ಬೆಂಗಳೂರು: ಅರಮನೆ ಮೈದಾನದಲ್ಲಿ ಇದೇ 11ರಿಂದ 14ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್‌ವೆಸ್ಟ್ ಕರ್ನಾಟಕ’ವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ‘ಅಂದು ಸಂಜೆ 4ಕ್ಕೆ ರಾಜನಾಥ್ ಸಿಂಗ್ ಸಮಾವೇಶಕ್ಕೆ ಚಾಲನೆ ನೀಡುವರು. ರಾಜ್ಯಪಾಲ ಥಾವರಚಂದ್ ಗೆಹಲೋತ್, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು ಎಂದರು.
ನಾಲ್ಕು ದಿನಗಳ ಈ ಸಮಾವೇಶದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಪೀಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಅಶ್ವಿನಿ ವೈಷ್ಣವ್ ಭಾಗವಹಿಸುವರು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮಾರೋಪದಲ್ಲಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
2025-30ನೇ ಸಾಲಿನ ನೂತನ ಕೈಗಾರಿಕಾ ನೀತಿ, ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಲು ಏಕಗವಾಕ್ಷಿ ಪೋರ್ಟಲ್ ಬಿಡುಗಡೆ ಮಾಡಲಾಗುವುದು. ಫೆ. 12ರಂದು ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ 14 ಉದ್ಯಮಗಳ ಮುಖ್ಯಸ್ಥರನ್ನು ಪುರಸ್ಕರಿಸಲಾಗುವುದು. 35 ಸಣ್ಣ ಮತ್ತು ಮಧ್ಯಮ ಸ್ತರದ ಕೈಗಾರಿಕೆಗಳು, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಮಹಿಳಾ ಉದ್ಯಮಿಗಳು, ವಲಯವಾರು ಕೈಗಾರಿಕಾ ಉತ್ಕೃಷ್ಟತೆ ಸಾಧಿಸಿರುವ ಉದ್ಯಮಗಳನ್ನು ಫೆ.13ರಂದು ಸನ್ಮಾನಿಸಲಾಗುವುದು. ‘ವೆಂಚುರೈಸ್’ ಉಪಕ್ರಮದಡಿ ಒಟ್ಟು ₹2.63 ಕೋಟಿ ಬಹುಮಾನ ನೀಡಲಾಗುತ್ತಿದೆ ಎಂದರು.
‘19 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿರುವ ಈ ಸಮಾವೇಶದಲ್ಲಿ ಭವಿಷ್ಯದ ತಯಾರಿಕಾ ವಲಯ, ಸಾರಿಗೆ ಮತ್ತು ಪರಿಸರಸ್ನೇಹಿ ಇಂಧನ ಉತ್ಪಾದನೆ ವಲಯಗಳಿಗೆ ವಿಶೇಷ ಗಮನ ಕೊಡಲಾಗುವುದು. 60ಕ್ಕೂ ಹೆಚ್ಚು ನವೋದ್ಯಮ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನ, ಪರಿಹಾರೋಪಾಯಗಳನ್ನು ಪ್ರದರ್ಶಿಸಲಿವೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಮಹೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.