ADVERTISEMENT

ಮೈಸೂರು: ಪ್ರಾಚೀನ ಹಸ್ತಪ್ರತಿಗಳಿಗೆ ಡಿಜಿಟಲ್‌ ಸ್ಪರ್ಶ

ವರ್ಷಾಂತ್ಯಕ್ಕೆ ಕಾರ್ಯ ಪೂರ್ಣ * 70 ಸಾವಿರ ಕೃತಿಗಳ ಶಾಶ್ವತ ಸಂರಕ್ಷಣೆ

ಮೋಹನ್‌ ಕುಮಾರ್‌ ಸಿ.
Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆಯಲ್ಲಿ ಹಸ್ತಪ್ರತಿಗಳ ಸ್ವಚ್ಛತಾ ಕಾರ್ಯ
ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆಯಲ್ಲಿ ಹಸ್ತಪ್ರತಿಗಳ ಸ್ವಚ್ಛತಾ ಕಾರ್ಯ    -ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆಯಲ್ಲಿರುವ (ಓರಿಯಂಟಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌) 70 ಸಾವಿರ ಪ್ರಾಚೀನ ಹಸ್ತಪ್ರತಿಗಳಿಗೆ ಡಿಜಿಟಲ್‌ ಸ್ಪರ್ಶ ನೀಡುವ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದ್ದು, ವರ್ಷಾಂತ್ಯಕ್ಕೆ ಸಂಶೋಧಕರಿಗೆ ಲಭ್ಯವಾಗಲಿದೆ.

2022ರ ಮೇನಲ್ಲಿ ಆರಂಭವಾದ ಪ್ರಕ್ರಿಯೆ ಶೇ 70ರಷ್ಟು ಪೂರ್ಣಗೊಂಡಿದೆ. 25 ಸಾವಿರಕ್ಕೂ ಹೆಚ್ಚು ಕಟ್ಟುಗಳಿರುವ ಹಸ್ತಪ್ರತಿಗಳ ಡಿಜಿಟಲೀಕರಣದ ಜೊತೆಗೆ, ಅತ್ಯಂತ ಹಳೆಯದಾದ, ಕೀಟಬಾಧೆಯಿಂದ ಹಾಳಾಗುತ್ತಿರುವ ತಾಳೆಗರಿಗಳ ಸಂರಕ್ಷಣೆಯೂ ನಡೆದಿದೆ.

2,300 ವರ್ಷಗಳ ಇತಿಹಾಸವಿರುವ ಕೌಟಿಲ್ಯನ ‘ಅರ್ಥಶಾಸ್ತ್ರ’, ಶಂಕರಾಚಾರ್ಯರ ‘ಸೌಂದರ್ಯ ಲಹರಿ’, ಮುಮ್ಮಡಿ ಕೃಷ್ಣರಾಜ ಒಡೆಯರ ‘ಶ್ರೀತತ್ವ ನಿಧಿ’ಯಂಥ ಅಮೂಲ್ಯ ಕೃತಿಗಳು ಡಿಜಿಟಲೀಕರಣಗೊಂಡಿವೆ.

ADVERTISEMENT

₹1.5 ಕೋಟಿ ನೆರವು: ಬೆಂಗಳೂರಿನ ಮಿಥಿಕ್‌ ಸೊಸೈಟಿಯು ₹1.5 ಕೋಟಿ ವೆಚ್ಚದಲ್ಲಿ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಗೆ ನೆರವಾಗಿದೆ. ಸೊಸೈಟಿಯ 37 ಮಂದಿ, ಸಂಶೋಧನಾ ಸಂಸ್ಥೆಯ ಸಿಬ್ಬಂದಿ ಹಾಗೂ ಮಹಾರಾಜ ಕಾಲೇಜಿನ ಪ್ರಾಚ್ಯ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಸಂರಕ್ಷಣೆಗೆ ಕೈ ಜೋಡಿಸಿದ್ದಾರೆ.

ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿಯಿಂದಾಗಿಯೇ ಸಂಸ್ಥೆಗೆ ದೊಡ್ಡ ಹೆಸರು ಬಂದಿದೆ. ವಿದ್ವಾಂಸ ಆರ್‌.ಶಾಮಾಶಾಸ್ತ್ರಿ ಅವರು, ತಮಗೆ ಸಿಕ್ಕ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿಯನ್ನು ಇಲ್ಲಿರಿಸಿ, ಸಂಸ್ಕೃತ, ಇಂಗ್ಲಿಷ್‌ಗೂ ಅನುವಾದಿಸಿದ್ದರು. ದೇಶದಲ್ಲಿ ಅಲ್ಲಿಯವರೆಗೂ ಮೆಗಸ್ತನೀಸ್‌, ಬಾಣನ ಕೃತಿಗಳೇ ಪ್ರಾಚೀನವಾಗಿದ್ದವು.

ಶತಮಾನದ ಇತಿಹಾಸ: 1891ರಲ್ಲಿ 10ನೇ ಚಾಮರಾಜ ಒಡೆಯರ್‌ ಅವರು ಸಂಸ್ಥೆಯನ್ನು ಸ್ಥಾಪಿಸಿದರು. ಆಗ ‘ಗವರ್ನಮೆಂಟ್‌ ಓರಿಯಂಟಲ್‌ ಲೈಬ್ರರಿ’ ಎಂಬ ಹೆಸರಿತ್ತು. 1916ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಆಡಳಿತಕ್ಕೆ ಒಳಪಟ್ಟಿತು. ಶತಮಾನದಿಂದಲೂ ಸಂಶೋಧಕರಿಗೆ ನಿರಂತರ ಆಕರವನ್ನು ಒದಗಿಸುತ್ತಿದೆ.

ತತ್ವಶಾಸ್ತ್ರ, ಧರ್ಮ, ಸಾಹಿತ್ಯ, ಭಾಷಾ ವಿಜ್ಞಾನ, ಜೋತಿಷ, ನ್ಯಾಯ, ವೇದಾಂತ, ಅಲಂಕಾರ ಶಾಸ್ತ್ರ, ಶಿಲ್ಪಶಾಸ್ತ್ರ, ಪುರಾಣಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸೇರಿದ ಸಂಸ್ಕೃತ, ಕನ್ನಡ, ಪ್ರಾಕೃತ, ತಿಗಳಾರಿ ಸೇರಿದಂತೆ ಹಲವು ಭಾಷೆಗಳ ತಾಳೆ ಗರಿಗಳು ಇವೆ.

ಸಂರಕ್ಷಣೆ ಹೇಗೆ?: ‘ಹಸ್ತಪ್ರತಿಗಳ ಕಟ್ಟುಗಳಲ್ಲಿರುವ ದೂಳನ್ನು ತೆಗೆದು, ಲೆಮನ್‌ ಗ್ರಾಸ್‌ ತೈಲ ಬಳಸಿ, ಫಂಗಸ್‌ ಅನ್ನು ತೆಗೆಯಲಾಗುತ್ತದೆ. ‘ಸಿಜೂರ್‌ ಸ್ಯಾನರ್’ನಲ್ಲಿ ಸ್ಕ್ಯಾನ್‌ ಮಾಡಿ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಪಿಡಿಎಫ್‌, ಜೆಪಿಇಜಿ ಮಾದರಿಯಲ್ಲಿ ಸಂರಕ್ಷಿಸಲಾಗುತ್ತಿದೆ. ಸ್ಕ್ಯಾನ್‌ ಮಾಡಿದ ನಂತರ ಕೆಂಪುಬಟ್ಟೆಯಲ್ಲಿ ಮತ್ತೆ ಸುತ್ತಿಡಲಾಗುತ್ತಿದೆ. ಯಾವ ಸ್ವರೂಪದಲ್ಲಿ ಆಸಕ್ತರಿಗೆ ಬಳಕೆಗೆ ನೀಡಬೇಕು ಎಂಬುದು ಚರ್ಚೆಯ ಹಂತದಲ್ಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಡಿ.ಪಿ.ಮಧುಸೂದನಾಚಾರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಹಸ್ತಪ್ರತಿಗಳ ಸ್ಕ್ಯಾನಿಂಗ್‌ನಲ್ಲಿ ನಿರತರಾದ ಹರ್ಷಿತಾ
ಹಸ್ತಪ್ರತಿಗಳ ಡಿಜಿಟಲ್ ಎಡಿಟಿಂಗ್‌ನಲ್ಲಿ ತೊಡಗಿರುವ ಸಿಬ್ಬಂದಿ ಪಲ್ಲವಿ
ಡಾ.ಡಿ.ಪಿ.ಮಧುಸೂದನಾಚಾರ್ಯ
ಹಸ್ತಪ್ರತಿಗಳನ್ನು ಶಾಶ್ವತವಾಗಿಸಲು ಮಿಥಿಕ್‌ ಸೊಸೈಟಿ ಸಹಯೋಗದಲ್ಲಿ ಡಿಜಿಟಲೀಕರಣ ಮಾಡುತ್ತಿದ್ದು ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ
-ಡಾ.ಡಿ.ಪಿ.ಮಧುಸೂಧನಚಾರ್ಯ ನಿರ್ದೇಶಕ ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.