ಮಂಗಳೂರು/ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಗೆ ನಿಯೋಜನೆಗೊಂಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಕಾರ್ಯಾಚರಣೆ ಆರಂಭಿಸಿದ್ದು ಸತತ ಸಭೆಗಳನ್ನು ನಡೆಸಿದೆ.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ. ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ. ಅನುಚೇತ್ ಮತ್ತು ದಯಾಮ ಮಾತ್ರ ದಕ್ಷಿಣ ಕನ್ನಡಕ್ಕೆ ಶುಕ್ರವಾರ ಬಂದಿದ್ದು ಮಂಗಳೂರಿನಲ್ಲಿ ಎರಡು ಸಭೆಗಳನ್ನು ನಡೆಸಿದರು.
ಎಸ್ಐಟಿಗೆ ನಿಯೋಜಿಸಿದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡದ ಜೊತೆ ನಗರದ ಸರ್ಕೀಟ್ ಹೌಸ್‌ನಲ್ಲಿ ಸಭೆ ನಡೆಸಿದ ಅನುಚೇತ್ ಮತ್ತು ದಯಾಮ, ಸಂಜೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಜೊತೆ ಅವರ ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು.
ವಿಶೇಷ ತನಿಖಾ ತಂಡಕ್ಕೆ ಇನ್‌ಸ್ಪೆಕ್ಟರ್‌ಗಳು, ಸಬ್ ಇನ್‌ಸ್ಪೆಕ್ಟರ್‌ಗಳು, ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳನ್ನು ಒಳಗೊಂಡ 20 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸರ್ಕೀಟ್ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಈ ಪೈಕಿ 12 ಮಂದಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಒಂದೆರಡು ದಿನಗಳಲ್ಲಿ ಎಲ್ಲರೂ ತನಿಖಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿರುವಂತೆ ಅನುಚೇತ್ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಐಜಿಪಿ ಕಚೇರಿಯಲ್ಲಿ ಎರಡು ತಾಸುಗಳಿಗೂ ಹೆಚ್ಚು ಸಮಯ ಸಮಾಲೋಚನೆ ನಡೆಯಿತು. ಸಭೆಯ ನಂತರ ಅನುಚೇತ್ ಅವರನ್ನು ಮಾತನಾಡಿಸಲು ಮುಂದಾದ ಮಾಧ್ಯಮದವರಿಗೆ ‘ಸದ್ಯ ಏನೂ ಹೇಳುವುದಿಲ್ಲ’ ಎಂದಷ್ಟೇ ಹೇಳಿ ಅವರು ಮುಂದೆ ಸಾಗಿದರು.
ಬೆಳ್ತಂಗಡಿಯಲ್ಲಿ ಕಚೇರಿ: ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಪೊಲೀಸ್ ಇಲಾಖೆಯ ವಸತಿ ಸಮುಚ್ಚಯದ ಹೊಸ ಕಟ್ಟಡದ ನೆಲಮಹಡಿಯ ಎರಡು ಕೊಠಡಿಗಳಲ್ಲಿ ತನಿಖಾ ತಂಡದ ಕಚೇರಿ ತೆರೆಯಲು ಸಿದ್ದತೆ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಅವರ ಸೂಚನೆಯಂತೆ ಇಲ್ಲಿ ಕಚೇರಿಗೆ ಬೇಕಾದ ಸಿದ್ಧತೆಗಳನ್ನು ಬೆಳ್ತಂಗಡಿ ಪೊಲೀಸರು ಮಾಡಿದ್ದಾರೆ. ತನಿಖಾ ತಂಡದ ಕಚೇರಿ ಮಂಗಳೂರಿನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಬೆಳ್ತಂಗಡಿ ಅಥವಾ ಧರ್ಮಸ್ಥಳ ಗ್ರಾಮದಲ್ಲಿ ತೆರೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ತನಿಖಾ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಬೆಳ್ತಂಗಡಿಯಲ್ಲಿ ಕಚೇರಿ ತೆರೆಯುವುದೇ ಸೂಕ್ತ ಎಂದು ಅಂತಿಮವಾಗಿ ನಿರ್ಧರಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಕರಣವು ಹಲವು ಆಯಾಮಗಳಲ್ಲಿ ಸೂಕ್ಷ್ಮವಾಗಿರುವುದರಿಂದ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆಯನ್ನು ಗುಪ್ತವಾಗಿ ಮಾಡಲು ನಿರ್ಧರಿಸಿದ್ದಾರೆ. ಚಲನ ವಲನ, ಸಭೆಗಳು ಸೇರಿದಂತೆ ಯಾವ ಮಾಹಿತಿಯೂ ಹೊರಗೆ ತಲುಪದಂತೆ ನೋಡಿಕೊಳ್ಳಬೇಕು ಎಂದು ಎಲ್ಲರಿಗೂ ಕಡ್ಡಾಯವಾಗಿ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.