ADVERTISEMENT

ಕೆಪಿಸಿಸಿ | ಪಕ್ಷದ ನೂತನ ಅಧ್ಯಕ್ಷರಾಗಿ ಜೂನ್‌ 14ರಂದು ಡಿಕೆಶಿ ಪದಗ್ರಹಣ?

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 20:50 IST
Last Updated 6 ಜೂನ್ 2020, 20:50 IST
   

ಬೆಂಗಳೂರು: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇದೇ 14ರಂದು ಪಕ್ಷದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಾಧ್ಯತೆ ಇದೆ.

‘ಲಾಕ್‌ಡೌನ್ ಅವಧಿ ಜಾರಿಯಲ್ಲಿದ್ದರೂ ಅದರ ಎಲ್ಲ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಪಕ್ಷದ 150 ಪ್ರಮುಖ ನಾಯಕರು ಮಾತ್ರ ಕಾರ್ಯಕ್ರಮದಲ್ಲಿ ನೇರ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ, ತಾಲ್ಲೂಕು ಹಾಗೂ ಪಂಚಾಯಿತಿ ಮಟ್ಟದ ಸ್ಥಳೀಯ ಕಾರ್ಯಕರ್ತರು ನೇರ ಪ್ರಸಾರದ ಮೂಲಕ ಅಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಸರಳವಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು’ ಎಂದು ಕೋರಿ ಶಿವಕುಮಾರ್ ಅವರು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಅನುಮತಿ ನೀಡುವ ಕುರಿತಂತೆ ಜೂನ್‌ 8ರ ಬಳಿಕ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದೂ ಗೊತ್ತಾಗಿದೆ.

ADVERTISEMENT

ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಪಕ್ಷ ಧ್ವಜ ಪಡೆದುಕೊಂಡು, ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಶಿವಕುಮಾರ್‌ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಅಲಂಕರಿಸಲಿದ್ದಾರೆ.

ಈ ಹಿಂದೆ ಮೂರು ಬಾರಿ ಡಿ.ಕೆ. ಶಿವಕುಮಾರ್‌ ‘ಪದಗ್ರಹಣ’ಕ್ಕೆ ಮುಹೂರ್ತ ನಿಗದಿಪಡಿಸಲಾಗಿತ್ತು. ಏಪ್ರಿಲ್‌ ಎರಡನೇ ವಾರದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮೊದಲು ತೀರ್ಮಾನಿಸಲಾಗಿತ್ತು. ಲಾಕ್‌ಡೌನ್‌ ಘೋಷಣೆ ಆಗಿದ್ದರಿಂದ, ಬಳಿಕ ಮೇ 31ರಂದು ಆಯೋಜಿಸಲು ಸಿದ್ಧತೆ ನಡೆದಿತ್ತು. ಆದರೆ, ಲಾಕ್‌ಡೌನ್‌ ವಿಸ್ತರಿಸಿದ್ದರಿಂದ ಮತ್ತೆ ಜೂನ್‌ 7ಕ್ಕೆ ನಿಗದಿಪಡಿಸಲಾಗಿತ್ತು.

ಆದರೆ, ಲಾಕ್‌ಡೌನ್‌ ಅವಧಿಯಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮ ಆಯೋಜಿಸಲು ಅವಕಾಶ ಇಲ್ಲದೇ ಇರುವುದರಿಂದ ಅಧಿಕಾರ ಸ್ವೀಕರಿಸಲು ಶಿವಕುಮಾರ್‌ ಅವರಿಗೆ ಸಾಧ್ಯ ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.