ADVERTISEMENT

ಶ್ರೀನಿವಾಸ ಕಲ್ಯಾಣ ಮಾದರಿಯಲ್ಲಿ ಆನಂದ್ ಸಿಂಗ್ ಮಗನ ಅದ್ಧೂರಿ ಮದುವೆ: ಜನಸಾಗರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 8:33 IST
Last Updated 1 ಡಿಸೆಂಬರ್ 2019, 8:33 IST
   

ಹೊಸಪೇಟೆ: ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ ಹಾಗೂ ಬೆಂಗಳೂರಿನ ಉದ್ಯಮಿ ಪ್ರಭು ಸಬರದ ಅವರ ಮಗಳು ಸಂಜನಾ ಅದ್ದೂರಿ ಮದುವೆ ನಡೆದಿದ್ದು, ಜನಸಾಗರವೇ ಹರಿದು ಬರುತ್ತಿದೆ.

ಇಲ್ಲಿನ ರೈಲು ನಿಲ್ದಾಣದ ಬಳಿಯಿರುವ ಆನಂದ್ ಸಿಂಗ್ ಅವರ ಒಡೆತನದ ಭವ್ಯ ಬಂಗಲೆಯ ಹಿಂಭಾಗದ ಹತ್ತು ಎಕರೆ ಪ್ರದೇಶದಲ್ಲಿ ವಿಶಾಲವಾದ ಶಾಮಿಯಾನ ಹಾಕಲಾಗಿದೆ. ತಿರುಮಲ ತಿರುಪತಿಗೆ ಹೋಲುವ ಅದ್ದೂರಿ ಸೆಟ್ ಹಾಕಲಾಗಿದೆ.ಶ್ರೀನಿವಾಸ ಕಲ್ಯಾಣ ಮಾದರಿಯಲ್ಲಿ ರಜಪೂತ ಸಂಪ್ರದಾಯದ ಪ್ರಕಾರ ಸಿದ್ದಾರ್ಥ ವಧುವಿಗೆ ತಾಳಿ ಕಟ್ಟುವ ಕಾರ್ಯಕ್ರಮ ಬೆಳಗ್ಗೆ ನಡೆದಿದೆ.

ಸುಮಾರು 50 ಸಾವಿರ ಜನರು ಮದುವೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಇದ್ದು, ಸಿಂಗ್ ಮನೆ ಎದುರಿನ ಪಾರ್ಕಿಂಗ್ ಜಾಗ ಈಗಾಗಲೇ ಕಾರು, ದ್ವಿಚಕ್ರ ವಾಹನಗಳಿಂದ ತುಂಬಿದೆ. ವರ್ತುಲ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಪರದಾಡುತ್ತಿದ್ದಾರೆ.

ADVERTISEMENT

ಚುನಾವಣೆ ಆಯೋಗದ ತಂಡ ಬೀಡು

ಮದುವೆ ನೆಪದಲ್ಲಿ ಮತದಾರರಿಗೆ ಉಡುಗೊರೆ ಕೊಟ್ಟು ಆಮಿಷವೊಡ್ಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಆರು ತಂಡಗಳು ಮದುವೆ ನಡೆಯುತ್ತಿರುವ ಸ್ಥಳದಲ್ಲಿ ಬೀಡು ಬಿಟ್ಟಿವೆ. ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅನುಮಾನ ಬಂದವರ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರತಿಯೊಂದನ್ನು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದಾರೆ. ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಮದುವೆ ಮಂಟಪದ ಸುತ್ತಮುತ್ತ ಓಡಾಡುತ್ತಿದ್ದಾರೆ.

ಆನಂದ್ ಸಿಂಗ್ ಅವರ ಪತ್ನಿ ಲಕ್ಷ್ಮಿ, ಮಗಳು ವೈಷ್ಣವಿ, ತಂದೆ ಪೃಥ್ವಿರಾಜ್ ಸಿಂಗ್, ತಾಯಿ ಸುಮಿತ್ರಾಬಾಯಿ ಇದ್ದಾರೆ.

ಕೊಟ್ಟೂರು ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ, ಸಂಸದೀಯ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ,ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕ ರಾಜುಗೌಡ, ಬಿಜೆಪಿ ಮುಖಂಡ ನೇಮರಾಜ ನಾಯ್ಕ,ಕಲ್ಲಡ್ಕ ಪ್ರಭಾಕರ್ ಭಟ್ ಪಾಲ್ಗೊಂಡಿದ್ದಾರೆ. ಗಣ್ಯರು, ಸಿಂಗ್ ಕುಟುಂಬದ ಸಂಬಂಧಿಕರಿಗೆ ಹಾಗೂ ಜನಸಾಮಾನ್ಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ

ಇನ್ನಷ್ಟು ಗಣ್ಯರು ಪಾಲ್ಗೊಳ್ಳುವನಿರೀಕ್ಷೆ ಇದೆ.ಅದ್ಧೂರಿ ಸೆಟ್ ಎದುರು ಜನರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.