ADVERTISEMENT

ತಾಪಮಾನ ಕುಸಿತ: ಶಾಲಾ ಸಮಯ ಬದಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 14:12 IST
Last Updated 16 ಡಿಸೆಂಬರ್ 2025, 14:12 IST
   

ಬೆಂಗಳೂರು: ‘ರಾಜ್ಯದ ವಿವಿಧೆಡೆ ತಾಪಮಾನ ಕುಸಿಯುತ್ತಿದ್ದು, ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಸುರಕ್ಷತೆ ಗಮನದಲ್ಲಿಟ್ಟುಕೊಂಡು ಚಳಿಗಾಲ ಮುಗಿಯುವವರೆಗೆ ಶಾಲಾ–ಕಾಲೇಜುಗಳನ್ನು ಪ್ರತಿದಿನ ಬೆಳಿಗ್ಗೆ 9.30ರಿಂದ ಪ್ರಾರಂಭಿಸಬೇಕು’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಒತ್ತಾಯಿಸಿದ್ದಾರೆ. 

ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘ರಾಜ್ಯದ 14 ಜಿಲ್ಲೆಗಳಲ್ಲಿ ಶೀತಗಾಳಿ ಕಾಣಿಸಿಕೊಳ್ಳುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಘೋಷಿಸಲಾಗಿದೆ. ಆದ್ದರಿಂದ ಎಲ್‌ಕೆಜಿಯಿಂದ ಪಿಯುಸಿವರೆಗೆ ಪಾಠ–ಪ್ರವಚನಗಳನ್ನು ಬೆಳಿಗ್ಗೆ 9.30ರಿಂದ ಪ್ರಾರಂಭಿಸಬೇಕು’ ಎಂದು ಮನವಿ ಮಾಡಿದ್ದಾರೆ.  

‘ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಗಣನೀಯವಾಗಿ ಕುಸಿಯುತ್ತಿದೆ. ಮಕ್ಕಳು ಬೆಳಿಗ್ಗೆ ಬೇಗನೇ ಶಾಲೆಗೆ ಹೋಗುತ್ತಾರೆ. ಈ ಸಮಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುತ್ತದೆ. ಮಕ್ಕಳ ರಕ್ಷಣೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.