ADVERTISEMENT

ವಿಧಾನಸಭೆ: ತೋಳೇರಿಸಿದ ಡಿಸಿಎಂ ಡಿಕೆಶಿ, ಎದೆಯುಬ್ಬಿಸಿದ ಮಾಜಿ DCM ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 16:09 IST
Last Updated 13 ಆಗಸ್ಟ್ 2025, 16:09 IST
<div class="paragraphs"><p>ವಿಧಾನ ಸಭೆ ಕಾರ್ಯಕಲಾಪದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು</p></div>

ವಿಧಾನ ಸಭೆ ಕಾರ್ಯಕಲಾಪದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು

   

ಬೆಂಗಳೂರು: ನೀನು ಭ್ರಷ್ಟಾಚಾರದ ಪಿತಾಮಹ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೋಳೇರಿಸಿದಾಗ, ‘ನೀನು ಭ್ರಷ್ಟಾಚಾರಿ ಅಂತ ಇಡೀ ಲೋಕಕ್ಕೇ ಗೊತ್ತು’ ಎಂದು ಬಿಜೆಪಿಯ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಎದೆಯುಬ್ಬಿಸಿ ತಿರುಗೇಟು ನೀಡಿದರು. ಇದು ಆಡಳಿತ–ವಿರೋಧ ಪಕ್ಷದ ಸದಸ್ಯರ ನಡುವೆ ಏಕವಚನದ ಆರೋಪ–ಪ್ರತ್ಯಾರೋಪಗಳಿಗೆ ಕಾರಣವಾಯಿತು.

ವಿಧಾನಸಭೆಯಲ್ಲಿ ಬುಧವಾರ ಭೋಜನ ವಿರಾಮದ ಬಳಿಕ ರಸಗೊಬ್ಬರ ಕೊರತೆ ಕುರಿತು ಚರ್ಚೆ ನಡೆಯುತ್ತಿದ್ದಾಗ, ವಿಷಯಾಂತರವಾಗಿ ಸ್ಮಾರ್ಟ್‌ ಮೀಟರ್‌, ರಾಮನಗರ ರಾಜಕೀಯ, ಜೈಲು, ಮತ ಕಳ್ಳತನ ಪ್ರಸ್ತಾಪಗೊಂಡು ಕಾಂಗ್ರೆಸ್‌-ಬಿಜೆಪಿ ಸದಸ್ಯರು ಅಕ್ಷರಶಃ ಸಮರಕ್ಕೆ ಮುಂದಾದರು.

ADVERTISEMENT

ಈ ವೇಳೆ ಡಿ.ಕೆ. ಶಿವಕುಮಾರ್‌ ಅವರ ಆವೇಶಭರಿತ ಮಾತುಗಳು ವಿರೋಧ ಪಕ್ಷದ ಸದಸ್ಯರ ಮೇಲೆ ಆಡಳಿತ ಸದಸ್ಯರು ಮುಗಿ‌ಬೀಳುವಂತೆ ಮಾಡಿತು. ಕೋಲಾಹಲ, ಗದ್ದಲ ಹೆಚ್ಚಿದಾಗ ಸಭಾಧ್ಯಕ್ಷ ಪೀಠದಲ್ಲಿದ್ದ ಸಿ.ಎಸ್‌. ನಾಡಗೌಡ ಅವರು ಕಲಾಪವನ್ನು ಐದು ನಿಮಿಷ ಮುಂದೂಡಿದರು.

ರಸಗೊಬ್ಬರ ಕೊರತೆ ಬಗ್ಗೆ ಬಿಜೆಪಿಯ ಅರವಿಂದ ಬೆಲ್ಲದ ಮಾತಿಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ‘ಸದನಕ್ಕೆ ಸುಳ್ಳು ಹೇಳಬೇಡಿ. ನೀವು ಸುಳ್ಳು ಹೇಳಿದರೂ ಕೇಳಿಸಿಕೊಂಡು ಕುಳಿತುಕೊಳ್ಳಬೇಕೇ’ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು. ಅದಕ್ಕೆ ಅಶ್ವತ್ಥನಾರಾಯಣ, ‘ಹಾಗಾದರೇ ನೀವು ಸತ್ಯವಂತರಾ’ ಎಂದು ಕೆಣಕಿದರು.

ಮಧ್ಯಪ್ರವೇಶಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್‌, ‘ನೀವು ಸತ್ಯ ಹರಿಶ್ಚಂದ್ರರಾ’ ಎಂದು ಪ್ರಶ್ನಿಸಿದರು. ರೊಚ್ಚಿಗೆದ್ದ ಅಶ್ವತ್ಥನಾರಾಯಣ, ‘ನಿಮ್ಮ ಇಲಾಖೆ ಬಗ್ಗೆ ಮಾತನಾಡಲು ನಿಮಗೆ ಧಮ್‌ ಇಲ್ಲ. ಸ್ಮಾರ್ಟ್‌ ಮೀಟರ್‌ ಬಗ್ಗೆ ಉತ್ತರ ನೀಡಲಾಗದೇ ಓಡಿ ಹೋದವರು ನೀವು’ ಎಂದು ಮುಗಿಬಿದ್ದರು. ಆಗ ಜಾರ್ಜ್‌, ‘ಸ್ಮಾರ್ಟ್ ಮೀಟರ್‌ ವಿಚಾರ ನ್ಯಾಯಾಲಯದಲ್ಲಿದೆ. ಕಾನೂನು ಇದೆ. ನೀವು ಸುಳ್ಳು ಹೇಳಬೇಡಿ. ಇಡೀ ಇಲಾಖೆ ಲೂಟಿ ಹೊಡೆದವರು ನೀವು’ ಎಂದು ಆರೋಪಿಸಿದರು‌. ಮತ್ತಷ್ಟು ಆಕ್ರೋಶಗೊಂಡ ಅಶ್ವತ್ಥನಾರಾಯಣ, ‘ನೀವು ಅಸಮರ್ಥ ಸಚಿವ’ ಎಂದು ವಾಗ್ದಾಳಿ ನಡೆಸಿದರು.

ಜಾರ್ಜ್‌ ಬೆನ್ನಿಗೆ ನಿಂತ ಡಿ.ಕೆ.ಶಿವಕುಮಾರ್‌, ‘ನೀನು ಅಸಮರ್ಥ. ಜನ ವೋಟ್‌ ಹಾಕಿ ಜಾರ್ಜ್‌ ಅವರನ್ನು ಇಲ್ಲಿ ಕೂರಿಸಿದ್ದಾರೆ. ನೀನು ಭ್ರಷ್ಟಾಚಾರದ ಪಿತಾಮಹ’ ಎಂದು ಅಶ್ವತ್ಥನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು. 

ಸದಸ್ಯರ ಮಾತು ಹಳಿ ತಪ್ಪುತ್ತಿದ್ದಂತೆ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದರು. ಪೀಠದಿಂದ ಸಭಾಧ್ಯಕ್ಷರು ತೆರಳಿದ ನಂತರವೂ ಎರಡೂ ಕಡೆಯ ಸದಸ್ಯರು ಏರಿದ ದನಿಯಲ್ಲಿ ಪರಸ್ಪರ ಕೆಲಹೊತ್ತು ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಾತಿನ ಸಮರಕ್ಕೆ ಮೂಕಪ್ರೇಕ್ಷರಾದರು.

ತಮ್ಮ ಕೊಠಡಿಗೆ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಆಡಳಿತ ಮತ್ತು ವಿರೋಧ ಪಕ್ಷದ ನಾಯಕರನ್ನು ಕರೆಸಿಕೊಂಡು ಸಮಾಧಾನಪಡಿಸಿದರು.

ಏಟು–ಎದಿರೇಟು

ಅಶ್ವತ್ಥನಾರಾಯಣ: ‘ಕೊಲೆಗಡುಕ, ಅಸಮರ್ಥ, ಭ್ರಷ್ಟಾಚಾರದ ಸರ್ಕಾರ’ 

ಡಿಕೆಶಿ: ‘ನೀನು ಅಸಮರ್ಥ’

ಅಶ್ವತ್ಥನಾರಾಯಣ: ‘ನಿಮ್ಮ ಸರ್ಕಾರ ಜನ ವಿರೋಧಿ. ಅಸಮರ್ಥ, ಭ್ರಷ್ಟಾಚಾರದ ಸರ್ಕಾರ, ನೈತಿಕತೆ ಇಲ್ಲ’

ಡಿಕೆಶಿ: ‘ನೀನು ಭ್ರಷ್ಟಾಚಾರದ ಪಿತಾಮಹ’

ಅಶ್ವತ್ಥನಾರಾಯಣ: ‘ಇಡೀ ಲೋಕಕ್ಕೆ ಗೊತ್ತು. ಹೇಳುವುದೇ ಬೇಡ... ಯಾರು ಭ್ರಷ್ಟಾಚಾರದ ಪಿತಾಮಹ ಎಂದು’

ಡಿಕೆಶಿ: ‘ರಾಮನಗರಕ್ಕೆ ಬಂದಿದ್ದಲ್ಲಪ್ಪ ಒಂದು ಸೀಟೂ ಬರಲಿಲ್ಲ.. ನಿನಗೆ. ಠೇವಣಿಯೂ ಸಿಗಲಿಲ್ಲ’

ಅಶ್ವತ್ಥನಾರಾಯಣ: ‘ಅಸಮರ್ಥರು, ಭ್ರಷ್ಟಾಚಾರದ ಸರ್ಕಾರ’ ( ಮತ್ತೆ.... ಮತ್ತೆ) 

ಡಿಕೆಶಿ: (ಕೆರಳಿ ತೋಳೇರಿಸುತ್ತಾ...) ‘ಒಬ್ಬ ಮೈನಾರಿಟಿ ಸಚಿವರಿಗೆ ಅಸಮರ್ಥರು ಎಂದು ನೀನು ಹೇಳುತ್ತಿದ್ದಿಯಾ’ 

(ಹಲವು ಬಾರಿ ಇಬ್ಬರೂ ಪರಸ್ಪರ ಏಕವಚನದಿಂದ ಬೈದಾಡಿಕೊಂಡರು

ಯಾರೇನೆಂದರು?

ಪ್ರತಿಯೊಬ್ಬ ಸದಸ್ಯರೂ ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಂಡು ಮಾತನಾಡಬೇಕು. ಶಿಸ್ತಿಗೆ ಆದ್ಯತೆ ನೀಡಬೇಕು. ವಿಷಯಕ್ಕೆ ಸೀಮಿತವಾಗಿ ಚರ್ಚೆ ಮಾಡಬೇಕು. ಮಾತನಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು
ಯು.ಟಿ. ಖಾದರ್, ವಿಧಾನಸಭಾಧ್ಯಕ್ಷ
ನಮ್ಮ ಮಾತು, ನಡೆ ಬಹಳ ಮುಖ್ಯ. ವಿರೋಧ ಪಕ್ಷಗಳ ಸದಸ್ಯರು ರಚನಾತ್ಮಕ ಟೀಕೆ ಮಾಡಬೇಕು. ತಪ್ಪು ಪದ ಬಳಕೆ ಬೇಡ. ಇಲ್ಲಿ ಯಾರೂ ಬೃಹಸ್ಪತಿಗಳಲ್ಲ. ಮಾತನಾಡುವಾಗ ಇನ್ನೊಬ್ಬರಿಗೆ ನೋವು ಆಗದಂತೆ ಮಾತನಾಡಬೇಕು
ಸಿದ್ದರಾಮಯ್ಯ, ಮುಖ್ಯಮಂತ್ರಿ
ನನಗೂ ಬಿಸಿ ರಕ್ತ ಇದೆ. ಆ ಬಿಸಿ ರಕ್ತ ಎಲ್ಲಿ ಬಳಸಬೇಕೊ ಅಲ್ಲಿ ಬಳಸುತ್ತೇನೆ. ಸ್ವಾಭಿಮಾನ, ಆತ್ಮಗೌರವಕ್ಕೆ ಧಕ್ಕೆಯಾದಾಗ ನೋವಾಗುತ್ತದೆ. ಜಾರ್ಜ್ ಹಿರಿಯರು, ಅವರಿಗೆ ಅಸಮರ್ಥ ಅಂದಿದ್ದು ಸರಿಯಲ್ಲ. ಜಾರ್ಜ್‌ಗೆ ಅವಮಾನವಾದರೆ ನಾನು ಸಹಿಸಲ್ಲ
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
ಸದಸ್ಯರು ವೈಯಕ್ತಿಕವಾಗಿ ಟೀಕೆ ಮಾಡದಿದ್ದರೆ ಒಳ್ಳೆಯದು. ಟೀಕೆ ಮಾಡಲೆಂದೇ ಇರುವವರು ನಾವು. ಆದರೆ, ಆಡಳಿತ ಪಕ್ಷದವರು ಸಂಯಮದಿಂದ ಇರಬೇಕು. ಶಿವಕುಮಾರ್‌ ಅವರು ಸಂಯಮ ಕಳೆದುಕೊಂಡು ಮಾತನಾಡಿದ್ದಾರೆ
ಆರ್‌. ಅಶೋಕ, ವಿರೋಧ ಪಕ್ಷದ ನಾಯಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.