ADVERTISEMENT

ಯಾರೂ ಎದೆಗುಂದಬೇಕಿಲ್ಲ, ಜಿಲ್ಲೆ,ತಾಲ್ಲೂಕು ಮಟ್ಟದಲ್ಲಿ ಪಕ್ಷ ಸಂಘಟಿಸೋಣ: ಎಚ್‌ಡಿಡಿ

ಜೆಡಿಎಸ್ ನಾಯಕರ ಸಭೆಗೆ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಗೈರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 14:55 IST
Last Updated 2 ಮಾರ್ಚ್ 2025, 14:55 IST
ಎಚ್‌.ಡಿ. ದೇವೇಗೌಡರು ಮತ್ತು ಎಚ್‌.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ನಾಯಕರ ಸಭೆ ಭಾನುವಾರ ನಡೆಯಿತು
ಎಚ್‌.ಡಿ. ದೇವೇಗೌಡರು ಮತ್ತು ಎಚ್‌.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ನಾಯಕರ ಸಭೆ ಭಾನುವಾರ ನಡೆಯಿತು   

ಬೆಂಗಳೂರು: ‘ಯಾರೂ ಎದೆಗುಂದಬೇಕಿಲ್ಲ. ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಸಮಾವೇಶಗಳನ್ನು ಆಯೋಜಿಸಿ ಪಕ್ಷ ಸಂಘಟಿಸೋಣ’ ಎಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸಲಹೆ ನೀಡಿದರು.

ಭಾನುವಾರ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಅವರು, ‘ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳನ್ನು ಹುಡುಕಿ ಪಟ್ಟಿ ಮಾಡಿ. ಯಾರೂ ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಎಂದು ಕರೆಯಬೇಡಿ. ಒಬ್ಬ ಕಾರ್ಯಕರ್ತ ಎಂದು ಕರೆದರೆ ಸಾಕು. ಎಲ್ಲಿಗೆ ಬೇಕಾದರೂ ಕರೆಯಿರಿ, ಬರುತ್ತೇನೆ. ನಿಮ್ಮ ಜೊತೆಯಲ್ಲಿ ಹೋರಾಟ ಮಾಡುತ್ತೇನೆ’ ಎಂದರು.

ವಿಧಾನಮಂಡಲ ಕಲಾಪದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ, ಪಕ್ಷದ ದ್ವೈವಾರ್ಷಿಕ ಚುನಾವಣೆ, ಸದಸ್ಯತ್ವ ಅಭಿಯಾನ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಮತ್ತಿತರ ವಿಷಯಗಳ ಕುರಿತು ಎಚ್.ಡಿ. ದೇವೇಗೌಡರು ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರ ಸಭೆ ನಡೆಯಿತು.

ADVERTISEMENT

ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರು ಗೈರಾಗಿದ್ದರು.

ರಾಜ್ಯದಾದ್ಯಂತ ಪಕ್ಷದಿಂದ ಸದಸ್ಯತ್ವ ಅಭಿಯಾನವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ಮುಖಂಡರ ಜೊತೆ ತಮ್ಮದೇ ಪರಿಕಲ್ಪನೆಗಳನ್ನು ಹಂಚಿಕೊಂಡ ಯುವ ಜನತಾದಳ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ‘ಸದಸ್ಯತ್ವ ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಬೇಕು. ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು, ಎರಡನೇ ಹಂತದ ನಾಯಕರು ಹಾಗೂ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಭಾಗವಹಿಸಬೇಕು’ ಎಂದರು.

ಇದಕ್ಕೆ ಸ್ಪಂದಿಸಿದ ದೇವೇಗೌಡರು, ಕುಮಾರಸ್ವಾಮಿ, ‘ಸದಸ್ಯತ್ವ ನೋಂದಣಿಯನ್ನು ಎಲ್ಲ ಮುಖಂಡರು ಗಂಭೀರವಾಗಿ ಪರಿಗಣಿಸಬೇಕು. ಸಂಘಟನೆಯ ಬಗ್ಗೆ ಅಸಡ್ಡೆ ಬೇಡ’ ಎಂದು ಕಿವಿಮಾತು ಹೇಳಿದರು.

‘ನಾನು ಪ್ರತಿ ಜಿಲ್ಲೆ, ತಾಲ್ಲೂಕಿನಲ್ಲಿ ಪ್ರವಾಸ ಮಾಡಿ ಕಷ್ಟಪಟ್ಟು ಪಕ್ಷ ಕಟ್ಟಿದ್ದೇನೆ. ಈಗಲೂ ಓಡಾಟ ಮಾಡುತ್ತಿದ್ದೇನೆ. ಪಕ್ಷ ಕಟ್ಟುವುದು ಸುಲಭದ ಕೆಲಸವಲ್ಲ. ಹೀಗಾಗಿ, ಯಾರೊಬ್ಬರೂ ಸಂಘಟನೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು’ ಎಂದು  ದೇವೇಗೌಡರು ತಾಕೀತು ಮಾಡಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಬಿ.ಎಂ.ಫಾರೂಕ್, ಜೆಡಿಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶೆಂಪುರ, ಎಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಕೆ.ಅನ್ನದಾನಿ, ಕೆ.ಎ.ತಿಪ್ಪೇಸ್ವಾಮಿ ‌ಸಭೆಯಲ್ಲಿದ್ದರು. 

Cut-off box - ‘ಚುನಾವಣೆ ವೇಳೆ ಎಚ್ಚೆತ್ತರೆ ಉಪಯೋಗ ಇಲ್ಲ’ ‘ಚುನಾವಣೆ ಬಂದಾಗ ಮಾತ್ರ ಎಚ್ಚೆತ್ತರೆ ಉಪಯೋಗ ಇಲ್ಲ. ಸಂಘಟನೆಗೆ ಶಕ್ತಿ ತುಂಬಿ ಜನರ ಜತೆ ಇದ್ದರೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಬಹುದು. ಇಲ್ಲವಾದರೆ ನಮ್ಮ ಶ್ರಮ ವ್ಯರ್ಥವಾಗುತ್ತದೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ‘ನಾಯಕನಾಗುವ ಕನಸು ಇದ್ದರೆ ಸಾಲದು. ಅದಕ್ಕೆ ಮೂಲ ಬಂಡವಾಳ ಪಕ್ಷ ಸಂಘಟನೆ. ನಿಮ್ಮ ಕ್ಷೇತ್ರ ಮತಗಟ್ಟೆ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಸಂಘಟನೆ ಬಲಪಡಿಸಿ. ಸದಸ್ಯತ್ವ ಅಭಿಯಾನವನ್ನು ವೇಗವಾಗಿ ನಡೆಸಬೇಕು. ಯುವಜನರು ರೈತರು ಕೃಷಿ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆ ಆಗಬೇಕು’ ಎಂದು ಕಾರ್ಯಕರ್ತರಿಗೆ ಅ‌ವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.