ಮೈಸೂರು: ಸಾಹಿತಿ ಬಾನು ಮುಷ್ತಾಕ್ ಅವರನ್ನು ದಸರಾ ಉತ್ಸವ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಆಹ್ವಾನಿಸಿದ್ದನ್ನು ಸಮರ್ಥಿಸಿ ದಲಿತ ಮಹಾ ಸಭಾ ಮಂಗಳವಾರ ಕೈಗೊಂಡಿದ್ದ ‘ಚಾಮುಂಡಿ ಬೆಟ್ಟ ಚಲೋ’ ವಿಫಲವಾಯಿತು.
ಪ್ರತಿಭಟನೆ ಹಿನ್ನಲೆಯಲ್ಲಿ ಬಿಗಿ ಭದ್ರತೆ ವಹಿಸಲಾಗಿತು. ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೆಟ್ಟಕ್ಕೆ ಪಾದಯಾತ್ರೆ ನಡೆಸಲು ಎರಡೂ ಸಂಘಟನೆಗಳಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ.
ಪ್ರತಿಭಟನೆಗೆ ಮುಂದಾಗಿ ಚಾಮುಂಡಿ ಬೆಟ್ಟದ ಪಾದದ ಬಳಿಗೆ ಬಂದವರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಸಿಎಆರ್ ಮೈದಾನ ಹಾಗೂ ಆಲನಹಳ್ಳಿ ಠಾಣೆಗೆ ಕರೆದೊಯ್ದರು.
ಕಾರ್ಯಕರ್ತರೊಂದಿಗೆ ಬಂದ ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಮುಖಂಡರಾದ ಸಂದೇಶ್ ಸ್ವಾಮಿ, ಪ್ರತಾಪ ಸಿಂಹ, ಶಿವಕುಮಾರ್ ಅವರನ್ನು ಪೊಲೀಸರು ತಡೆದರು. ಈ ಹಂತದಲ್ಲಿ ಪೊಲೀಸರ ಜೊತೆಗೆ ವಾಗ್ವಾದ ನಡೆಯಿತು.
ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಠಾಣೆಯಲ್ಲಿಯೂ ಭಜನೆಯನ್ನು ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ತಮಗೆ ಮಧ್ಯಾಹ್ನ ಊಟ ನೀಡಲಿಲ್ಲ ಎಂದು ಪ್ರತಿಭಟಿಸಿದರು.
ದಲಿತ ಮಹಾ ಸಭಾ ಕರೆ ನೀಡಿದ್ದ ‘ಚಾಮುಂಡಿ ನಡಿಗೆ’ಗೆ ಬಂದಿದ್ದವರನ್ನೂ ಪೊಲೀಸರು ವಾಪಸು ಕಳಿಸಿದರು. ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಎಸ್.ರಾಜೇಶ್ ಅವರನ್ನು ವೃತ್ತದ ಬಳಿ ವಶಕ್ಕೆ ಪಡೆದರು. ನಂತರ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದ ತಂಡವೂ ಬಂದು ಜಾಥಾಗೆ ಅವಕಾಶ ಸಿಗದೆ ವಾಪಸಾಯಿತು.
ಪ್ರತಿಭಟನಕಾರರನ್ನು ತಡೆಯಲು ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ತಾವರೆಕೆರೆಯಲ್ಲಿ ಐನೂರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರ ಪೊಲೀಸ್, ನಗರ ಸಶಸ್ತ್ರ ಪಡೆ, ಕಮಾಂಡೊ ದಳ, ಚಾಮುಂಡಿ ಪಡೆಯ ಸಿಬ್ಬಂದಿ ಬೆಳಿಗ್ಗೆ 7 ರಿಂದ ದಿನವಿಡೀ ಭದ್ರತೆಯನ್ನು ಒದಗಿಸಿದರು.
ಬೆಟ್ಟಕ್ಕೆ ಹಾಗೂ ಕುರುಬಾರಹಳ್ಳಿ ವೃತ್ತಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಚಾಮುಂಡಿ ಬೆಟ್ಟಕ್ಕೆ ತೆರಳಲು ಸಂಜೆ ಬಳಿಕವಷ್ಟೇ ಭಕ್ತರಿಗೆ ಅವಕಾಶ ದೊರಕಿತು.
ಭಕ್ತರಿಗೂ ತಟ್ಟಿದ ಬಿಸಿ -ಕಣ್ಣೀರಿಟ್ಟ ಗೃಹಿಣಿ
ಪ್ರತಿಭಟನನಿರತರನ್ನು ತಡೆಯುವ ಭರದಲ್ಲಿ ಪೊಲೀಸರು, ಹೊರಗಿನಿಂದ ಬಂದಿದ್ದ ಭಕ್ತರಿಗೂ ಬೆಟ್ಟಕ್ಕೆ ತೆರಳಲು ಅವಕಾಶ ನೀಡದಿದ್ದುದು ಜನಾಕ್ರೋಶಕ್ಕೆ ದಾರಿ ಮಾಡಿತ್ತು.
ಪೂಜೆ ಸಲ್ಲಿಸಲು ಬೆಟ್ಟಕ್ಕೆ ತೆರಳುತ್ತಿದ್ದ ತಮ್ಮನ್ನು ತಡೆದರು ಎಂದು ಭಕ್ತೆಯೊಬ್ಬರು ಮಹಿಳಾ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಪತಿ ಜೊತೆ ಬಂದಿದ್ದೇನೆ, ದೇವಸ್ಥಾನಕ್ಕೆ ಏಕೆ ಬಿಡುತ್ತಿಲ್ಲ’ ಎಂದು ಪ್ರಶ್ನಿಸಿದರು. ಆಗ ಡಿಸಿಪಿ ಬಿಂದುರಾಣಿ ಹಾಗೂ ಸಿಬ್ಬಂದಿ ಅವರ ವಿಚಾರಣೆ ನಡೆಸದೇ ಪೊಲೀಸ್ ವಾಹನಕ್ಕೆ ಹತ್ತಿಸಲು ಯತ್ನಿಸಿದರು. ನೂಕುನುಗ್ಗಲಿಗೆ ಬೇಸತ್ತ ಮಹಿಳೆ, ‘ಸಂದರ್ಶನಕ್ಕೆ ತೆರಳಿರುವ ಮಗಳಿಗೆ ಒಳಿತು ಕೋರಿ ದೇಗುಲಕ್ಕೆ ಬಂದರೆ ಜೈಲಿಗೆ ಕಳಿಸುತ್ತಿದ್ದೀರಾ’ ಎಂದು ಕಣ್ಣೀರು ಹಾಕಿದರು. ನಂತರ ಪತಿಯ ಜೊತೆಗೂಡಿ ದೇಗುಲಕ್ಕೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.