ADVERTISEMENT

ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಗದ್ಗದಿತರಾದ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 15:49 IST
Last Updated 4 ಫೆಬ್ರುವರಿ 2026, 15:49 IST
ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರನ್ನು ನವದೆಹಲಿಯಲ್ಲಿ ಬುಧವಾರ ಭೇಟಿ ಮಾಡಿದ ಎಚ್.ಡಿ.ದೇವೇಗೌಡ ಅವರು ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು. 
ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರನ್ನು ನವದೆಹಲಿಯಲ್ಲಿ ಬುಧವಾರ ಭೇಟಿ ಮಾಡಿದ ಎಚ್.ಡಿ.ದೇವೇಗೌಡ ಅವರು ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.    

ನವದೆಹಲಿ: ಕರ್ನಾಟಕ ಎದುರಿಸುತ್ತಿರುವ ನೀರಾವರಿ ಬಿಕ್ಕಟ್ಟಿನ ಬಗ್ಗೆ ರಾಜ್ಯಸಭೆಯಲ್ಲಿ ಗದ್ಗದಿತರಾಗಿ ಮಾತನಾಡಿದ ಜೆಡಿಎಸ್ ಸದಸ್ಯ ಎಚ್.ಡಿ. ದೇವೇಗೌಡ, ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ದಯಮಾಡಿ ಪರಿಹರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ರಾಜ್ಯಸಭೆಯಲ್ಲಿ ಬುಧವಾರ ನಡೆದ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾಜಿ ಪ್ರಧಾನಿ ಮಾತನಾಡಿದರು.

ರಾಜ್ಯದ ಅನೇಕ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆ ಎಲ್ಲಾ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಕರ್ನಾಟಕ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಕೈ ಮುಗಿದು ವಿನಂತಿಸಿದರು.

ADVERTISEMENT

ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ರಾಜ್ಯದ ನೀರಾವರಿ ಬಿಕ್ಕಟ್ಟನ್ನು ಎಳೆಎಳೆಯಾಗಿ ಬಿಡಿಸಿಟ್ಟ ಅವರು, ‘ನನ್ನ ರಾಜ್ಯಸಭಾ ಅವಧಿ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ನನ್ನ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಹಿತಕಾಯಿರಿ. ನಾವೆಲ್ಲರೂ ಮನುಷ್ಯರು, ಮಳೆ ಬಿದ್ದರೆ ನೀರು, ಇಲ್ಲವಾದರೆ ಇಲ್ಲ. ಈ ಸದನದ ಎಲ್ಲಾ ಸದಸ್ಯರು ಕರ್ನಾಟಕದ ರಕ್ಷಣೆ ಮಾಡಬೇಕು ಎಂಬುದಾಗಿ ನಾನು ಕೈ ಮುಗಿದು ಬೇಡುತ್ತೇನೆ’ ಎಂದು ಮನವಿ ಮಾಡಿದರು.

ಕರ್ನಾಟಕ ನೆರೆ ರಾಜ್ಯಗಳ ಜತೆ ನೀರಾವರಿ ಹಕ್ಕಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದೆ. ನಾನು ಕೂಡ ನೀರಿಗಾಗಿ 65 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈ ಸದನದಲ್ಲಿ ನಾನು ನ್ಯಾಯಮಂಡಳಿಗಳು ನೀಡಿರುವ ತೀರ್ಪುಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ ಎಂದ ಅವರು,  ಕರ್ನಾಟಕ ರಾಜ್ಯಕ್ಕೆ ನೀರಿನದೇ ಬಹುದೊಡ್ಡ ಬಿಕ್ಕಟ್ಟಾಗಿದೆ. ಒಂದೆಡೆ ತಮಿಳುನಾಡು, ಮತ್ತೊಂದೆಡೆಯಲ್ಲಿ ಆಂಧ್ರ ಪ್ರದೇಶ, ಇನ್ನೊಂದು ಕಡೆಯಲ್ಲಿ ಗೋವಾದಿಂದ ತೊಂದರೆ ಎದುರಿಸುತ್ತಿದೆ. ನಾನು ಜೀವನದ ಕೊನೆಕಾಲದಲ್ಲಿ ಇದ್ದೇನೆ. ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ‘ ಎಂದು ಕೋರಿದರು. 

ನರೇಂದ್ರ ಮೋದಿ ಅವರ ಸರ್ಕಾರ ಈ ಬಿಕ್ಕಟ್ಟಿಗೆ ಪರಿಹಾರ ನೀಡಬೇಕು. ನಾನು ನಿಮ್ಮ (ಎನ್‌ಡಿಎ) ಜತೆಯಲ್ಲಿಯೇ ಇರುತ್ತೇನೆ. ನನ್ನ ಮಗ ನಿಮ್ಮ ಸಂಪುಟದಲ್ಲಿ ಇದ್ದಾನೆ. ನಾವು ಮುಂದೆಯೂ ನಿಮ್ಮ ಜತೆಗೇ ಇರುತ್ತೇವೆ ಹಾಗೂ ಮೈತ್ರಿಕೂಟ ಬದಲಾವಣೆ ಮಾಡುವ ಯಾವ ಪ್ರಶ್ನೆಯೂ ಇಲ್ಲ. ರಾಜ್ಯದ ಜನರಿಗೆ ನ್ಯಾಯ ಒದಗಿಸಿ ಎಂಬುದಷ್ಟೇ ನನ್ನ ಏಕೈಕ ಮನವಿ ಎಂದು ದೇವೇಗೌಡರು ಕೋರಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.