
ಬೆಂಗಳೂರು: ಸೈಬರ್ ವಂಚನೆಗೆ ಒಳಗಾದವರ ನೆರವಿಗೆಂದು ‘ರಾಷ್ಟ್ರೀಯ ಸೈಬರ್ ಸಹಾಯವಾಣಿ’ (ಎನ್‌ಸಿಆರ್‌ಪಿ) ಸ್ಥಾಪಿಸಿ ನಾಲ್ಕು ವರ್ಷ ಕಳೆದಿದ್ದರೂ ‘ಗೋಲ್ಡನ್ ಅವರ್’ನಲ್ಲಿ (ಕೃತ್ಯ ನಡೆದ ಒಂದು ತಾಸಿನ ಒಳಗಾಗಿ) ಸಹಾಯವಾಣಿ (1930)ಗೆ ಕರೆ ಮಾಡಿ ವಂಚನೆಯ ಬಗ್ಗೆ ಮಾಹಿತಿ ನೀಡುತ್ತಿರುವವರ ಸಂಖ್ಯೆ ತೀರಾ ಕಡಿಮೆ.
ಈ ವರ್ಷವೂ ಸಾವಿರಾರು ಮಂದಿ ಸೈಬರ್ ವಂಚಕರ ಬಲೆಗೆ ಬಿದ್ದು, ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದರೂ ಸಹಾಯವಾಣಿಗೆ ಕರೆ ಮಾಡಿ ನೆರವು ಕೋರಿದವರ ಸಂಖ್ಯೆ ಬರೀ ಶೇಕಡ 14.36.
ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ 2021ರಲ್ಲಿ ಪ್ರತ್ಯೇಕವಾಗಿ ‘ಸೈಬರ್ ಕ್ರೈಂ ಸಹಾಯವಾಣಿ ’ ಸ್ಥಾಪಿಸಲಾಗಿತ್ತು. ಆರಂಭಿಕ ವರ್ಷದಲ್ಲಿ ಶೇ7.08 ಮಂದಿ ಕರೆ ಮಾಡಿ ವಂಚನೆಯ ಬಗ್ಗೆ ಮಾಹಿತಿ ನೀಡಿದ್ದರು. 2023ರಲ್ಲಿ ಕರೆ ಮಾಡಿದವರ ಸಂಖ್ಯೆ ಶೇ 11.7ಕ್ಕೆ ಏರಿಕೆ ಆಗಿತ್ತು. ಅದೇ 2024ರಲ್ಲಿ ಶೇ 9.43 ಮಂದಿಯಷ್ಟೇ ಕರೆ ಮಾಡಿ ಅಳಲು ತೋಡಿಕೊಂಡಿದ್ದರು.
‘ಕೃತ್ಯ ನಡೆದ ಒಂದು ತಾಸಿನ ಒಳಗಾಗಿ ಕರೆ ಮಾಡಿ ಮಾಹಿತಿ ನೀಡದ ಕಾರಣಕ್ಕೆ ವಂಚನೆಗೆ ಒಳಗಾದವರಿಗೆ ಹಣವನ್ನು ಮರಳಿ ಕೊಡಿಸಲು ಸಾಧ್ಯವಾಗುತ್ತಿಲ್ಲ. ವಂಚನೆಯಾದ ಕೆಲವೇ ನಿಮಿಷಗಳಲ್ಲಿ ಈ ಸಂಖ್ಯೆಗೆ ಮಾಹಿತಿ ನೀಡಿದರೆ ವರ್ಗಾವಣೆಯಾದ ಹಣವನ್ನು ಬ್ಯಾಂಕ್ ಖಾತೆಗಳಲ್ಲೇ ತಡೆ ಹಿಡಿಯಲು ಸಾಧ್ಯವಾಗಲಿದೆ. ‘ಡಿಜಿಟಲ್ ಅರೆಸ್ಟ್’, ಹೂಡಿಕೆ, ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಅಥವಾ ಅಪರಿಚಿತರಿಗೆ ಒಟಿಪಿ ನೀಡಿ ವಂಚನೆಗೆ ಒಳಗಾದವರು ತಕ್ಷಣವೇ ಮಾಹಿತಿ ನೀಡುತ್ತಿಲ್ಲ. ಭಯದ ಕಾರಣದಿಂದ ಸೈಬರ್ ಸಹಾಯವಾಣಿ ಹಾಗೂ ಹತ್ತಿರದ ಠಾಣೆಗೆ ಮಾಹಿತಿ ನೀಡಲು ಜನರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಚಿಕ್ಕಬಳ್ಳಾಪುರದ ಸಂಸದ ಡಾ.ಕೆ.ಸುಧಾಕರ್ ಅವರ ಪತ್ನಿ, ವೈದ್ಯೆ ಪ್ರೀತಿ ಅವರಿಗೆ ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿ ₹14 ಲಕ್ಷ ದೋಚಿದ್ದರು. ವಂಚನೆಗೊಳಗಾದ ಒಂದು ಗಂಟೆಯೊಳಗೇ ಸಹಾಯವಾಣಿಯಲ್ಲಿ ಪ್ರೀತಿ ಅವರು ದೂರು ದಾಖಲಿಸಿದ್ದರು. ಸಕಾಲದಲ್ಲಿ ಅವರು ದೂರು ದಾಖಲಿಸಿದ ಪರಿಣಾಮ ತ್ವರಿತವಾಗಿ ತನಿಖೆ ಸಾಧ್ಯವಾಗಿತ್ತು. ವರ್ಗಾವಣೆಯಾದ ಬ್ಯಾಂಕ್ ಖಾತೆಯಲ್ಲಿದ್ದ ಹಣದ ವಹಿವಾಟು ಸ್ಥಗಿತ (ಫ್ರೀಜ್) ಮಾಡಿಸಿದ್ದೆವು. ಬಳಿಕ ಅಷ್ಟೂ ಹಣವನ್ನು ಪ್ರೀತಿ ಅವರ ಖಾತೆಗೆ ಮರು ವರ್ಗಾವಣೆ ಮಾಡಿಸಲಾಗಿತ್ತು’ ಎಂದು ಮೂಲಗಳು ಹೇಳಿವೆ.
2024ರಲ್ಲಿ ಪ್ರತಿದಿನ ಸರಾಸರಿ 2,950 ಕರೆಗಳನ್ನು ಸ್ವೀಕರಿಸಲಾಗಿತ್ತು. ಕರೆಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕರೆ ಸ್ಥಗಿತ ಸಮಸ್ಯೆ ಉಂಟಾಗಿತ್ತು. ಇದರಿಂದಾಗಿ 1,400 ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಇದೀಗ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಐವಿಆರ್ ವ್ಯವಸ್ಥೆಯ ಮೂಲಕ ಕರೆ ವರ್ಗೀಕರಿಸಲಾಗುತ್ತಿದೆ. ಈ ವರ್ಷ ನಿತ್ಯ 4,700 ಕರೆಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 2,560 ಹಣಕಾಸಿಗೆ ಸಂಬಂಧಿಸಿದ್ದರೆ, ಉಳಿದ ಕರೆಗಳು ದೂರು ಸ್ಥಿತಿ ಕರೆಗಳಾಗಿದ್ದವು.
ಇತರೆ ಅಪರಾಧದ ಕರೆಗಳು ಹೆಚ್ಚು: ಸೈಬರ್ ಅಪರಾಧ ಹೊರತುಪಡಿಸಿದರೆ ರಾಜ್ಯದಲ್ಲಿ ಇತರೆ ಅಪರಾಧಗಳ ಕುರಿತು ಸಹಾಯವಾಣಿ 112ಕ್ಕೆ ಬರುತ್ತಿರುವ ಕರೆಗಳ ಸಂಖ್ಯೆ ಹೆಚ್ಚಾಗಿವೆ. 112 ಮೂಲಕ ಪ್ರತಿದಿನ 24 ಸಾವಿರ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಇವುಗಳ ಪೈಕಿ 1,450 ಸೇವಾ ಕರೆಗಳೇ ಆಗಿವೆ. ಕರೆ ಬಂದ ಬಳಿಕ ಗ್ರಾಮಾಂತರ ಪ್ರದೇಶದಲ್ಲಿ 15 ನಿಮಿಷ ಹಾಗೂ ನಗರ ಪ್ರದೇಶದಲ್ಲಿ 7 ನಿಮಿಷದಲ್ಲಿ ಸ್ಥಳಕ್ಕೆ ತೆರಳಿ ಸ್ಪಂದಿಸಲಾಗುತ್ತಿದೆ.
ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ, ಗಲಾಟೆ, ದಿಢೀರ್ ಪ್ರತಿಭಟನೆಗೆ ಸಂಬಂಧಿಸಿದಂತೆ ಈ ವರ್ಷ 1.48 ಲಕ್ಷ ಕರೆಗಳು (ಶೇ 67.49) ಬಂದಿದ್ದವು. ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ 16,345 (ಶೇ 7.41) ಕರೆಗಳು ಬಂದಿವೆ. ಅಪಘಾತಕ್ಕೆ ಸಂಬಂಧಿಸಿದಂತೆ 12,073 (ಶೇ 5.47) ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಸೈಬರ್ ವಂಚನೆಗೆ ಒಳಗಾದವರು ಗಾಬರಿಗೊಂಡು ಸಮಯ ವ್ಯರ್ಥ ಮಾಡದೇ ಸಹಾಯವಾಣಿಗೆ ಕರೆ ಮಾಡಬೇಕು. ವಿಳಂಬ ಮಾಡಿದರೆ ತನಿಖೆಗೆ ಅಡ್ಡಿ ಆಗಲಿದೆ. ಹಣವು ಬೇರೆ ಬೇರೆ ನಕಲಿ ಖಾತೆಗಳಿಗೆ ವರ್ಗಾವಣೆಗೊಂಡು ಮೂಲ ಪತ್ತೆಯೇ ಕಷ್ಟವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ವಂಚನೆಗೆ ಒಳಗಾದವರು ದೂರಿನ ಮಾಹಿತಿಯನ್ನು ತಮ್ಮ ಮೊಬೈಲ್ ಫೋನ್‌ಗಳ ಮೂಲಕವೇ ನೀಡುವಂತಹ ‘ವೆಬ್‌ಬಾಟ್’ ವ್ಯವಸ್ಥೆ ಜಾರಿಗೆ ತರಲಾಗಿದೆ. ಅವರು ಕನ್ನಡದಲ್ಲಿಯೇ ಮಾಹಿತಿ ನೀಡಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.