ADVERTISEMENT

ಡಿ. ಫಾರ್ಮ: ‘ಪರೀಕ್ಷಾ ಅಕ್ರಮ’ಕ್ಕೆ ದಾರಿ?

ಒಂದೇ ದಿನಾಂಕ ನಮೂದಿಸಿ ಮೂರು ಅಧಿಸೂಚನೆ * ಪರೀಕ್ಷಾ ಕೇಂದ್ರಕ್ಕೆ ಹಂಚಿಕೆ ಮಾಡಿದ್ದ ಕಾಲೇಜು ಅದಲು ಬದಲು

ರಾಜೇಶ್ ರೈ ಚಟ್ಲ
Published 15 ಜನವರಿ 2025, 0:30 IST
Last Updated 15 ಜನವರಿ 2025, 0:30 IST
   

ಬೆಂಗಳೂರು: ಡಿ. ಫಾರ್ಮ ಪರೀಕ್ಷಾ ಪ್ರಾಧಿಕಾರ ಮಂಡಳಿಯು ಒಂದೇ ದಿನಾಂಕ ನಮೂದಿಸಿ ಹೊರಡಿಸಿರುವ ಮೂರು ಪ್ರತ್ಯೇಕ ಅಧಿಸೂಚನೆಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ 100ಕ್ಕೂ ಹೆಚ್ಚು ಡಿಪ್ಲೊಮಾ ಇನ್ ಫಾರ್ಮಸಿ (ಡಿ. ಫಾರ್ಮ) ಕಾಲೇಜುಗಳನ್ನು ಮರುಹಂಚಿಕೆ ಮಾಡಿರುವುದು ಅಕ್ರಮಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ಹೊಂದಿದೆ ಎಂಬ ಆರೋಪ ಎದುರಾಗಿದೆ.

ರಾಜ್ಯದ ವಿವಿಧ ಕಡೆ ಬುಧವಾರದಿಂದ (ಜ. 15) ಡಿ. ಫಾರ್ಮ ಪರೀಕ್ಷೆಗಳು ಆರಂಭವಾಗಲಿವೆ. ಮಂಡಳಿಯು ಜ. 7ರಂದು ಪರೀಕ್ಷಾ ಕೇಂದ್ರಗಳಿಗೆ ಕಾಲೇಜುಗಳನ್ನು ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಅದೇ ದಿನಾಂಕವನ್ನು ನಮೂದಿಸಿ ಜ. 9 ಮತ್ತು 10ರಂದು ಅಧಿಸೂಚನೆಗಳನ್ನು ಹೊರಡಿಸಿರುವ ಮಂಡಳಿಯು, ಅದಾಗಲೇ ಪರೀಕ್ಷಾ ಕೇಂದ್ರಗಳಿಗೆ ಹಂಚಿಕೆ ಮಾಡಿದ್ದ ಕಾಲೇಜುಗಳನ್ನು ಅದಲುಬದಲು ಮಾಡಿದೆ. ಕಾಲೇಜುಗಳ ಮರು ಹಂಚಿಕೆ ಕುರಿತು ಇ–ಮೇಲ್‌ ಮೂಲಕ ಆಯಾ ಡಿ. ಫಾರ್ಮಸಿ ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ.

ಯಾವುದೇ ಕಾರಣ ನೀಡದೆ ಕಾಲೇಜುಗಳ ಮರು ಹಂಚಿಕೆ ಮಾಡಿರುವ ಮಂಡಳಿಯ ನಡೆಯು ಸಂದೇಹಗಳಿಗೆ ಕಾರಣವಾಗಿದೆ. ಅಲ್ಲದೆ, ಕಾಲೇಜುಗಳ ಬೇಡಿಕೆಯಂತೆ ಈ ರೀತಿ ಅದಲುಬದಲು ಮಾಡಲಾಗಿದ್ದು, ಇದಕ್ಕೆ ಪ್ರತಿ ಕಾಲೇಜನಿಂದ ₹2 ಲಕ್ಷದಿಂದ ₹4 ಲಕ್ಷದವರೆಗೆ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ರಾಜ್ಯದಾದ್ಯಂತ ಒಟ್ಟು 91 ಫಾರ್ಮಸಿ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಮಾಡಿ, ಸುತ್ತಮುತ್ತಲಿನ ಕಾಲೇಜುಗಳನ್ನು ಈ ಕೇಂದ್ರಗಳಿಗೆ ಮಂಡಳಿಯು ಹಂಚಿಕೆ ಮಾಡಿತ್ತು. ನಂತರ ಹೊರಡಿಸಿದ ಪ್ರತ್ಯೇಕ ಅಧಿಸೂಚನೆಗಳಲ್ಲಿ ಅಕ್ಕಪಕ್ಕದ ಪರೀಕ್ಷಾ ಕೇಂದ್ರಗಳಿಗೇ ಕಾಲೇಜುಗಳನ್ನು ಮರು ಹಂಚಿಕೆ ಮಾಡಿದೆ. ಕಲಬುರಗಿ, ಬೆಂಗಳೂರು ಮತ್ತು ಬೀದರ್‌ ಭಾಗದ ಬಹುತೇಕ ಕಾಲೇಜುಗಳನ್ನು ಈ ರೀತಿ ಮರು ಹಂಚಿಕೆ ಮಾಡಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

‘ಈಗಾಗಲೇ ಆರೋಪ ಎದುರಿಸುತ್ತಿರುವ ನರ್ಸಿಂಗ್ ಕಾಲೇಜುಗಳಿಗೆ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿದೆ. ಇದನ್ನು ನೋಡಿದರೆ, ಡಿ. ಫಾರ್ಮ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆಸುವ ಸಲುವಾಗಿಯೇ ಖಾಸಗಿ ಕಾಲೇಜುಗಳೊಂದಿಗೆ ಮಂಡಳಿಯ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯಿದೆ’ ಎಂದು ಆರೋಪಿಸಿ ಎನ್‌. ಮಂಜುನಾಥ್‌ ಎಂಬುವವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಔಷಧ ನಿಯಂತ್ರಣ ಇಲಾಖೆಯ ಆಯುಕ್ತರಿಗೆ ಮತ್ತು ಔಷಧ ನಿಯಂತ್ರಕರಿಗೆ ದೂರು ನೀಡಿದ್ದಾರೆ.

‘ಪರೀಕ್ಷಾ ಕೇಂದ್ರಗಳನ್ನು ನಿರ್ಧರಿಸಿ, ಅವುಗಳಿಗೆ ಫಾರ್ಮಸಿ ಕಾಲೇಜುಗಳನ್ನು ಹಂಚಿಕೆ ಮಾಡುವುದೇ ದಂಧೆಯಾಗಿದೆ. ಪ್ರಾಧ್ಯಾಪಕರು ಇಲ್ಲದ, ಪ್ರಯೋಗಾಲಯವೂ ಸೇರಿದಂತೆ ಯಾವುದೇ ಮೂಲಸೌಲಭ್ಯಗಳಿಲ್ಲದ ಕಾಲೇಜುಗಳಿಂದ ಹಣ ಪಡೆದು ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿದೆ. ಒಂದೇ ದಿನಾಂಕ ನಮೂದಿಸಿ ಪರೀಕ್ಷಾ ಪ್ರಾಧಿಕಾರದ ಮಂಡಳಿಯು ಹೊರಡಿಸಿರುವ ಪ್ರತ್ಯೇಕ ಅಧಿಸೂಚನೆಗಳನ್ನು ನೋಡಿದರೆ ಫಾರ್ಮಸಿ ಕಾಲೇಜುಗಳ ಮರುಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವ ಸಂಶಯ ಮೂಡಿದೆ. ಮಂಡಳಿಯ ಈ ನಡೆಯ ಬಗ್ಗೆ ತನಿಖೆ ನಡೆಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಅಕ್ರಮ ನಡೆಸಿದ ಕಾಲೇಜಿಗೆ ಮತ್ತೆ ಪರೀಕ್ಷಾ ಕೇಂದ್ರ

ತುಮಕೂರು ಜಿಲ್ಲೆಯ ಕೊರಟಗೆರೆಯ ಪ್ರಿಯದರ್ಶಿನಿ ಕಾಲೇಜ್ ಆಫ್ ಫಾರ್ಮಸಿ ಪರೀಕ್ಷಾ ಕೇಂದ್ರದಲ್ಲಿ 2023ರ ಜನವರಿಯಲ್ಲಿ ನಡೆದ ಡಿ. ಫಾರ್ಮ ವಾರ್ಷಿಕ ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಮೌಲ್ಯಮಾಪನ ವೇಳೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಸಮಿತಿಯು, ಈ ಕಾಲೇಜ್ ಅನ್ನು ಪರೀಕ್ಷಾ ಕೇಂದ್ರವಾಗಿಸದಂತೆ ಸೂಚನೆ ನೀಡಿತ್ತು. ಆದರೆ, ಅದೇ ಕಾಲೇಜಿಗೆ ಈ ಬಾರಿಯೂ ಪರೀಕ್ಷಾ ಕೇಂದ್ರ ನೀಡಲಾಗಿದೆ. ಅಲ್ಲದೆ, ಯಾವುದೇ ಮೂಲಸೌಲಭ್ಯಗಳು ಇಲ್ಲದ ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ನಡೆಸಬಾರದು ಎಂದು ಪರಿಶೀಲನಾ ಸಮಿತಿ ವರದಿ ನೀಡಿತ್ತು. ಆದರೂ ಬೀದರ್, ತಿಪಟೂರು, ಗದಗ, ಯಾದಗಿರಿ, ಕೂಡ್ಲಗಿ ಫಾರ್ಮಸಿ ಕಾಲೇಜುಗಳಲ್ಲಿ 2024ರ ಜನವರಿಯಲ್ಲಿ ಡಿ. ಫಾರ್ಮ ಪರೀಕ್ಷೆ ನಡೆದಿತ್ತು. ಇಂತಹ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಿದ ಮಂಡಳಿ ಮಂಡಳಿಯ ನಡೆಗೂ ತೀವ್ರ ವಿರೋಧ ವ್ಯಕ್ತವಾಗಿತ್ತು.

‘ನಾನು ಮಾತನಾಡಲ್ಲ, ನನಗೇನೂ ಗೊತ್ತಿಲ್ಲ’

ಒಂದೇ ದಿನಾಂಕ ನಮೂದಿಸಿ ಮೂರು ಅಧಿಸೂಚನೆಗಳನ್ನು ಹೊರಡಿಸಿರುವ ಕುರಿತು ಪ್ರತಿಕ್ರಿಯಿಸಲು ಪರೀಕ್ಷಾ ಪ್ರಾಧಿಕಾರದ ಮಂಡಳಿ (ಡಿ. ಫಾರ್ಮ) ಸದಸ್ಯ ಕಾರ್ಯದರ್ಶಿ ನಜೀರ್ ಅಹಮದ್ ಅವರು ನಿರಾಕರಿಸಿದರು. ಪರೀಕ್ಷಾ ಕೇಂದ್ರಗಳಿಗೆ ಕಾಲೇಜುಗಳ ಮರು ಹಂಚಿಕೆಯ ಕುರಿತು ಪ್ರಶ್ನಿಸುತ್ತಿದ್ದಂತೆ, ಉತ್ತರಿಸಲು ತಡವರಿಸಿದ ಅವರು, ಈ ವಿಷಯಕ್ಕೂ ಅವರಿಗೂ ಸಂಬಂಧವೇ ಇಲ್ಲದಂತೆ ಪ್ರತಿಕ್ರಿಯಿಸಿದರು.

‘ನಾನು ಮಾತನಾಡಲ್ಲ, ನನಗೇನೂ ಗೊತ್ತಿಲ್ಲ. ನಾನು ಪರೀಕ್ಷಾ ಕೆಲಸದಲ್ಲಿ ನಿರತನಾಗಿದ್ದೇನೆ. ಆಯುಕ್ತರ ಬಳಿ ಈ ಬಗ್ಗೆ ಮಾತನಾಡಿ’ ಎನ್ನುತ್ತಲೇ ಕರೆ ಕಡಿತಗೊಳಿಸಿದರು. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್‌ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.