ADVERTISEMENT

ಅನಂತಕುಮಾರ್ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ: ಗಡುವು ನೀಡಿದ ಹೋರಾಟಗಾರರ ಸಮಿತಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 15:53 IST
Last Updated 23 ಜನವರಿ 2024, 15:53 IST
<div class="paragraphs"><p>ಬೆಂಗಳೂರಿನಲ್ಲಿ ಮಂಗಳವಾರ ಕನ್ನಡಪರ ಹಿರಿಯ ಹೋರಾಟಗಾರರ ಸಮಿತಿ ಆಯೋಜಿಸಿದ್ದ ಖಂಡನಾ ಸಭೆಯಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌ ಮಾತನಾಡಿದರು. ಜಿ. ಜ್ಞಾನೇಶ್‌, ತಲಕಾಡು ಚಿಕ್ಕರಂಗೇಗೌಡ, ಮಾವಳ್ಳಿ ಶಂಕರ್ ಭಾಗವಹಿಸಿದ್ದರು </p></div>

ಬೆಂಗಳೂರಿನಲ್ಲಿ ಮಂಗಳವಾರ ಕನ್ನಡಪರ ಹಿರಿಯ ಹೋರಾಟಗಾರರ ಸಮಿತಿ ಆಯೋಜಿಸಿದ್ದ ಖಂಡನಾ ಸಭೆಯಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌ ಮಾತನಾಡಿದರು. ಜಿ. ಜ್ಞಾನೇಶ್‌, ತಲಕಾಡು ಚಿಕ್ಕರಂಗೇಗೌಡ, ಮಾವಳ್ಳಿ ಶಂಕರ್ ಭಾಗವಹಿಸಿದ್ದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏಕವಚನ ಬಳಸಿ ಟೀಕಿಸಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ ವಿರುದ್ಧ ಎಂಟು ದಿನಗಳ ಒಳಗಾಗಿ ಬಿಜೆಪಿ ಶಿಸ್ತುಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪಕ್ಷದ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಹಿರಿಯ ಕನ್ನಡಪರ ಹೋರಾಟಗಾರರ ಸಮಿತಿ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ, ಕಾರ್ಯದರ್ಶಿ ಜಿ.ಜ್ಞಾನೇಶ್‌ ಹೇಳಿದರು.

ADVERTISEMENT

ಗಾಂಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕರಿಸಿ ಅವರು ಮಾತನಾಡಿದರು. 

ಸಂವಿಧಾವನ್ನೇ ಬದಲಿಸುವ ಹೇಳಿಕೆ ನೀಡಿ ಸಚಿವ ಸ್ಥಾನ ಕಳೆದುಕೊಂಡಿದ್ದ ಅನಂತಕುಮಾರ್ ನಂತರ ಕ್ಷೇತ್ರದಿಂದಲೇ ಮಾಯವಾಗಿದ್ದರು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಜೀವನಪೂರ್ತಿ ಕೋಮುದ್ವೇಷದ ಭಾಷಣ ಮಾಡುತ್ತಾ ಬಂದಿದ್ದು, ಈಗ ಮುಖ್ಯಮಂತ್ರಿಯನ್ನೇ ಏಕವಚನದಲ್ಲಿ ಹೀಗಳೆದಿದ್ದಾರೆ. ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಅನಂತಕುಮಾರ್ ಬೇಷರತ್‌ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಮಾತನಾಡಿ, ಅನಂತಕುಮಾರ್‌ ಹೆಗಡೆ ಮಾತುಗಳನ್ನು ಗಮನಿಸಿದರೆ ಇವರು ಮನುಷ್ಯರಾ ಎಂಬ ಗುಮಾನಿ ಹುಟ್ಟುತ್ತದೆ. ಉತ್ತರ ಕನ್ನಡದ ಪ್ರಜ್ಞಾವಂತ ಮತದಾರರಿಂದ ಆಯ್ಕೆಯಾಗಿರುವ ಅವರು ಆ ಜನರ ಸಂಸ್ಕೃತಿಗೆ ವಿರುದ್ಧವಾದ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ ಎಂದರು.

ಹೋರಾಟಗಾರ ಮಾವಳ್ಳಿ ಶಂಕರ್‌ ಮಾತನಾಡಿ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆ ನಡೆದಾಗ ಮೌನ ವಹಿಸಿದ್ದೇ ಇಂಥವರ ಸಂಖ್ಯೆ ಹೆಚ್ಚಾಗಲು ಕಾರಣ. ಮಹಾರಾಷ್ಟ್ರದಲ್ಲಿ ಸಾಹು ಮಹಾರಾಜರು, ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಮೀಸಲಾತಿ ನೀಡಿದಾಗಲೂ ವಿರೋಧಿಸಿದ್ದವರು, ರಾಜಕುಮಾರ್, ಕುವೆಂಪು ಟೀಕಿಸಿದ್ದ ಅದೇ ಮನೋಸ್ಥಿತಿಯ ಜನರು ಈಗ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದಾರೆ ಎಂದು ದೂರಿದರು.

ಪ್ರಗತಿಪರ ಸಂಘಟನೆಗಳ ಮುಖಂಡರಾದ ರಾಮಚಂದ್ರಪ್ಪ, ಅಭಿಮನ್ಯು ರಮೇಶ್‌, ಬೆಲಗೂರು ಸಮಿವುಲ್ಲಾ, ಜೆ.ಹುಚ್ಚಪ್ಪ, ಎಲ್‌.ಶಿವಶಂಕರ್‌,  ಶೇ.ಭೋ.ರಾಧಾಕೃಷ್ಣ, ರುದ್ರು ಪುನೀತ್‌, ವಿ.ತ್ಯಾಗರಾಜ್ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.