ADVERTISEMENT

ಬಿಜೆಪಿ ಹೋರಾಟ ಸೌಜನ್ಯಾ ಪರವೊ, ಧರ್ಮಾಧಿಕಾರಿ ಪರವೊ: ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
<div class="paragraphs"><p>ಸಿದ್ದರಾಮಯ್ಯ&nbsp;, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ , ಮುಖ್ಯಮಂತ್ರಿ

   

ಮೈಸೂರು: ‘ಬಿಜೆಪಿಯವರು ಒಂದೆಡೆ ವೀರೇಂದ್ರ ಹೆಗ್ಗಡೆಯವರ ಪರ ಇರುವುದಾಗಿ ಹೇಳುತ್ತಾರೆ.. ಮತ್ತೊಂದೆಡೆ, ಸೌಜನ್ಯಾ  ಪರ ಎನ್ನುತ್ತಾರೆ. ನಿಜವಾಗಿಯೂ ಅವರು ಯಾರ ಪರ ಇದ್ದಾರೆ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಸೌಜನ್ಯಾ ಪ್ರಕರಣವನ್ನು ಸಿಬಿಐ–ಎನ್‌ಐಎಗೆ ಹಸ್ತಾಂತರ ಮಾಡಬೇಕೆಂಬ ಬಿಜೆಪಿ ಒತ್ತಾಯ’ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

‘ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಪ್ರಕರಣದ ತನಿಖೆ ಮಾಡಿ ವರದಿ ಕೊಟ್ಟಿದೆ. ಈಗ ಸುಪ್ರೀಂ ಕೋರ್ಟಿಗೆ ಹೋಗಿ ಎನ್ನುತ್ತಿದ್ದಾರೆ. ಸೌಜನ್ಯಾ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೇ ಆರೋಪವಿದೆ. ಹಾಗಾದರೆ ಬಿಜೆಪಿ ಯಾರ ಪರ ಇದೆ?’ ಎಂದರು.

‘ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದ್ದು, ವೀರೇಂದ್ರ ಹೆಗ್ಗಡೆಯವರೇ ತಮ್ಮ ವಿರುದ್ಧದ ತನಿಖೆಯನ್ನು ಸ್ವಾಗತಿಸಿದ್ದಾರೆ. ಬಿಜೆಪಿ ಈಗ ಎನ್‌ಐಎ ಎನ್ನುತ್ತಿದೆ. ಹಾಗಾದರೆ ಇವರಿಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲವೇ’ ಎಂದು ಪ್ರಶ್ನಿಸಿದರು. 

ದುಡ್ಡು ಎಲ್ಲಿಂದ ಬರುತ್ತದೆ?: ‘ಧರ್ಮಸ್ಥಳದ ವಿರುದ್ಧ ಹೋರಾಟಕ್ಕೆ ಹೊರದೇಶಗಳಿಂದ ಹಣ ಬಂದಿದೆ’ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿ, ‘ಬಿಜೆಪಿಯವರಿಗೆ ಹಣ ಬಂದಿದೆ. ಅಷ್ಟೆಲ್ಲ ಮಾಡಬೇಕಾದರೆ ಅವರಿಗೆ ಎಲ್ಲಿಂದ ದುಡ್ಡು ಬರುತ್ತದೆ?’ ಎಂದರು.

‘ಸೌಜನ್ಯಾ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ನಾನು ಅದರ ತೀರ್ಪು ನೋಡಿಲ್ಲ. ಈ ಬಗ್ಗೆ ಸೌಜನ್ಯಾ ತಾಯಿ ತೀರ್ಮಾನಿಸಬೇಕು’ ಎಂದರು.

‘ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುವುದನ್ನು ವಿರೋಧಿಸುವವರು, ಹಿಂದೆ ಮೈಸೂರು ಮಹಾರಾಜರು ಮಿರ್ಜಾ ಇಸ್ಮಾಯಿಲ್‌ರಂತಹ ದಿವಾನ
ರನ್ನು ಆನೆ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುವಾಗ ಎಲ್ಲಿ ಹೋಗಿದ್ದರು’ ಎಂದು ಪ್ರಶ್ನಿಸಿದರು.

‘ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ. ಕುಂಕುಮ ಹಚ್ಚಿಕೊಳ್ಳುವುದು ಅವರ ಧರ್ಮದಲ್ಲಿಲ್ಲ. ದಸರಾವನ್ನು ನಾಡ ಹಬ್ಬ ಎಂದು ಆಚರಿಸುತ್ತೇವೆ. ಉದ್ಘಾಟನೆಗೆ ಬೇರೆ ಧರ್ಮದವರನ್ನು ಆಹ್ವಾನಿಸಿದರೆ ಕುಂಕುಮ ಧರಿಸಿ ಬನ್ನಿ, ಹಿಂದೂಗಳಾಗಿ ಎನ್ನುವುದು ತರವಲ್ಲ’ ಎಂದರು.

ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಎಸ್‌ಐಟಿಗೆ ದೂರು

ಮಂಗಳೂರು: ‘ಧರ್ಮಸ್ಥಳ ಬೆಳವಣಿಗೆಗೆ ಸಂಬಂಧಿಸಿ ಸಾಕ್ಷಿ ದೂರುದಾರನಿಗೆ ಕೋರ್ಟ್ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆ ನೀಡಿರುವ ಹಂತದಲ್ಲಿ, ಆತನ ಸಂದರ್ಶನ ನಡೆಸಿರುವ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ತನಿಖೆ ನಡೆಸಬೇಕು’ ಎಂದು ಹೋರಾಟಗಾರ ಪ್ರಶಾಂತ್ ಸಂಬರಗಿ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ದೂರು ಸಲ್ಲಿಸಿದ್ದಾರೆ.

ಮಂಗಳವಾರ ದೂರು ಸಲ್ಲಿಸಿದ ನಂತರ ಮಾತನಾಡಿದ ಅವರು, ‘ಯೂಟ್ಯೂಬ್‌ ಚಾನೆಲ್‌ಗಳು ಯಾವುದೇ ಸ್ವಯಂ ಸೆನ್ಸಾರ್‌ ವ್ಯವಸ್ಥೆ ಇಲ್ಲದೆ, ಸುದ್ದಿ ಪ್ರಕಟಿಸಿವೆ’ ಎಂದರು.

‘ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಸಾಕ್ಷಿ ದೂರದಾರನ ಗುರುತು ಗೋಪ್ಯವಾಗಿ ಇಡುವಂತೆ ಕೋರ್ಟ್ ಆದೇಶವಿದೆ. ಅದನ್ನು ಉಲ್ಲಂಘಿಸಲಾಗಿದೆ. ದೂರು ದಾಖಲು ಅಥವಾ ಸಾಕ್ಷಿ ದೂರುದಾರನ ಆರೋಪಿಯಾಗಿ ಮಾಡಿದ ನಂತರ... ಹೀಗೆ ಯಾವ ವೇಳೆ ಸಂದರ್ಶನ ಮಾಡಿದ್ದರೂ ಅದು ಅಪರಾಧವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಯೂಟ್ಯೂಬರ್‌ಗಳಿಗೆ ಹಣ ಸಂದಾಯವಾಗಿದ್ದರೆ, ಅದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಕೋರಿದ್ದೇನೆ. ದೂರಿಗೆ ಪ್ರತಿಯಾಗಿ ಹಿಂಬರಹ ನೀಡಿದ್ದಾರೆ’ ಎಂದು ಹೇಳಿದರು. 

ಮಟ್ಟೆಣ್ಣವರ ವಿರುದ್ಧ ಮತ್ತೊಂದು ಪ್ರಕರಣ

ಮಂಗಳೂರು: ಅಶ್ಲೀಲವಾಗಿ ಮಾತನಾಡಿದ ವಿಡಿಯೊ ತುಣುಕನ್ನು ನ್ಯೂಸ್‌ ಚಾನೆಲ್‌ವೊಂದರಲ್ಲಿ ಹರಿಬಿಟ್ಟ ಆರೋಪದ ಮೇರೆಗೆ ಸೌಜನ್ಯಾ ಪರ ಹೋರಾಟಗಾರ ಗಿರೀಶ ಮಟ್ಟೆಣ್ಣವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಉಜಿರೆಯಲ್ಲಿ ನಾನು ನನ್ನ ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣ ವೀಕ್ಷಿಸುತ್ತಿದ್ದೆ. ಗಿರೀಶ ಮಟ್ಟೆಣ್ಣವರ ಎಂಬಾತ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿ, ವಿಡಿಯೊ ತುಣುಕನ್ನು ನ್ಯೂಜ್‌ ಚಾನೆಲ್‌ನಲ್ಲಿ ಹರಿಬಿಟ್ಟಿದ್ದಾನೆ’ ಎಂದು ರಾಜೇಂದ್ರ ದಾಸ್‌ ಡಿ. ಧರ್ಮಸ್ಥಳ ಎಂಬವರು ದೂರು ನೀಡಿದ್ದಾರೆ. ಬಿಎನ್‌ಎಸ್‌ ಕಲಂ 296 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.