ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಧರ್ಮಸ್ಥಳ ವಿಚಾರದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಇದನ್ನು ಯಾರು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಧರ್ಮಸ್ಥಳ ಆಡಳಿತ ಮಂಡಳಿ ಮೇಲೆ ಕಪ್ಪು ಚುಕ್ಕೆ ತರಲು ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ಧರ್ಮಸ್ಥಳದ ಕುರಿತ ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ‘ಈ ವಿಷಯವನ್ನು ರಾಜಕೀಯಕ್ಕೆ ತಿರುಗಿಸಬೇಡಿ. ಕಾಂಗ್ರೆಸ್ ಪಕ್ಷ ಮತ್ತು ನಮ್ಮ ಹೈಕಮಾಂಡ್ ಅನ್ನು ಎಳೆದು ತರಬೇಡಿ’ ಎಂದರು.
‘ಈ ವಿಚಾರವಾಗಿ ಇಲ್ಲಿ ನಾವು ನಾಲ್ಕು ಜನ ಮಾತನಾಡುವುದು ಅಷ್ಟೇ ಅಲ್ಲ, ನಾಡಿನ ಲಕ್ಷಾಂತರ ಭಕ್ತಾದಿಗಳು ಈ ಕ್ಷೇತ್ರವನ್ನು ನಂಬಿದ್ದಾರೆ. ದೇಶದಲ್ಲಿ ಅನ್ನದಾಸೋಹ ಆರಂಭವಾಗದೇ ಇದ್ದ ಕಾಲದಲ್ಲೇ ಈ ಕ್ಷೇತ್ರದಲ್ಲಿ ಇದನ್ನು ಆರಂಭಿಸಲಾಗಿತ್ತು’ ಎಂದು ಅವರು ಹೇಳಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಪ್ರಕರಣದ ಸಂಪೂರ್ಣ ಮಾಹಿತಿ ನನಗೂ ಗೊತ್ತಿದೆ. ಇದು ಖಾಲಿ ಟ್ರಂಕ್. ಹೀಗಾಗಿ ಜಾಸ್ತಿ ಸದ್ದು ಮಾಡುತ್ತಿದೆ ಅಷ್ಟೇ. ಯಾವುದೇ ಧರ್ಮದ ಭಾವನೆಗೂ ಚ್ಯುತಿ ಬರಬಾರದು. ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆ ಆಗಬೇಕು. ತಪ್ಪು ಮಾಡಿದವರ ರಕ್ಷಣೆ ಮಾಡುವುದಿಲ್ಲ. ಏನೂ ಇಲ್ಲದೇ ಈ ರೀತಿ ಸೃಷ್ಟಿ ಮಾಡಿದ್ದಾರೆ. ಈ ವಿಚಾರ ನ್ಯಾಯಾಲಯದಲ್ಲಿ ಬಂದ ನಂತರ ಇದನ್ನು ಸರಿಯಾಗಿ ತನಿಖೆ ಮಾಡಬೇಕು. ಅದಕ್ಕಾಗಿ ಎಸ್‌ಐಟಿ ರಚಿಸಿ ತನಿಖೆ ಮಾಡಿಸಲಾಗುತ್ತಿದೆ’ ಎಂದರು.
‘ನೂರಾರು ವರ್ಷದಿಂದ ಬಂದ ಪರಂಪರೆ ನಾಶ ಮಾಡಲು ಹೊರಟಿದ್ದಾರೆ. ಯಾರನ್ನೇ ಆಗಲಿ ಅನಗತ್ಯವಾಗಿ ತೇಜೋವಧೆ ಮಾಡುವುದು ಸರಿಯಲ್ಲ. ನಮಗೆ ನಮ್ಮದೇ ಆದ ನಂಬಿಕೆ ಇದೆ. ಅವನ್ಯಾರೋ ಮುಸುಕುಧಾರಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಪರಿಣಾಮ ಇದೆಲ್ಲ ಆಗಿದೆ’ ಎಂದರು.
‘ನಮ್ಮ ಪಕ್ಷದ ಶಾಸಕಾಂಗ ಸಭೆಯಲ್ಲಿ ನಮ್ಮ ನಾಯಕರಾದ ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ, ಅಶೋಕ್ ಕುಮಾರ್ ರೈ ಸೇರಿ ಹಲವರು ಈ ವಿಚಾರ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಅಪಪ್ರಚಾರ ಮಾಡಿ ಯಾರು ದಾರಿ ತಪ್ಪಿಸುತ್ತಿದ್ದಾರೋ ಅವರ ವಿರುದ್ಧ ತನಿಖೆ ಮಾಡಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ. ಇಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯವರೂ ತಿಳಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.