ಮಂಗಳೂರು: ಸೌಜನ್ಯಾ ಕೊಲೆ ಪ್ರಕರಣದಲ್ಲಿ ದೋಷಮುಕ್ತರಾಗಿದ್ದ ಮೂವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದ್ದು ವಾಸ್ತವಾಂಶ ಕುರಿತು ತನಿಖೆ ನಡೆಸಬೇಕು ಎಂದು ಕೋರಿ ಸ್ಥಳೀಯರು ಎಸ್‌ಐಟಿಗೆ ಶನಿವಾರ ದೂರು ಸಲ್ಲಿಸಿದ್ದಾರೆ.
ಇದೇ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಕೋಲಾರ ಜಿಲ್ಲೆ ಜನಪರ ವೇದಿಕೆಯವರು ದೂರು ನೀಡಿದ್ದಾರೆ.
25 ಜನರ ಸಹಿಯಿದ್ದ ದೂರಿನೊಂದಿಗೆ ಧರ್ಮಸ್ಥಳದ ನಿವಾಸಿ ಕೆ.ಸಿ ಚಂದ್ರನ್ ನೇತೃತ್ವದಲ್ಲಿ ಎಸ್‌ಐಟಿ ಕಚೇರಿಗೆ ತೆರಳಿದ ನಾಲ್ವರು ಸೌಜನ್ಯಾ ತಂದೆ ಚಂದಪ್ಪ ಸಾವಿನಲ್ಲೂ ಶಂಕಾಸ್ಪದ ಹೇಳಿಕೆಗಳನ್ನು ನೀಡಲಾಗುತ್ತಿದ್ದು ಅದನ್ನು ತನಿಖೆಗೆ ಒಳಪಡಿಸಬೇಕು ಎಂದು ಕೋರಿದರು.
ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆ.ಸಿ.ಚಂದ್ರನ್, ‘ಸೌಜನ್ಯಾ ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲೇ ಒಂದೇ ಸಮುದಾಯದ ಮೂವರು ಯುವಕರನ್ನು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಅವರ ಬ್ರೈನ್ ಮ್ಯಾಪಿಂಗ್ ಕೂಡಾ ಮಾಡಲಾಗಿದೆ. ಕೊನೆಗೆ ಕ್ಲೀನ್ ಚಿಟ್ ನೀಡಲಾಗಿದೆ. ಇವರ ವಿರುದ್ಧ ಈಗಲೂ ದೂರುತ್ತ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದ್ದಾರೆ. ಇದಕ್ಕೊಂದು ಅಂತ್ಯ ಕಾಣಬೇಕಿದೆ’ ಎಂದು ಹೇಳಿದರು.
’ಸೌಜನ್ಯಾ ತಂದೆಯನ್ನು ಸ್ಲೋ ಪಾಯ್ಸನ್ ಕೊಟ್ಟು ಕೊಲೆ ಮಾಡಲಾಗಿದೆ ಎಂದು ಅವರ ಪತ್ನಿ ಆರೋಪಿಸುತ್ತಿದ್ದಾರೆ. ಈ ವಿಷಯದಲ್ಲೂ ಸತ್ಯ ಹೊರಬರಬೇಕು’ ಎಂದು ಹೇಳಿದರು.
ಕೋಲಾರ ಜಿಲ್ಲೆ ಜನಪರ ವೇದಿಕೆಯ ಅಧ್ಯಕ್ಷ ಕೋಡಿಗಾನಹಳ್ಳಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಮತ್ತು ಕಾನೂನು ಕೋಶದ ಅಧ್ಯಕ್ಷ ವೆಂಕಟಾಚಲಪತಿ ಅವರು ಎಸ್‌ಐಟಿ ಕಚೇರಿಯಲ್ಲಿ ಅಧಿಕಾರಿಗಳಿಗೆ ಮತ್ತು ಬೆಳ್ತಂಗಡಿ ತಹಶೀಲ್ದಾರರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
‘ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣವರ, ವಿಟ್ಠಲ, ಯು ಟ್ಯೂಬರ್ ಸಮೀರ್, ಜಯಂತ್ ಮತ್ತಿತರರು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇವರನ್ನು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು. ಇವರಿಗೆ ವಿದೇಶದಿಂದ ಹಣ ಸಂದಾಯ ಆಗಿರುವ ಸಾಧ್ಯತೆ ಬಗ್ಗೆಯೂ ತನಿಖೆ ಆಗಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.
‘ಪ್ರಜಾವಾಣಿ’ ಜೊತೆ ಮಾತನಾಡಿದ ವೆಂಕಟಾಚಲಪತಿ, ‘ಧರ್ಮಸ್ಥಳ ಕ್ಷೇತ್ರದಿಂದ ಕೋಲಾರ ಜಿಲ್ಲೆಗೆ ಅಪಾರ ಸಹಾಯ ದೊರಕಿದೆ. ಅಂಥ ಕ್ಷೇತ್ರದ ವಿರುದ್ಧ ವಿನಾ:ಕಾರಣ ದೂರುವುದು ಸರಿಯಲ್ಲ. ಸತ್ಯ ಹೊರಬರಬೇಕು. ಹೀಗಾಗಿ ದೂರು ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
ಸಾಕ್ಷಿ ದೂರುದಾರ ಮತ್ತು ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಡುವಿನ ಮಾತುಕತೆ ಎನ್ನಲಾದ ವಿಡಿಯೊವೊಂದನ್ನು ಹೋರಾಟಗಾರ ಗಿರೀಶ ಮಟ್ಟೆಣ್ಣವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಕ್ಷಿದೂರುದಾರ ಪತ್ನಿ ಜೊತೆ ತಿಮರೋಡಿ 2 ವರ್ಷ್ಗ ಹಿಂದೆ ಭೇಟಿಯಾಗಿ ಚೆರ್ಚಿಸಿದ್ದಾರೆ ಎಂದೂ ಬರೆದಿದ್ದಾರೆ. ‘2023ರ ಆಗಸ್ಟ್‌ನಲ್ಲಿ ತಿಮರೋಡಿಗೆ ಬಂದು ಧರ್ಮಸ್ಥಳದಲ್ಲಿ ಕಂಡಿದ್ದ ಮತ್ತು ಭಾಗಿಯಾದ ಘಟನೆಗಳ ಬಗ್ಗೆ ಸಾಕ್ಷಿದೂರುದಾರ ತಿಳಿಸಿದ್ದಾನೆ. ಈ ವರ್ಷದ ಜುಲೈನಲ್ಲಿ ನ್ಯಾಯಾಲಯದಲ್ಲೂ ಅದನ್ನೇ ಹೇಳಿದ್ದಾನೆ. ಆದರೆ ಎಸ್‌ಐಟಿ ಶೋಧದ ವೇಳೆ ಹೇಳಿಕೆ ಬದಲಿಸಲು ಕಾರಣ ಏನು? ಯಾರಾದರೂ ಹೆದರಿಸಿದ್ದಾರಾ ಆಮಿಷ ಒಡ್ಡಿದ್ದಾರಾ’ ಎಂದು ಗಿರೀಶ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.