ಪ್ರಾತಿನಿಧಿಕ ಚಿತ್ರ
ನವದೆಹಲಿ: ‘ಒಳಮೀಸಲಾತಿ ಅನುಷ್ಠಾನದ ಸಂದರ್ಭದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಅಲೆಮಾರಿಗಳಿಗೆ ಘೋರ ಅನ್ಯಾಯ ಮಾಡಿದೆ. ಈ ವಿಷಯದಲ್ಲಿ ಅಲೆಮಾರಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ನ್ಯಾಯ ಕೊಡಿಸುವ ತನಕ ನವದೆಹಲಿ ಬಿಟ್ಟು ಕದಲುವುದಿಲ್ಲ‘ ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಎಚ್ಚರಿಸಿದೆ.
ಕಳೆದ 75 ವರ್ಷಗಳಿಂದ ತುಳಿತಕ್ಕೆ ಒಳಗಾಗಿ ಮೀಸಲಾತಿಯಲ್ಲಿ ಯಾವುದೇ ಲಾಭ ಪಡೆಯದ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ಮಹಾ ಒಕ್ಕೂಟದ ಪದಾಧಿಕಾರಿಗಳು ಕಾಂಗ್ರೆಸ್ ರಾಷ್ಟ್ರೀಯ ನಾಯಕರನ್ನು ಶನಿವಾರ ಇಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಅಕ್ಟೋಬರ್ 2ರಂದು ನಡೆಯಲಿರುವ ‘ದೆಹಲಿ ಚಲೋ‘ ಸಂಬಂಧ ಪೂರ್ವಭಾವಿ ಸಭೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ನೂರ್ ಶ್ರೀಧರ್, ‘ದೆಹಲಿ ಚಲೋದಲ್ಲಿ ಸಾವಿರ ಅಲೆಮಾರಿಗಳು ಪಾಲ್ಗೊಳ್ಳಲಿದ್ದಾರೆ. 250 ಕಲಾವಿದರು ವಿವಿಧ ದೇವರ ವೇಷ ತೊಟ್ಟು ಪ್ರತಿಭಟನೆ ನಡೆಸಲಿದ್ದಾರೆ. ಅವಕಾಶ ಸಿಕ್ಕಿದರೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ನಮ್ಮ ಅಹವಾಲನ್ನು ಹೇಳಿಕೊಳ್ಳುತ್ತೇವೆ. ಸಿಗದಿದ್ದರೆ ಎಐಸಿಸಿ ಕಚೇರಿ ಎದುರು ಧರಣಿ ನಡೆಸುತ್ತೇವೆ. ನ್ಯಾಯ ಸಿಗುವ ತನಕ ಆ ಜಾಗ ಬಿಟ್ಟು ಕದಲುವುದಿಲ್ಲ‘ ಎಂದರು.
ಹಂಪಿ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಎ.ಎಸ್.ಪ್ರಭಾಕರ್, ‘ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ದತ್ತಾಂಶಗಳನ್ನು ಸಂಗ್ರಹಿಸಿ ಮೀಸಲಾತಿಯನ್ನು ಹಂಚುವ ವೈಜ್ಞಾನಿಕ ಮಾದರಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಸರ್ಕಾರವು ಈ ಶಿಫಾರಸುಗಳನ್ನು ತಿರಸ್ಕರಿಸಿದೆ. 49 ಅಲೆಮಾರಿ ಸಮುದಾಯಗಳನ್ನು ಹಾಗೂ 10 ಸೂಕ್ಷ್ಮ ಪರಿಶಿಷ್ಟ ಜಾತಿ ಸಮುದಾಯಗಳನ್ನು ಒಳಗೊಂಡಂತೆ 59 ಸಮುದಾಯಗಳನ್ನು ಸಿ ಗುಂಪಿನ ಬಲಾಢ್ಯ ಸ್ಪೃಶ್ಯ ಗುಂಪಿನ ಜತೆಗೆ ಸೇರಿಸಿದೆ. ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧ. ಇದು ಬಲಾಢ್ಯ ಸಮುದಾಯಗಳನ್ನು ತೃಪ್ತಿಪಡಿಸಲು ಸರ್ಕಾರ ಮಾಡಿರುವ ಘನಘೋರ ರಾಜಕೀಯ ನಿರ್ಧಾರ‘ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.