ADVERTISEMENT

ಮೂರು ಡಿಸಿಎಂ | ಹೈಕಮಾಂಡ್‌ ಮೇಲೆ ಒತ್ತಡವಿದೆ: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 13:36 IST
Last Updated 22 ಸೆಪ್ಟೆಂಬರ್ 2023, 13:36 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಂಗಳೂರು: ‘ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ನಮ್ಮ ವೈಯಕ್ತಿಕ ಬೇಡಿಕೆಯಲ್ಲ. ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತೆ ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡವಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ನಾನಾಗಲೀ, ಕೆ.ಎನ್‌. ರಾಜಣ್ಣ ಅವರಾಗಲೀ, ಜಿ. ಪರಮೇಶ್ವರ ಅವರಾಗಲೀ ವೈಯಕ್ತಿಕವಾಗಿ ಬೇಡಿಕೆ ಇಟ್ಟಿಲ್ಲ. ಸಮುದಾಯವಾರು ಉಪ ಮುಖ್ಯಮಂತ್ರಿ ಮಾಡಬೇಕೆಂಬ ಒತ್ತಡವಿದೆ. ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಈ ವಿಚಾರದಲ್ಲಿ ನಮ್ಮನ್ನೇನೂ ಕೇಳುವುದಿಲ್ಲ’ ಎಂದರು.

ಬಿಜೆಪಿ ಸರ್ಕಾರದಲ್ಲಿ ಸಮುದಾಯವಾರು ಉಪ ಮುಖ್ಯಮಂತ್ರಿ ಮಾಡಿದ್ದರು. ಕಾಂಗ್ರೆಸ್‌ ಸರ್ಕಾರದಲ್ಲೂ ಹಿಂದೆ ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಉಪ ಮುಖ್ಯಮಂತ್ರಿ ಹುದ್ದೆ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಪರಿಣಾಮ ಬೀರುತ್ತದೆ ಎಂದು ಹೇಳುವುದು ಕಷ್ಟ. ಜನರು ಪಕ್ಷ ನೋಡಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ADVERTISEMENT

‘ನಾನು ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಯಾರಿಗೆ ಆ ಹುದ್ದೆ ನೀಡಬೇಕು ಎಂದು ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ನಮ್ಮ ಬೆಂಬಲಿಗರು ಆಸೆಪಡುತ್ತಾರೆ ಎಂದು ಹುದ್ದೆ ನೀಡಲು ಆಗುವುದಿಲ್ಲ. ಇನ್ನೂ 30 ಮಂದಿಗೆ ಸಚಿವರಾಗುವ ಆಸೆ ಇದೆ. ಅವರಿಗೆ ಅವಕಾಶ ಸಿಕ್ಕಿಲ್ಲ’ ಎಂದರು.

‘ಶಿವಕುಮಾರ್ ಮೆತ್ತಗಾಗ್ತಾರೋ ಇಲ್ಲವೋ ಎಲ್ಲರಿಗೂ ಗೊತ್ತಿದೆ’

‘ಶಿವಕುಮಾರ್‌ ಮೆತ್ತಗಾಗ್ತಾರೋ ಇಲ್ಲವೋ ಎಲ್ಲರಿಗೂ ಗೊತ್ತಿದೆ. 1975ರಿಂದಲೂ ನನ್ನ ಹೋರಾಟ ನೋಡಿದ್ದೀರಿ. ನನ್ನ ರಾಜಕೀಯ ಹಾದಿ ಗೊತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಮೂರು ಡಿಸಿಎಂ ಸೃಷ್ಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ನನ್ನನ್ನು ಉಪ ಮುಖ್ಯಮಂತ್ರಿ ಮಾಡಿದ್ದಾರೆ. ಬೇಕಾದಷ್ಟು ಜನರು ಆಸೆಪಡುತ್ತಾರೆ. ಅವರಿಗೆ ಏನೂ ಹೇಳಲು ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.