ಮೈಸೂರು: ‘ಟೀಕೆ ಆರೋಗ್ಯಕರವಾಗಿರಬೇಕು. ದ್ವೇಷದ ಪ್ರತಿಕ್ರಿಯೆ ನೀಡುವುದು ಸರಿಯಲ್ಲ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಚಲನಚಿತ್ರ ನಟ ದರ್ಶನ್ ಅಭಿಮಾನಿಗಳು ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಪ್ರತಿಕ್ರಿಯೆ ಹಾಕುತ್ತಿರುವ ಬಗ್ಗೆ ಇಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಇಂದಿನ ಡಿಜಿಟಲ್ ಯುಗದಲ್ಲಿ ಇದನ್ನು ಎಲ್ಲರೂ ಎದುರಿಸಬೇಕು’ ಎಂದರು.
‘ಸಾಮಾಜಿಕ ಜಾಲತಾಣದಲ್ಲಿ ಎಲ್ಲ ರೀತಿಯ ಕಮೆಂಟ್‌ಗಳೂ ಬರುತ್ತವೆ. ಇದಕ್ಕೆ ದೊಡ್ಡದಾದ ಪರಿಹಾರವೇನೂ ಇಲ್ಲ. ಏಕೆಂದರೆ, ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ನಡವಳಿಕೆಗಳು ಬದಲಾಗಬೇಕಷ್ಟೆ. ಈ ನಿಟ್ಟಿನಲ್ಲಿ ವಿದ್ಯಾಭ್ಯಾಸ ಹಾಗೂ ಶಿಕ್ಷಣ ಹೆಚ್ಚಿಸಬೇಕು. ಟೀಕೆಗಳಿದ್ದರೆ ಸರಿಯಾದ ರೀತಿಯಲ್ಲಿ ಮಾಡಬೇಕು’ ಎಂದು ಹೇಳಿದರು.
‘ದರ್ಶನ್ ವಿಚಾರದಲ್ಲಿ ತನಿಖೆ ನಡೆಯುತ್ತಿದೆ. ಸಂಸ್ಥೆಗಳಿಗೆ ತನಿಖೆ ನಡೆಸಲು ಬಿಡಬೇಕು. ನ್ಯಾಯಾಲಯ ಸರಿಯಾದ ಕ್ರಮ ಕೈಗೊಳ್ಳುತ್ತದೆ. ಸಾಕ್ಷಿಗಳ ಆಧಾರದ ಮೇಲೆ ಸರಿಯಾದ ಕ್ರಮ ಆಗುತ್ತದೆ. ತನಿಖಾ ಸಂಸ್ಥೆಗಳಿಗೆ ಎಲ್ಲವನ್ನೂ ಬಿಡಬೇಕು. ಯಾರೂ ಆ ಬಗ್ಗೆ ಧ್ವನಿ ಎತ್ತಬಾರದು, ಹೇಳಿಕೆಗಳನ್ನು ಕೊಡಲೂಬಾರದು’ ಎಂದರು.
‘ಕ್ಷಮೆ ಕೇಳುವುದು ಬಿಡುವುದು ಯತೀಂದ್ರಗೆ ಬಿಟ್ಟಿದ್ದು’
‘ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ’ ಎಂಬ ಹೇಳಿಕೆಯನ್ನು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿರುವ ಬಗ್ಗೆ ನಾಯಕರು, ಜನರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯಾರೇ ಅಧಿಕಾರಕ್ಕೆ ಬಂದರೂ ಅವರವರ ಕೆಲಸ ಮಾಡುತ್ತಾರೆ. ಅವರು ಹೆಚ್ಚು, ಇವರು ಕಡಿಮೆ ಎಂದು ಹೇಳುವುದು ಸರಿಯಲ್ಲ. ಕ್ಷಮೆ ಕೇಳುವುದು ಬಿಡುವುದು ಯತೀಂದ್ರ ಅವರಿಗೆ ಬಿಟ್ಟಿದ್ದು’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.