
ಬೆಂಗಳೂರು: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ಶಾಸಕರ ಸಂಖ್ಯೆಯು 70ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಒಳಗಿನ ಪ್ರಸ್ತುತ ರಾಜಕೀಯ ಬೆಳವಣಿಗೆ ಗಮನಿಸಿದರೆ ಶಾಸಕರ ಖರೀದಿ ಶಂಕೆ ಮೂಡಿಸುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಶಿವಕುಮಾರ್ ಜೊತೆ 10–12 ಶಾಸಕರಿದ್ದರು ಎಂದು ಮಾಧ್ಯಮಗಳಲ್ಲಿ ವರದಿ ಬಂದಿತ್ತು. ಅವರ ಬೆಂಬಲಿಗ ಶಾಸಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ಪರಪ್ಪನ ಕಾರಾಗೃಹದಲ್ಲಿರುವ ಶಾಸಕರ ಸಹಿಯನ್ನೂ ಪಡೆದಿದ್ದಾರೆ. ವ್ಯವಹಾರ ಜೋರಾಗಿ ನಡೆಯುತ್ತಿರುವ ಸಾಧ್ಯತೆ ಇದೆ. ಶಿವಕುಮಾರ್ ಅವರಂತೆ ಸಿದ್ದರಾಮಯ್ಯ ಸಹ ಎಟಿಎಂ ನಿರ್ವಹಣೆಯಲ್ಲಿ ಪಳಗಿದ್ದಾರೆ’ ಎಂದರು.
‘ಶಿವಕುಮಾರ್ ವೇಗದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಕಾಗಿದ್ದಾರೆ. ಮೆತ್ತಗಾಗಿದ್ದಾರೆ. ಐದು ವರ್ಷ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದವರು ಈಗ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದು ಮಾತು ಬದಲಿಸಿದ್ದಾರೆ. ರಾಜ್ಯದ ಜನರಿಗೆ ಮುಖ್ಯಮಂತ್ರಿ ಯಾರು ಎನ್ನುವುದೇ ಗೊಂದಲವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ’ ಎಂದು ದೂರಿದರು.
‘ಮಲ್ಲಿಕಾರ್ಜುನ ಖರ್ಗೆ ಹೆಸರಿಗೆ ಮಾತ್ರ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಕರ್ನಾಟಕದವರೇ ಆದರೂ ರಾಜ್ಯದ ಬೆಳವಣಿಗೆಳನ್ನು ನಿಯಂತ್ರಿಸುವ ಅಧಿಕಾರ ಅವರಿಗೆ ಇಲ್ಲವಾಗಿದೆ. ಅದಕ್ಕಾಗಿ ಹೈಕಮಾಂಡ್‌ನತ್ತ ಚಿತ್ತಹರಿಸಿದ್ದಾರೆ. ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ದುರ್ಬಲವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.