ADVERTISEMENT

ಧರ್ಮಸ್ಥಳ ಘರ್ಷಣೆ: ಪೊಲೀಸರಿಂದ 3 ಸ್ವಯಂ ಪ್ರೇರಿತ ಪ್ರಕರಣ

ಧರ್ಮಸ್ಥಳ ಘರ್ಷಣೆ: ಗುಂಪು ಸೇರಿದ್ದವರ, ಧರಣಿ ನಡೆಸಿದವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 4:22 IST
Last Updated 8 ಆಗಸ್ಟ್ 2025, 4:22 IST
<div class="paragraphs"><p>ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿರುವ ಸಾಕ್ಷಿ ದೂರುದಾರ ಗುರುತು ಮಾಡಿರುವ 13ನೇ ಜಾಗಕ್ಕೆ ಪೊಲೀಸರ ಕಾವಲು</p></div>

ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿರುವ ಸಾಕ್ಷಿ ದೂರುದಾರ ಗುರುತು ಮಾಡಿರುವ 13ನೇ ಜಾಗಕ್ಕೆ ಪೊಲೀಸರ ಕಾವಲು

   

ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್

ಮಂಗಳೂರು: ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಹಾಗೂ ಉಜಿರೆಯ ಬೆನಕ ಆಸ್ಪತ್ರೆ ಬಳಿ ಬುಧವಾರ ನಡೆದಿದ್ದ ಘಟನೆಗಳಿಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣ ದಾಖಲಾಗಿದ್ದರೆ, ಎರಡೂ ಕಡೆ ಗುಂಪು ಸೇರಿದ್ದವರ ಹಾಗೂ ಧರ್ಮಸ್ಥಳ ಪೊಲೀಸ್‌ ಠಾಣೆ ಎದುರು ಧರಣಿ ನಡೆಸಿದವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಒಟ್ಟು ಮೂರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ದಾಖಲಾದ ಪ್ರಕರಣಗಳ ವಿವರ:

ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಬಳಿ ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಸಂಬಂಧ ‘ಕುಡ್ಲ ರಾಂಪೇಜ್' ಯುಟ್ಯೂಬ್ ಚಾನೆಲ್‌ ಮಾಲೀಕ ಅಜಯ್ ಅಂಚನ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ‘ಧರ್ಮಸ್ಥಳದ ಪಾಂಗಾಳ ರಸ್ತೆ ಬಳಿ, ಒಬ್ಬರ ವಿಡಿಯೊ ಹೇಳಿಕೆ ಪಡೆಯುತ್ತಿದ್ದ ಸ್ಥಳಕ್ಕೆ 15 ರಿಂದ 50 ಜನರ ಕಿಡಿಗೇಡಿಗಳ ಗುಂಪು ಬಂದಿತ್ತು. ನನಗೆ ಹಾಗೂ ನನ್ನ ಕ್ಯಾಮೆರಾಮ್ಯಾನ್‌ ಸುಹಾಸ್, ‘ಸಂಚಾರಿ ಸ್ಟುಡಿಯೊ’ ಯೂಟ್ಯೂಬ್ ಚಾನೆಲ್‌ನ ಸಂತೋಷ್ ಹಾಗೂ ‘ಯುನೈಟೆಡ್ ಮೀಡಿಯಾ ಯೂಟ್ಯೂಬ್’ ಚಾನೆಲ್‌ನ ಅಭಿಷೇಕ್ ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದೆ. ನನ್ನ ವಿಡಿಯೊ ಕ್ಯಾಮೆರಾವನ್ನು ರಸ್ತೆಗೆ ಎಸೆದು ಹಾನಿಗೊಳಿಸಿದೆ. ಕ್ಯಾಮೆರಾದ ಮೆಮೊರಿ ಕಾರ್ಡ್ ಅನ್ನು ಕಿತ್ತುಕೊಂಡಿದೆ' ಎಂದು ಅವರು ದೂರಿನಲ್ಲಿ ಆರೋಪಿಸಿದ್ದು, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಧರ್ಮಸ್ಥಳ ಪಾಂಗಾಳ ರಸ್ತೆ ಎಂಬಲ್ಲಿ, 'ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆದ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ್ದೆ. ಅಲ್ಲಿ ಸೇರಿದ್ದ ಸುಮಾರು 30 ರಿಂದ 40 ಜನರ ಗುಂಪು ಅವ್ಯಾಚವಾಗಿ‌ ಬೈದು, ಹಲ್ಲೆ ನಡೆಸಿದೆ. ಸ್ಥಳದಲ್ಲಿದ್ದ ಎರಡು ವಾಹನಗಳಿಗೆ ಹಾಗೂ ಕ್ಯಾಮೆರಾಗಳಿಗೆ ಹಾನಿಗೊಳಿಸಿದೆ' ಎಂದು ಬೆಳ್ತಂಗಡಿ ನಿವಾಸಿ ಪ್ರಮೋದ್‌ ಕುಮಾರ್ ಶೆಟ್ಟಿ ದೂರು ನೀಡಿದ್ದು, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಧರ್ಮಸ್ಥಳದ‌ ಪಾಂಗಾಳ ರಸ್ತೆ ಬಳಿ ನಡೆದ ಹಲ್ಲೆಯ ಗಾಯಾಳುಗಳ ಬಗ್ಗೆ ವರದಿ ಮಾಡಲು ಉಜಿರೆಯ ಬೆನಕ ಆಸ್ಪತ್ರೆಯ ಬಳಿ ತೆರಳಿದ್ದೆ. ಸ್ಥಳದಲ್ಲಿದ್ದ ಗಿರೀಶ್ ಮಟ್ಟಣ್ಣನವರ್ ಅವರ ಬಳಿ ವಿಡಿಯೊ ಹೇಳಿಕೆ ನೀಡುವಂತೆ ಕೋರಿದ್ದೆ. ಆಗ ಅವರು ಏಕಾಏಕಿ ಬೈದಿದ್ದಾರೆ. ಸ್ಥಳದಲ್ಲಿದ್ದ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ  ಮತ್ತು ಅವರ ಜೊತೆಗಿದ್ದ ಇತರರು ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿದ್ದಾರೆ. ಆಗ ಸ್ಥಳಕ್ಕೆ ಬಂದ ಆರೋಪಿ, ಯೂಟ್ಯೂಬರ್ ಸಮೀರ್ ಜೀವ ಬೆದರಿಕೆ ಒಡ್ಡಿದ್ದಾನೆ’ ಎಂದು ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿಯ ವರದಿಗಾರ ಹರೀಶ್ ಆರ್‌,  ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

‘ಧರ್ಮಸ್ಥಳದ ಪಾಂಗಾಳ ರಸ್ತೆ ಬಳಿ ಹಲ್ಲೆಗೊಳಗಾದ ಗಾಯಾಳುಗಳನ್ನು ನಾನು ಚಿಕಿತ್ಸೆಗಾಗಿ ಉಜಿರೆ ಬೆನಕ ಆಸ್ಪತ್ರೆಗೆ ವಾಹನವೊಂದರಲ್ಲಿ ಕರೆದೊಯ್ದಿದ್ದೆ. ಗಾಯಾಳುಗಳನ್ನು ನೋಡಲು ಬಂದಿದ್ದ ಮಹೇಶ್‌ ಶೆಟ್ಟಿ ತಿಮರೋಡಿ  ಹಾಗೂ ಗಿರೀಶ್‌ ಮಟ್ಟಣ್ಣನವರ್‌ ಅವರಿಂದ ಹೇಳಿಕೆ ಪಡೆಯಲು ಬಂದಿದ್ದ ಆರೋಪಿ, ಎಷ್ಯಾ ನೆಟ್ ಸುವರ್ಣ ಚಾನೆಲ್‌ನ ವರದಿಗಾರ ಹಾಗೂ ಕ್ಯಾಮೆರಾಮೆನ್‌ ತಡೆದು ನಿಲ್ಲಿಸಿದ್ದರು. ಅವರು ಹೇಳಿಕೆ ಕೊಡಲು ನಿರಾಕರಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಳ್ಳಾಟ ನಡೆಸಿದ್ದರು. ಇದಾದ ಕೆಲಹೊತ್ತಿನಲ್ಲಿ ಸುವರ್ಣ ಸುದ್ದಿ ವಾಹಿನಿಯಲ್ಲಿ ಅಜಿತ್‌ ಹನುಮಕ್ಕನವರ್‌  ಎಂಬ ನ್ಯೂಸ್‌ ಆ‌ಂಕರ್‌, 'ಸುವರ್ಣ ನ್ಯೂಸ್‌  ವರದಿಗಾರರ ಮೇಲೆ ಮಹೇಶ್‌ ಶೆಟ್ಟಿ ತಿಮರೋಡಿಯಿಂದ ಹಲ್ಲೆ' ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆ' ಎಂದು ಬೆಳ್ತಂಗಡಿ ನಿವಾಸಿ ಗಣೇಶ್ ಶೆಟ್ಟಿ ಎಂಬವರು ಬೆಳ್ತಂಗಡಿ ಠಾಣೆ‍ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಕರ್ತವ್ಯಕ್ಕೆ ಅಡ್ಡಿ– 3 ಸ್ವಯಂಪ್ರೇರಿತ ಪ್ರಕರಣ

ಜನರು ಕಾನೂನುಬಾಹಿರವಾಗಿ ಗುಂಪುಗೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪೊಲೀಸರು ಮೂರು ಪ್ರಕರಣಗಳನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದಾರೆ.

ಪಾಂಗಾಳ ರಸ್ತೆ ಬಳಿ 25 ರಿಂದ 50 ಜನರು, ಎರಡು ಕಡೆ ಅಪರಾಧ ಕೃತ್ಯ ನಡೆಸಲು ಅಕ್ರಮವಾಗಿ ಗುಂಪು ಗೂಡಿದ್ದಾರೆ ಎಂಬ ಮಾಹಿತಿ ಪಡೆದು ಧರ್ಮಸ್ಥಳ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸ್ಥಳಕ್ಕೆ ಧಾವಿಸಿದ್ದರು.  ಅಲ್ಲಿದ್ದವರಿಗೆ ಸ್ಥಳದಿಂದ ತೆರಳುವಂತೆ ಸೂಚಿಸಿದ್ದರು.‌ ಆದರೂ, ಅಲ್ಲಿದ್ದವರು ಆ ಸೂಚನೆ ಪಾಲಿಸದೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡ್ಡಿಪಡಿಸಿದ್ದಾರೆ. ಪರಸ್ಪರ ಗಲಾಟೆ ನಡೆಸಿದ್ದಾರೆ ಎಂದು ಧರ್ಮಸ್ಥಳ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಂಗಾಳ ರಸ್ತೆ ಬಳಿ ನಡೆದ ಅಹಿತಕರ ಘಟನೆ ಸಂಬಂಧ, ಸುಮಾರು 100 ಮಂದಿ, ಧರ್ಮಸ್ಥಳ ಠಾಣೆಯ ಆವರಣದಲ್ಲಿ ಯಾವುದೇ ಪೂರ್ವಾನುಮತಿಯಿಲ್ಲದೆ, ಕಾನೂನು ಬಾಹಿರವಾಗಿ ಅಕ್ರಮ ಕೂಟ ರಚಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದ್ದ ಹಾಗೂ ಧರ್ಮಸ್ಥಳ ಠಾಣೆ ಎದುರು ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯೂಟ್ಯೂಬರ್‌ಗಳು ಚಿಕಿತ್ಸೆಗಾಗಿ ದಾಖಲಾಗಿದ್ದ ಉಜಿರೆಯ ಬೆನಕ ಆಸ್ಪತ್ರೆಯ ಬಳಿ ಜನರು ಸೇರಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ  ಸಬ್ ಇನ್‌ಸ್ಪೆಕ್ಟರ್‌ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಸುಮಾರು 50 ರಿಂದ 100 ಜನರು ಪೂರ್ವಾನುಮತಿ ಪಡೆಯದೇ ಕಾನೂನು ಬಾಹಿರವಾಗಿ ಸೇರಿ, ಘೋಷಣೆ ಕೂಗುತ್ತಿದ್ದರು‌. ಸ್ಥಳದಿಂದ ತೆರಳುವಂತೆ ಸೂಚಿಸಿದರೂ ತೆರಳದೇ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.