ADVERTISEMENT

ಎಎಪಿ ಸರ್ಕಾರದ ವಿರುದ್ಧದ ಬಿಜೆಪಿ ಆಂದೋಲನದಲ್ಲಿ ಭಾಗವಹಿಸಿ: ಅಣ್ಣಾ ಹಜಾರೆಗೆ ಪತ್ರ

ಏಜೆನ್ಸೀಸ್
Published 25 ಆಗಸ್ಟ್ 2020, 5:33 IST
Last Updated 25 ಆಗಸ್ಟ್ 2020, 5:33 IST
ಅದೇಶ್‌ ಗುಪ್ತಾ, ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್‌
ಅದೇಶ್‌ ಗುಪ್ತಾ, ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್‌    

ದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಲಿರುವ ‘ಬೃಹತ್ ಆಂದೋಲನ’ದಲ್ಲಿ ಭಾಗವಹಿಸುವಂತೆ ಕೋರಿ ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಸೋಮವಾರ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಪತ್ರ ಬರೆದಿದ್ದಾರೆ.

‘ರಾಜಕೀಯ ಪರಿಶುದ್ಧತೆ’ಯನ್ನು ಎಎಪಿ ನೆಲಸಮ ಮಾಡಿದೆ. ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರವನ್ನು ಎಎಪಿ ಆಯೋಜಿಸಿತ್ತು. ಇದರಿಂದ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 200 ಮಂದಿ ಗಾಯಗೊಂಡಿದ್ದಾರೆ,’ ಎಂದು ಆರೋಪಿಸಿ ಅಣ್ಣಾ ಹಜಾರೆ ಅವರಿಗೆ ಬರೆದ ‍ಪತ್ರದಲ್ಲಿ ಅದೇಶ್‌ ಗುಪ್ತ ಉಲ್ಲೇಖಿಸಿದ್ದಾರೆ.

‘ಸ್ವಚ್ಛ ಹಾಗೂ ನ್ಯಾಯಸಮ್ಮತ ರಾಜಕಾರಣ ಮಾಡುವುದಾಗಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವು ರಾಜಕೀಯ ಪರಿಶುದ್ಧತೆಯನ್ನು ಹಾಳುಗೆಡವಿದೆ. ಎಎಪಿ ಯೋಜಿಸಿದ ಕೋಮು ಗಲಭೆಗಳಿಂದಾಗಿ ದೆಹಲಿಯ ಜನರು ನೊಂದಿದ್ದಾರೆ’ ಎಂದು ಪತ್ರದಲ್ಲಿ ಅಣ್ಣಾ ಹಜಾರೆ ಅವರಿಗೆ ತಿಳಿಸಲಾಗಿದೆ.

ADVERTISEMENT

‘ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಭ್ರಷ್ಟಾಚಾರಕ್ಕೆ ಆಮ್ ಆದ್ಮಿ ಪಕ್ಷವು ಮತ್ತೊಂದು ಹೆಸರು. ನಾವು ಅವರ ವಿರುದ್ಧ ನಿರಂತರವಾಗಿ ಹೋರಾಡುತ್ತಿದ್ದೇವೆ. ಆದ್ದರಿಂದ, ಅಣ್ಣಾ ಹಜಾರೆ ದೆಹಲಿಗೆ ಬಂದು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಮತ್ತು ಚಳವಳಿಯಲ್ಲಿ ನಮ್ಮನ್ನು ಬೆಂಬಲಿಸುವಂತೆ ನಾವು ವಿನಂತಿಸುತ್ತೇವೆ. ಎಎಪಿ ಸರ್ಕಾರದ ದ್ರೋಹಕ್ಕೆ ಬಲಿಯಾದ ದೆಹಲಿಯ ಜನರು ಮತ್ತು ಯುವಕರ ಒಳಿತಿಗಾಗಿ ಅಣ್ಣಾ ಹಜಾರೆ ಅವರು ಮತ್ತೊಮ್ಮೆ ಧ್ವನಿ ಎತ್ತಬೇಕಿದೆ,’ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿಯ ಮನವಿಗೆ ಸಂಬಂಧಿಸಿದಂತೆ ಅಣ್ಣಾ ಹಜಾರೆ ಅವರಿಂದ ಈ ವರೆಗೆ ಯಾವುದೇ ಉತ್ತರ ಬಂದಿಲ್ಲ.

2011 ರಲ್ಲಿ ದೆಹಲಿಯ ರಾಮ್‌ಲೀಲಾ ಮೈದಾನದಿಂದ ಅಣ್ಣಾ ಹಜಾರೆ ಪ್ರಾರಂಭಿಸಿದ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಕೇಜ್ರಿವಾಲ್ ಅವರು ಮುಂಚೂಣಿ ನಾಯಕರಾಗಿದ್ದರು. ನಂತರ, ಕೇಜ್ರಿವಾಲ್ ಮತ್ತವರ ಬೆಂಬಲಿಗರು ಸಕ್ರಿಯ ರಾಜಕೀಯಕ್ಕೆ ಹೊರಳಿ ಎಎಪಿ ಪಕ್ಷ ಸ್ಥಾಪಿಸಿದರು. ಇದು ದೆಹಲಿಯಲ್ಲಿ ಮೂರು ಬಾರಿ ಸರ್ಕಾರ ರಚಿಸಿದೆ. ಮತ್ತು ಪಂಜಾಬ್ ವಿಧಾನಸಭೆಯಲ್ಲಿ ಮುಖ್ಯ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.