
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಸಾಧಕರಿಗೆ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ವನಮಾಲಾ ವಿಶ್ವನಾಥ್, ಎಲ್.ಕೆ.ಅತೀಕ್, ಕ್ರಿಸ್ ಗೋಪಾಲಕೃಷ್ಣನ್, ಎಂ.ಎಸ್.ಶ್ರೀರಾಮ್, ವಿಜಯಲಕ್ಷ್ಮೀ ದೇಶಮಾನೆ ಉಪಸ್ಥಿತರಿದ್ದರು.
-ಪ್ರಜಾವಾಣಿ ಚಿತ್ರ
ಬೆಂಗಳೂರು: ಶುಕ್ರವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 15 ಸಾಧಕರಿಗೆ ‘ಡೆಕ್ಕನ್ ಹೆರಾಲ್ಡ್ (ಡಿಎಚ್) ಚೇಂಜ್‌ಮೇಕರ್ಸ್ 2026’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿಕ್ಷಣ, ರಂಗಭೂಮಿ, ಗ್ರಾಮೀಣಾಭಿವೃದ್ಧಿ, ಕ್ರೀಡೆ, ಆರೋಗ್ಯ, ಸಿನಿಮಾ ಸೇರಿ ವಿವಿಧ ಕ್ಷೇತ್ರಗಳ ಸಾಧಕರು ಡೆಕ್ಕನ್ ಹೆರಾಲ್ಡ್ ಚೇಂಜ್‌ಮೇಕರ್ಸ್ ಎಂಟನೇ ಆವೃತ್ತಿಯ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು ಬೆಳ್ಳಿ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಸಮಸ್ಯೆ, ಸವಾಲುಗಳ ಮೀರಿ ನಿಂತು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಕೆಲಸದ ಬಗ್ಗೆ ಸಾಧಕರು ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡರು. ಎಲೆಮರೆಯ ಕಾಯಿಯಂತೆ ಇದ್ದೂ ಪುರಸ್ಕೃತರಾದವರ ಸಾಧನೆಗೆ ಅವರ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾಕದಂಬ ಆರ್ಟ್ ಸೆಂಟರ್‌ನ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ಸಮಾರಂಭದ ಮೆರುಗು ಹೆಚ್ಚಿಸಿತು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿವೃತ್ತ ನಿರ್ದೇಶಕಿ ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿ, ‘ಬಹಳಷ್ಟು ಜನರು ತಾವಿರುವ ಸ್ಥಳದಲ್ಲಿಯೇ ಅತ್ಯುತ್ತಮ ಕೆಲಸ ಮಾಡುತ್ತಿರುತ್ತಾರೆ. ಇಂತಹವರಿಂದಲೇ ಜಗತ್ತು ಸುಂದರವಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ನಾವು ವೈದ್ಯ ವೃತ್ತಿಯಲ್ಲಿ ಬಡ್ತಿ ಮತ್ತು ಇತರೆ ಸೌಲಭ್ಯ ಬಯಸುತ್ತೇವೆ. ಆದರೆ, ನಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶುಶ್ರೂಷಕರು ಹಾಗೂ ಮತ್ತಿತರರು ದೀರ್ಘಕಾಲ ಕೆಲಸ ಮಾಡಿದರೂ ಬಡ್ತಿ, ಸೌಲಭ್ಯ ಇರುವುದಿಲ್ಲ. ಆದರೂ ತಮ್ಮ ಕೆಲಸವನ್ನು ತತ್ಪರತೆಯಿಂದ ಮಾಡುತ್ತಿದ್ದಾರೆ’ ಎಂಬುದನ್ನು ನೆನಪಿಸಿಕೊಂಡರು.
ಬಿಬಿಸಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಅಧ್ಯಕ್ಷರೂ ಆದ ನಿವೃತ್ತಿ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್, ‘ಬಡ ಕುಟುಂಬದಲ್ಲಿ ಹುಟ್ಟಿ, ಹೊರಗಿನ ಜಗತ್ತಿಗೆ ತೋರಿಸಿಕೊಳ್ಳದಂತೆ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ನೆರೆಹೊರೆಯವರಿಗೂ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ ಮಾಡಿದ್ದಾರೆ. ಕಠಿಣ ಹಾದಿಯಲ್ಲಿ ಸಾಗಿ ಬಂದು ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಸಾಧಕರು, ಮತ್ತೊಬ್ಬರಿಗೆ ಪ್ರೇರಣೆಯಾಗಿದ್ದಾರೆ’ ಎಂದರು.
ತೀರ್ಪುಗಾರರಾದ ಪ್ರಾಧ್ಯಾಪಕ ಎಂ.ಎಸ್.ಶ್ರೀರಾಮ್, ಅನುವಾದಕಿ ವನಮಾಲಾ ವಿಶ್ವನಾಥ್, ಎಲ್.ಕೆ.ಅತೀಕ್, ವಿಜಯಲಕ್ಷ್ಮೀ ದೇಶಮಾನೆ ಅವರೊಂದಿಗೆ ‘ಡೆಕ್ಕನ್ ಹೆರಾಲ್ಡ್’ ಸಹ ಸಂಪಾದಕ ಎಸ್.ಆರ್.ರಾಮಕೃಷ್ಣ, ಸುದ್ದಿ ಸಂಪಾದಕಿ ಅನಿತಾ ಪೈಲೂರು ಅವರು ಸಂವಾದ ನಡೆಸಿದರು.
ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಿ, ‘ಸಾಧನೆ ಮೂಲಕ ‘ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್’ ಪ್ರಶಸ್ತಿ ಪಡೆದಿರುವ ಸಾಧಕರು, ಯುವ ಜನರಿಗೆ ಪ್ರೇರಣೆಯಾಗಿದ್ದಾರೆ. ಸವಾಲು, ಸಮಸ್ಯೆಗಳ ನಡುವೆಯೂ ತಮ್ಮ ಕೆಲಸವನ್ನು ಮುಂದುವರೆಸಿ, ಯಶಸ್ಸು ಸಾಧಿಸಬೇಕು’ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್ ಕುಮಾರ್, ನಿರ್ದೇಶಕರಾದ ಕೆ.ಎನ್. ಶಾಂತಕುಮಾರ್, ಚೈತನ್ಯ ನೆಟ್ಟಕಲ್ಲಪ್ಪ, ಸೌಭಾಗ್ಯಲಕ್ಷ್ಮಿ ಕೆ.ಟಿ, ‘ಡೆಕ್ಕನ್ ಹೆರಾಲ್ಡ್’ ಕಾರ್ಯನಿರ್ವಾಹಕ ಸಂಪಾದಕ ಸುಬ್ರಹ್ಮಣ್ಯ, ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಪಾಲ್ಗೊಂಡಿದ್ದರು.
ಅದಿತಿ ಸೌಮ್ಯಾನಾರಾಯಣ್ ಅನುಪಮಾ ಬೆಣಚಿನಮರಡಿ ಕೆ.ಆರ್.ಅರ್ಚನಾ ಆರ್ಶಿಯಾ ಬೋಸ್ ಅರುಂಧತಿ ಮಂಡ್ಯ ರೋಹನ್ ಆರ್.ಸುವರ್ಣ– ತನ್ವಿ ಜಗದೀಶ್ ಭುವನೇಶ್ವರಿ ಕಾಂಬಳೆ ಜಬಿನಾ ಖಾನಂ ಕಾರ್ತಿಕ್ ಸುನಗಾರ್ ಕೆ.ಎಸ್. ಮಧುಸೂದನ್ ನವೀನ್ ತೇಜಸ್ವಿ ಜಿ.ಬೇಬಿ ಸದಾಶಿವ ಹೈದ್ರ ಶಕೀಲ್ ಅಹಮದ್ ಎಸ್.ಆರ್.ಅಯಾನ್
ಕಾಡಿನಿಂದ ನಾಡಿಗೆ ಬಂದು ಶಿಕ್ಷಣ ಕಲಿತ ಪರಿಣಾಮ ಇಂದು ನಮ್ಮ ಸಮುದಾಯ (ಸೋಲಿಗ) ಜನರಿಗೆ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಿದೆ.-ಜಿ.ಬೇಬಿ., ಶುಶ್ರೂಷಕಿ
ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ದೊರಕಬೇಕು. ಹಣವಿದ್ದವರಿಗೆ ಒಂದು ಶಿಕ್ಷಣ ಹಣವಿಲ್ಲದವರಿಗೆ ಒಂದು ಶಿಕ್ಷಣ ದೊರೆಯುತ್ತಿರುವುದು ಸರಿಯಲ್ಲ.-ಕೆ.ಎಸ್.ಮಧುಸೂದನ್, ಶಿಕ್ಷಕ
ನಾವು ಯಾವ ಕೆಲಸವನ್ನು ಶ್ರದ್ಧೆ ಪ್ರಾಮಾಣಿಕವಾಗಿ ಮಾಡುತ್ತೇವೆಯೋ ಅದೇ ನಿಜವಾದ ಕ್ರಾಂತಿ. ಸಾಧಕರು ತಮ್ಮ ಕೆಲಸದ ಮೂಲಕ ಕ್ರಾಂತಿ ಮಾಡಿದ್ದಾರೆ.-ಶಕೀಲ್ ಅಹಮದ್, ಕಲಾವಿದ
ಡಿ.ಎಚ್.ಚೇಂಜ್ ಮೇಕರ್ಸ್ ಪ್ರಶಸ್ತಿ ಬಂದಿದೆ ಎಂದರೆ ನಾನು ಮಾಡುವ ಕೆಲಸ ಸರಿ ಇದೆ ಎಂದರ್ಥ. ಪ್ರಶಸ್ತಿಯು ಸಂತೋಷದ ಜತೆಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ.-ನವೀನ್ ತೇಜಸ್ವಿ, ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.