳವಾರ ಮತ್ತು ಧಾರವಾಡದ ಯಳವಾಲ ನಿವಾಸಿ ಲೆಕ್ಕಪರಿಶೋಧಕ ಪ್ರಶಾಂತ್ ತಳವಾರ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡ ರಚಿಸಲಾಗಿತ್ತು. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದ್ದು, ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಉಳಿದ 14 ಖಾತೆಗಳ ಕುರಿತು ತನಿಖೆ ಮುಂದುವರಿಸಲಾಗಿದೆ.

ADVERTISEMENT

ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವಿಜಯಲಕ್ಷ್ಮಿ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಡಿ.24ರಂದು ದೂರು ನೀಡಿದ್ದರು. ಇದನ್ನು ಆಧರಿಸಿ ಯೋಗಿ ‘ಕಿಚ್ಚ’, ಮಿ.ಅನಾಥ, ಮಹಿ ‘ಕಿಚ್ಚ’, ವಿರಾಟ್ ‘ಕಿಚ್ಚ’ ಹೆಸರಿನಲ್ಲಿದ್ದ ಖಾತೆ ಸೇರಿದಂತೆ 18 ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ‌

ದೂರು ದಾಖಲಾದ ಮೇಲೆ ಎಚ್ಚೆತ್ತುಕೊಂಡಿದ್ದ ಆರೋಪಿಗಳು, ಪೋಸ್ಟ್​ ಅಳಿಸಿ ಹಾಕಿದ್ದರು. ಆದರೆ, ಐ.ಪಿ ವಿಳಾಸದ ಮೂಲಕ ಆರೋಪಿಗಳ ಮೂಲ ಪತ್ತೆ ಮಾಡಿ, ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.