
ಬೆಂಗಳೂರು: ‘ಮಹಾತ್ಮಾ ಗಾಂಧೀಜಿ ಹೆಸರಿನಲ್ಲಿ ಯುಪಿಎ ಸರ್ಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿತ್ತು. ನಾಥೂರಾಮ್ ಗೋಡ್ಸೆ ಪಕ್ಷದವರು ಗಾಂಧೀಜಿ ಹೆಸರನ್ನು ತೆಗೆಯಲು ಮುಂದಾಗಿದ್ದಾರೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಬಿಡುವುದಿಲ್ಲ’ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುಡುಗಿದರು.
‘ನ್ಯಾಷನಲ್ ಹೆರಾಲ್ಡ್’ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಸುಳ್ಳು ಕೇಸ್ ದಾಖಲಿಸಲಾಗಿದೆ ಹಾಗೂ ನರೇಗಾದಿಂದ ಗಾಂಧೀಜಿ ಹೆಸರು ಕೈಬಿಟ್ಟು ಅವಮಾನ ಮಾಡಲಾಗಿದೆ ಎಂದು ದೂರಿ ಕೆಪಿಸಿಸಿ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ‘ಸತ್ಯಮೇವ ಜಯತೇ’ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಶಿವಕುಮಾರ್, ‘ಬಿಜೆಪಿಗೆ ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧಿ ಚಿತ್ರವನ್ನು ತೆಗೆಯಲಿ’ ಎಂದು ಸವಾಲು ಹಾಕಿದರು.
‘ಬಡವರಿಗೆ ಉದ್ಯೋಗ ನೀಡುವ ಯೋಜನೆಯ ಹೆಸರಿನಿಂದ ಗಾಂಧೀಜಿ ಅವರ ಹೆಸರು ತೆಗೆಯುತ್ತಿದ್ದೀರಿ ಎಂದರೆ ನೀವು ದೇಶದ್ರೋಹಿಗಳು. ಗಾಂಧಿ ಅವರ ಹೆಸರು ತೆಗೆಯುವ ಮೂಲಕ ಮತ್ತೊಮ್ಮೆ ಗಾಂಧಿ ಅವರನ್ನು ಕೊಲ್ಲುತ್ತಿದ್ದೀರಿ. ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿದ್ದೀರಿ’ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
‘ಈ ಯೋಜನೆಯನ್ನು ನಾಶ ಮಾಡಬೇಕು ಎಂದು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ವಿರುದ್ಧ ರಾಜ್ಯದಲ್ಲಿ ದೊಡ್ಡ ಆಂದೋಲನ ಆರಂಭವಾಗಲಿದೆ. ಗಾಂಧಿ ಅವರ ಹೆಸರನ್ನು ತೆಗೆಯುವುದು ಅವರಿಗೆ ಮಾಡಲಾಗುವ ಅಪಮಾನ. ಇದಕ್ಕೆ ದೇಶದ ಜನ ಉತ್ತರ ನೀಡಲಿದ್ದಾರೆ’ ಎಂದರು.
‘ನ್ಯಾಷನಲ್ ಹೆರಾಲ್ಡ್‌ಗೆ ನಾನು ಮತ್ತು ಡಿ.ಕೆ. ಸುರೇಶ್ ದೇಣಿಗೆ ನೀಡಿದ್ದೇವೆ. ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನಮ್ಮ ಶಾಸಕರು ತಮ್ಮ ವೇತನದಲ್ಲಿ ಪ್ರತಿ ತಿಂಗಳು ₹ 25 ಸಾವಿರ ನೀಡುತ್ತಿದ್ದಾರೆ. ಪಕ್ಷಕ್ಕೆ ದೇಣಿಗೆ ಕೊಟ್ಟವರ ಮೇಲೆ ಪ್ರಕರಣ ದಾಖಲಿಸಲು ಸಾಧ್ಯವೇ? ಅದೇ ರೀತಿ ನ್ಯಾಷನಲ್ ಹೆರಾಲ್ಡ್ ಆಸ್ತಿ ಉಳಿಸಿಕೊಳ್ಳಲು ಸುಮಾರು ₹ 100 ಕೋಟಿಯಷ್ಟು ಕಾಂಗ್ರೆಸಿಗರು ನೀಡಿದರು. ಈ ಹಣ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಖಾತೆಗೆ ಹೋಗಿಲ್ಲ. ಆದರೂ ಹಣ ಅಕ್ರಮ ವರ್ಗಾವಣೆ ಕೇಸ್ ದಾಖಲಿಸಿದ್ದಾರೆ’ ಎಂದು ಕಿಡಿಕಾರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಉಪಾಧ್ಯಕ್ಷ ಬಿ.ಎಲ್. ಶಂಕರ್, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಮಯೂರ್ ಜೈಕುಮಾರ್, ಬಿ.ವಿ. ಶ್ರೀನಿವಾಸ್, ಶಾಸಕರಾದ ಎ.ಸಿ. ಶ್ರೀನಿವಾಸ್, ಪ್ರದೀಪ್ ಈಶ್ವರ್, ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.