ಬೆಂಗಳೂರು: ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹಾಗೂ ತಪ್ಪಿತಸ್ಥರ ಶಿಕ್ಷೆಗೆ ಆಗ್ರಹಿಸಿ ಧರ್ಮಸ್ಥಳ ಚಲೊ ನಡೆಸಬೇಕು ಎಂಬ ನಿರ್ಣಯವನ್ನು ಸಮಾನ ಮನಸ್ಕರ ಸಭೆ ಕೈಗೊಂಡಿದೆ.
ಈ ಪ್ರಕರಣದಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಚಿಂತಕರು, ರಂಗಕರ್ಮಿಗಳು ಹಾಗೂ ಹೋರಾಟಗಾರರು ಭಾಗವಹಿಸಿದ್ದರು. ಪ್ರಕರಣದ ಬಗ್ಗೆ ಚರ್ಚಿಸಿದ ಅವರು, ‘ಪಾದಯಾತ್ರೆ ಅಥವಾ ಬೈಕ್ ರ್‍ಯಾಲಿ ನಡೆಸಬೇಕು. ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶವನ್ನೂ ಆಯೋಜಿಸಬೇಕು. ಅದಕ್ಕೂ ಮೊದಲು ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಬೇಕು’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಅಂತಿಮವಾಗಿ, ‘ಧರ್ಮಸ್ಥಳ ಚಲೊ ಹೆಸರಿನಲ್ಲಿ ಒಂದು ಜಾಥಾವನ್ನು ನಡೆಸಬೇಕು. ಅದರ ಸ್ವರೂಪ ಯಾವ ರೀತಿ ಇರಬೇಕು? ಎಲ್ಲಿಂದ ಪ್ರಾರಂಭಿಸಬೇಕು? ಜಿಲ್ಲೆಗಳಲ್ಲಿ ಯಾವ ರೀತಿ ಸಭೆ ನಡೆಸಬೇಕು ? ಸಮಾವೇಶವನ್ನು ಎಲ್ಲಿ ಮಾಡಬೇಕು ಸೇರಿ ವಿವಿಧ ಸಂಗತಿಗಳ ಬಗ್ಗೆ ಚರ್ಚಿಸಿ, ರೂಪುರೇಷೆ ಸಿದ್ಧಪಡಿಸಲು ವಿವಿಧ ಸಂಘಟನೆಗಳ ಮುಖ್ಯಸ್ಥರ ಜತೆಗೆ ಇನ್ನೊಂದು ಸಭೆ ನಡೆಸಬೇಕು’ ಎಂದು ಈ ಸಭೆಯಲ್ಲಿ ನಿರ್ಧರಿಸಲಾಯಿತು.
ಚಿಂತಕ ಸಿದ್ದನಗೌಡ ಪಾಟೀಲ, ‘ಧರ್ಮ, ದೇವರು ಹಾಗೂ ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ನಡೆಸಲಾಗುತ್ತಿರುವ ಅಪರಾಧದ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರಕರಣ ಹಾಗೂ ನಡೆದು ಬಂದ ಹಾದಿಯ ಬಗ್ಗೆ ಕಿರು ಹೊತ್ತಿಗೆಯನ್ನು ಹೊರತರಬೇಕು. ಇದನ್ನು ಎಲ್ಲೆಡೆ ವಿತರಿಸುವ ಮೂಲಕ ಜನಾಂದೋಲನ ರೂಪಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದೇವಿ, ‘ಸರ್ಕಾರವು ಅತ್ಯಾಚಾರಿಗಳು, ಕೊಲೆಗಡುಕರನ್ನು ಬೆಂಬಲಿಸುತ್ತಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಮೊದಲು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸಬೇಕು. ಬಳಿಕ ರಾಜ್ಯಮಟ್ಟದ ಸಮಾವೇಶ ಅಗತ್ಯ’ ಎಂದರು.
ರಂಗಕರ್ಮಿ ರಘುನಂದನ್, ‘ಈ ಪ್ರಕರಣಕ್ಕೆ ಸಂಬಂಧಿಸಿದ ಹೋರಾಟಕ್ಕೆ ಬೆಂಬಲ ನೀಡುವಂತೆ ವಿವಿಧ ಸಂಘ–ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರ ಬರೆಯಬೇಕು. ವಿವಿಧ ಕಾರ್ಯಕ್ರಮಗಳಲ್ಲಿಯೂ ಭಿತ್ತಿಪತ್ರ ವಿತರಣೆಯಂತಹ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ ಸುಬ್ಬರಾವ್, ಶಿವಸುಂದರ್, ನರಸಿಂಹಮೂರ್ತಿ, ಸಂಘಟಕರಾದ ಹರೀಶ್ ಬೈರಪ್ಪ, ವಕೀಲರಾದ ವಿನಯ್ ಶ್ರೀನಿವಾಸ್, ಮೈತ್ರೇಯಿ ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ದಿಕ್ಸೂಚಿ ಸಭೆಯನ್ನು ರದ್ದುಗೊಳಿಸುವಂತೆ ಪೊಲೀಸರು ಸೂಚಿಸಿರುವುದನ್ನು ಕರ್ನಾಟಕ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ಖಂಡಿಸಿದೆ. ಒಂದು ಸಭಾಂಗಣದಲ್ಲಿ ಕುಳಿತು ಚರ್ಚಿಸುವುದಕ್ಕೂ ಅವಕಾಶ ಕೊಡುವುದಿಲ್ಲವೆಂಬ ನಿಲುವು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದ್ದು ಸರ್ವಾಧಿಕಾರವಾಗುತ್ತದೆ. ಸಭೆ ನಡೆಸುವುದು ಅಷ್ಟೇ ಅಲ್ಲ ಪ್ರತಿಭಟನೆ ನಡೆಸುವುದು ಕೂಡ ಜನರ ಹಕ್ಕು. ಈ ಹಕ್ಕಿನ ದಮನ ಮಾಡುತ್ತಿರುವುದು ಖಂಡನೀಯ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಪೊಲೀಸ್ ಇಲಾಖೆಗೆ ತಿಳಿವಳಿಕೆ ನೀಡಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಟಿ.ಆರ್. ಚಂದ್ರಶೇಖರ್ ಸುಕನ್ಯಾ ಮಾರುತಿ ಒತ್ತಾಯಿಸಿದ್ದಾರೆ.
‘ಕಾರ್ಮಿಕ ಸಂಘಟನೆಯ ಕಚೇರಿಯಲ್ಲಿ ಸಭೆ ನಡೆಸುವುದಕ್ಕೂ ನಿಷೇಧ ಹೇರುತ್ತಿರುವ ಬೆಂಗಳೂರು ಪೊಲೀಸರ ನಡೆ ಖಂಡನೀಯ. ಸಮಾಲೋಚನೆ ಸಭೆಗೂ ಅಡ್ಡಿಪಡಿಸುತ್ತಿರುವ ಪೊಲೀಸರ ನಡೆಯನ್ನು ಗೃಹ ಇಲಾಖೆ ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯ ಕೆ. ಮರುಳಸಿದ್ಧಪ್ಪ ಜಿ. ರಾಮಕೃಷ್ಣ ಎಸ್.ಜಿ. ಸಿದ್ಧರಾಮಯ್ಯ ಡಾ.ವಸುಂಧರಾ ಭೂಪತಿ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.