ಬೆಂಗಳೂರು: ಹಲವಾರು ವರ್ಷಗಳಿಂದ ಇರುವ ಸಮಸ್ಯೆಗಳು, ನಗರದ ಕುಂದುಕೊರತೆಗಳ ಬಗ್ಗೆ ಕಂಪನಿಗಳು ಧ್ವನಿ ಎತ್ತಿದರೆ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಟೀಕಿಸಿದ್ದಾರೆ.
‘ಕಂಪನಿಗಳು ಬೇಕಿದ್ದರೆ ಬೆಂಗಳೂರಿನಲ್ಲಿ ಇರಲಿ, ಇಲ್ಲವಾದರೆ ಹೋಗಲಿ’ ಎಂದು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಯನ್ನು ಖಂಡಿಸಿದ ಅವರು, ‘ಇದು ಯಾವ ಸಂಸ್ಕೃತಿ, ಇದು ಜನಪರ ಸರ್ಕಾರದ ಮಾತುಗಳೇ? ಈ ದುರಹಂಕಾರದ ಮಾತುಗಳನ್ನು ಬಿಟ್ಟು, ಜನಪರವಾಗಿ ಕೆಲಸ ಮಾಡಿ ವಿಶ್ವಾಸ ಮೂಡಿಸಬೇಕು’ ಎಂದು ತಿಳಿಸಿದರು.
ಬೆಂಗಳೂರು ವಿಶ್ವದಲ್ಲೇ ಮಾನ್ಯತೆ ಪಡೆದ ಹೆಮ್ಮೆಯ ನಗರ. ಉದ್ಯಮಶೀಲತೆ, ತಂತ್ರಜ್ಞಾನ ಮತ್ತು ನವೋದ್ಯಮಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನ ಸಮಸ್ಯೆ, ವೈಫಲ್ಯವನ್ನು ತಿಳಿಸಿ, ಕುಂದುಕೊರತೆ ಹೇಳಿದಾಗ ಅದನ್ನು ಇವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಆಕ್ಷೇಪಿಸಿದರು.
ಯುವ ಜನರ ಪರಿಸ್ಥಿತಿ ಏನಾಗಬೇಕು?
ರಾಜ್ಯದಲ್ಲಿರುವ ಸಾಫ್ಟ್‌ವೇರ್ ಕಂಪನಿಗಳು ಬೇರೆ ರಾಜ್ಯಗಳಿಗೆ ಹೋದರೆ ಇಲ್ಲಿರುವ ಯುವಜನರ ಪರಿಸ್ಥಿತಿ ಏನಾಗಬೇಕು ಎಂದು ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಅವರು ಪ್ರಶ್ನಿಸಿದರು.
ಬೆಂಗಳೂರಿನ ಹಲವು ಸಾಫ್ಟ್‌ವೇರ್ ದಿಗ್ಗಜರು ಮತ್ತು ಹಲವು ಕಂಪನಿಗಳು ಬೆಂಗಳೂರಿನ ರಸ್ತೆ ಗುಂಡಿಗಳ ತೊಂದರೆ ಬಗ್ಗೆ ಮಾತನಾಡಿದಾಗ ಅವರನ್ನು ಕರೆಸಿ ಮಾತನಾಡಿ, ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ, ಅವರ ಜತೆ ಮಾತನಾಡದೇ ಉಪಮುಖ್ಯಮಂತ್ರಿ ಶಿವಕುಮಾರ್ ಅವರು ನೀಡಿರುವ ಹೇಳಿಕೆ ಇಡೀ ಸಾಫ್ಟ್‌ವೇರ್ ಕಂಪನಿಗಳಿಗೆ ಬಹಳಷ್ಟು ನೋವು ಉಂಟುಮಾಡಿದೆ ಎಂದು ಹೇಳಿದರು.
ರಿಂಗ್ ರಸ್ತೆಗಳು ಸೇರಿ, ಬೆಂಗಳೂರಿನ ಎಲ್ಲ ರಸ್ತೆಗಳೂ ಗುಂಡಿ ಬಿದ್ದು ಅವ್ಯವಸ್ಥೆಯಾಗಿದೆ. ಸರ್ಕಾರದಿಂದ ರಸ್ತೆ ಅಭಿವೃದ್ಧಿಗೆ ₹25 ಕೋಟಿ ಅಥವಾ ₹50 ಕೋಟಿ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ, ರಸ್ತೆ ಸರಿಪಡಿಸಲು ಈವರೆಗೆ ಒಂದೂ ಟೆಂಡರ್ ಕರೆದಿಲ್ಲ ಎಂದು ಆರೋಪಿಸಿದರು.
ಬೆಂಗಳೂರಿನ ಜನ ಶೇ 60ರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಆದ್ದರಿಂದ, ಎಲ್ಲ ಸಾಫ್ಟ್‌ವೇರ್ ಕಂಪನಿಗಳ ಜತೆ ಮಾತನಾಡಿ, ರಾಜ್ಯಕ್ಕೆ ಮರಳುವಂತೆ ಮಾಡಬೇಕೆ ಹೊರತು ನೋವು ಉಂಟು ಮಾಡುವ ಹೇಳಿಕೆಯನ್ನು ನೀಡಬಾರದು. ಬದಲಾಗಿ ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.