ADVERTISEMENT

ಮುಂದಿನ ಚುನಾವಣೆ ನನ್ನ ನಾಯಕತ್ವ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 0:30 IST
Last Updated 21 ಫೆಬ್ರುವರಿ 2025, 0:30 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

ಬೆಂಗಳೂರು: ತಮ್ಮ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಶಿವಕುಮಾರ್ ಬಳಿಯಿಂದ ಕಿತ್ತುಕೊಳ್ಳಬೇಕು ಎಂಬ ಉದ್ದೇಶದಲ್ಲಿ ದಲಿತ ಸಚಿವರು ನಡೆಸುತ್ತಿರುವ ಚಟುವಟಿಕೆ ಹಾಗೂ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆಯ ಸುದ್ದಿಗಳು ಹರಿದಾಡುತ್ತಿರುವ ಹೊತ್ತಿನಲ್ಲಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. 

ADVERTISEMENT

ಆಗಿದ್ದಿಷ್ಟು: 

ಗುರುವಾರ ನಡೆದ ಸರ್ಕಾರಿ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಒಪಿಎಸ್‌ ಜಾರಿ ಮಾಡುತ್ತೇವೆ. ನೀವು ಬಿಟ್ಟರೂ ಈ ವಿಚಾರವನ್ನು ನಾವು ಬಿಡುವುದಿಲ್ಲ. ಆದರೆ, ಸ್ವಲ್ಪ ತಾಳ್ಮೆಯಿರಲಿ’ ಎಂದರು. ಆಗ ನೌಕರರು, ‘ಡಿಕೆ–ಡಿಕೆ’ ಎಂದು ಕೂಗಿದರು.

‘ನಾನು ಮುಂದಿನ ಬಾರಿ ಚುನಾವಣೆಗೆ ನಿಂತಾಗ, ನನ್ನ ನಾಯಕತ್ವದಲ್ಲಿ ನಡೆದಾಗ ದಯವಿಟ್ಟು ಈ ಪದವನ್ನು ಉಪಯೋಗಿಸಿ. ನಾನು ವಿಧಾನಸೌಧದಲ್ಲಿ ಇರುವವನೇ. ನಾನು ಇನ್ನು ಎಂಟತ್ತು ವರ್ಷ ಬಿಟ್ಟು ಹೋಗುವುದಿಲ್ಲ. ನನ್ನ ಆರೋಗ್ಯ ಇನ್ನೂ ಗಟ್ಟಿಯಾಗಿದೆ. ನನ್ನ ಮೇಲೆ ನಂಬಿಕೆಯಿಡಿ’ ಎಂದು ಮಾರ್ಮಿಕವಾಗಿ ಹೇಳಿದರು.

‘ನಾನು 1989ರಿಂದ ವಿಧಾನಸಭೆಯಲ್ಲಿ ಇದ್ದೇನೆ. ಕಾರ್ಯಾಂಗದ ಭಾಗವಾಗಿ ನೀವೀದ್ದೀರಿ. ನಿಮ್ಮ ಜವಾಬ್ದಾರಿಯ ಅರಿವು ನನಗಿದೆ. ನಾನು ಕೂಡ ಬಡ ನೌಕರನಂತೆ 38 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಶಾಸಕನಾಗಿ ಸರ್ಕಾರದ ವೇತನ ಪಡೆದಿದ್ದೇನೆ. ನನಗೂ ಪಿಂಚಣಿ ಬರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.