
ಬೆಂಗಳೂರು: ‘ಧರ್ಮಸ್ಥಳದ ಆಜುಬಾಜಿನ ಸ್ಥಳಗಳಲ್ಲಿ ನೂರಾರು ಅನಾಮಧೇಯ ಹೆಣ್ಣು ಮಕ್ಕಳ ಮೃತ ದೇಹಗಳನ್ನು ಕಾನೂನುಬಾಹಿರವಾಗಿ ದಫನ್ ಮಾಡಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
‘ನಮ್ಮ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿನ ನ್ಯಾಯಿಕ ವಿಚಾರಣೆಯನ್ನು ಸಮಾಪ್ತಿಗೊಳಿಸಲು ಆದೇಶಿಸಬೇಕು’ ಎಂದು ಕೋರಿ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠ್ಠಲ ಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.
ವಿಚಾರಣೆ ವೇಳೆ ವಿಡಿಯೊ ಮುಖಾಂತರ ಹಾಜರಾದ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಸ್.ಬಾಲಕೃಷ್ಣನ್ ಹಾಗೂ ದೀಪಕ್ ಖೋಸ್ಲಾ, ‘ಅರ್ಜಿದಾರರ ವಿರುದ್ಧದ ಆರೋಪಗಳು ಸಂಜ್ಞೇಯ ಅಪರಾಧಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಇವರು ಆರೋಪಿಗಳೂ ಅಲ್ಲ, ಸಾಕ್ಷಿಗಳೂ ಅಲ್ಲ. ಈಗಾಗಲೇ 9 ಬಾರಿ ಪೊಲೀಸ್ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗಿದೆ. ಎಸ್ಐಟಿಯ ಮುಖ್ಯ ತನಿಖಾಧಿಕಾರಿ ಇದೇ 24ರಂದು ವಾಟ್ಸ್ ಆ್ಯಪ್ ಮಾಧ್ಯಮದ ಮುಖಾಂತರ ಅರ್ಜಿದಾರರಿಗೆ ಬಿಎನ್‌ಎಸ್‌ಎಸ್ ಕಲಂ 35(3) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದ್ದಾರೆ’ ಎಂದು ಆಕ್ಷೇಪಿಸಿದರು.
‘ರಾಜಕೀಯ, ಧಾರ್ಮಿಕ, ಸಂಘಟನಾತ್ಮಕ ವೈರತ್ವದ ಮನೋಭಾವದಿಂದ ಈ ನೋಟಿಸ್‌ಗಳನ್ನು ನೀಡಲಾಗಿದೆ. ವಿಚಾರಣೆಗೆ ಹೋದರೆ ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೆ ಕೂರಿಸುತ್ತಾರೆ. ಈಗಾಗಲೇ 150 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ. ಆರಂಭದಲ್ಲಿ 211(ಎ) ಅಡಿ ಎಫ್‌ಐಆರ್ ದಾಖಲಿಸಿ ನಂತರ ಬೇರೆ ಕಲಂ ಸೇರ್ಪಡೆ ಮಾಡಿಸಿದ್ದಾರೆ. ಅದೂ ಎರಡೂವರೆ ತಿಂಗಳ ನಂತರ ಹೊಸ ಕಲಂಗಳನ್ನು ಸೇರ್ಪಡೆ ಮಾಡಲಾಗಿದೆ. ಇದು ಸುಪ್ರೀಂ ಕೋರ್ಟ್‌ನ ಪೂರ್ವ ನಿರ್ಧರಿತ ತೀರ್ಪಿಗೆ ವಿರುದ್ಧವಾಗಿದ್ದು ಪುನಃ ನೀಡಲಾಗಿರುವ ನೋಟಿಸ್ ರದ್ದುಗೊಳಿಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ರಾಜ್ಯ ಪ್ರಾಸಿಕ್ಯೂಷನ್‌ನ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಅರ್ಜಿದಾರರ ಪ್ರಚೋದನೆ ಮೇಲೆಯೇ ಚಿನ್ನಯ್ಯ ದೂರು ನೀಡಿದ್ದಾನೆ. ನಂತರ 164ರಡಿ ಹೇಳಿಕೆ ನೀಡಿ ಅರ್ಜಿದಾರರ ವಿರುದ್ಧ ಆರೋಪ ಹೊರಿಸಿದ್ದಾನೆ. ಅರ್ಜಿದಾರರನ್ನು ಆರಂಭದಲ್ಲಿ ಸಾಕ್ಷಿಗಳಾಗಿ ಪರಿಗಣಿಸಲಾಗಿತ್ತು. ಧರ್ಮಸ್ಥಳ ಗ್ರಾಮದ 20 ಕಡೆ ಅಗೆದು ಪರಿಶೀಲನೆ ನಡೆಸಲಾಯಿತು. ಆನಂತರ ಆರೋಪ ಬಹುತೇಕ ಸುಳ್ಳೆಂದು ದೃಢಪಟ್ಟಿದ್ದರಿಂದ ದೂರುದಾರರನ್ನು ಆರೋಪಿಗಳನ್ನಾಗಿ ಮಾಡಿ ನೋಟಿಸ್ ನೀಡಲಾಗಿದೆ’ ಎಂದರು.
‘ಚಿನ್ನಯ್ಯನ ಮನವಿ ಅನುಸಾರವೇ ಸರ್ಕಾರ ಎಸ್‌ಐಟಿ ರಚನೆ ಮಾಡಿತು. ನಂತರ ಇವರೆಲ್ಲಾ ಎಸ್‌ಐಟಿ ಅತ್ಯಂತ ಚೆನ್ನಾಗಿ ತನಿಖೆ ನಡೆಸುತ್ತಿದೆ ಎಂದು ಕೊಂಡಾಡಿದರು. ಎಸ್‌ಐಟಿಯ ಮುಂದುವರಿದ ಆಳವಾದ ತನಿಖೆಯಲ್ಲಿ ಇವರೆಲ್ಲರ ವಿಚಾರಣೆ ಅಗತ್ಯವಾಗಿದೆ ಎಂದು ಕಂಡುಬಂದ ಕಾರಣ ಅರ್ಜಿದಾರರಿಗೆ ನೋಟಿಸ್ ನೀಡಲಾಗಿದೆ ಎಂಬುದು ಗಮನಾರ್ಹ. ಆದರೆ, ಇವರಿಗೆಲ್ಲಾ ಈಗ ಎಸ್‌ಐಟಿ ತನಿಖೆಯೇ ಕಾನೂನು ಬಾಹಿರವಾಗಿ ಕಾಣಿಸುತ್ತಿರುವುದು ಆಶ್ಚರ್ಯಕರ’ ಎಂದರು.
‘ಅರ್ಜಿದಾರರ್ಯಾರೂ ತನಿಖೆಗೆ ಸಹಕರಿಸುತ್ತಿಲ್ಲ. ಈ ಮೂಲಕ ರಾಜ್ಯದ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ವ್ಯವಸ್ಥೆಯ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಅರ್ಜಿದಾರರ ಮನವಿಯನ್ನು ಪುರಸ್ಕರಿಸಬಾರದು. ಇಂತಹವರ ವಿರುದ್ಧ ತನಿಖೆ ಮುಂದುವರಿಸಲು ಅನುವು ಮಾಡಿಕೊಡಬೇಕು. ಇವರಿಗೆಲ್ಲಾ ಬೇಕೆಂದಾಗ ತನಿಖೆ ಮಾಡಬೇಕು. ಬೇಡ ಎಂದಾದಾಗ ತನಿಖೆಯ ಕಾನೂನು ತಳಹದಿಯನ್ನೇ ಪ್ರಶ್ನಿಸುವುದು ಎಷ್ಟು ಸರಿ? ಇದೆಲ್ಲಾ ಯಾವ ರೀತಿಯ ವರ್ತನೆ’ ಎಂದು ಝಾಡಿಸಿದರಲ್ಲದೆ, ‘ಅರ್ಜಿದಾರರು ನ್ಯಾಯಾಂಗದ ಮೇಲೆಯೇ ಸವಾರಿ ಮಾಡಲು ಹೊರಟಂತಿದೆ’ ಎಂದು ಕಿಡಿ ಕಾರಿದರು.
ಅಂತಿಮವಾಗಿ ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದರು. ‘ಅರ್ಜಿದಾರರಿಗೆ ಯಾವುದೇ ಕಿರುಕುಳ ನೀಡಬಾರದು’ ಎಂದು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿದ ನ್ಯಾಯಪೀಠ, ಎಸ್‌ಐಟಿ ತನಿಖೆಗೆ ಮಧ್ಯಂತರ ತಡೆ ನೀಡಿತಲ್ಲದೆ, ‘ಅರ್ಜಿಗೆ ಸಂಬಂಧಿಸಿದಂತೆ ನಿಮ್ಮ ಆಕ್ಷೇಪಣೆ ಸಲ್ಲಿಸಿ’ ಎಂದು ರಾಜ್ಯ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿತು. ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಲಾಗಿದೆ.
ಪೊಲೀಸ್ ನೋಟಿಸ್ ಪ್ರಶ್ನಿಸಿದ ಅರ್ಜಿ
ಮುಂದುವರಿದ ತನಿಖೆಯ ಅನುಸಾರ ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 211(ಎ) 336 230 231 229 227 228 240 236 233 ಮತ್ತು 248ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಎಸ್‌ಐಟಿ ಮುಖ್ಯ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅರ್ಜಿದಾರರಿಗೆ ನೋಟಿಸ್ ಜಾರಿಗೊಳಿಸಿದ್ದರು. ‘ಈ ಪ್ರಕರಣಕ್ಕೆ ಸಂಬಂಧಿಸಿದ ಸಂಗತಿಗಳನ್ನು ಮತ್ತು ಸಂದರ್ಭಗಳನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ನಿಮ್ಮನ್ನು ವಿಚಾರಿಸುವುದು ಅಗತ್ಯವಾಗಿದೆ ಎಂಬುದು ಕಂಡುಬಂದಿರುತ್ತದೆ. ಆದ ಕಾರಣ ನೀವು 27ರ ಅಕ್ಟೋಬರ್ 2025 ರಂದು ಬೆಳಿಗ್ಗೆ 10:30 ಗಂಟೆಗೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಬಂದು ಹಾಜರಾಗಬೇಕು’ ಎಂದು ಸೂಚಿಸಿದ್ದರು. ‘ಒಂದು ವೇಳೆ ನೀವು ನೋಟೀಸಿನಲ್ಲಿ ನೀಡಿರುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಪಾಲನೆ ಮಾಡದೇ ಅಥವಾ ಹಾಜರಾಗದೇ ಹೋದಲ್ಲಿ ನಿಮ್ಮನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 35(6) ಅಡಿಯಲ್ಲಿ ದಸ್ತಗಿರಿ ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ನೋಟಿಸ್‌ನಲ್ಲಿ ಎಚ್ಚರಿಸಿದ್ದರು.

ಇಷ್ಟೊಂದು ಪೊಲೀಸ್ ನೋಟಿಸ್ ಏಕೆ ಕೊಟ್ಟಿದ್ದೀರಾ? ಪ್ರತಿದಿನಾ ಒಂದೊಂದು ನೋಟಿಸ್ ನೀಡಿರುವುದು ಏಕೆ?–ನ್ಯಾಯಮೂರ್ತಿ ಮೊಹಮ್ಮದ್ ನವಾಜ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.