ADVERTISEMENT

ಕಾಂಗ್ರೆಸ್‌ ಸೋಮಾರಿತನದಿಂದ ಮೇಕೆದಾಟು ಯೋಜನೆ ವಿಳಂಬ: ಸಾಹಿತಿ ದೊಡ್ಡರಂಗೇಗೌಡ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 10:19 IST
Last Updated 12 ಜನವರಿ 2022, 10:19 IST
ಸಾಹಿತಿ ದೊಡ್ಡರಂಗೇಗೌಡ
ಸಾಹಿತಿ ದೊಡ್ಡರಂಗೇಗೌಡ   

ಬೆಂಗಳೂರು: ಮೇಕೆದಾಟು ಯೋಜನೆಯ ಬಗ್ಗೆ ಕಾಂಗ್ರೆಸ್‌ ಸರ್ಕಾರದ ಐದು ವರ್ಷಗಳ ಸೋಮಾರಿತನ ಮತ್ತು ವಿಳಂಬ ಧೋರಣೆಯೇ ಯೋಜನೆ ನನೆಗುದಿಗೆ ಬೀಳಲು ಕಾರಣ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ಹಾಗೂ ಸಾಹಿತಿ ದೊಡ್ಡರಂಗೇಗೌಡ ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್‌, ಓಮೈಕ್ರಾನ್‌ ವ್ಯಾಪಕವಾಗಿ ಹರಡಿದೆ. ಜನ ಸಂದಣಿ ಸೇರಬಾರದೆಂಬ ನಿಯಮವಿದ್ದರೂ ಯಾವ ಪುರುಷಾರ್ಥಕ್ಕೆ ಈ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜಾಥಾ ಈಗ ತೀವ್ರತೆ ಕಳೆದುಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಏಕೈಕ ಉದ್ದೇಶದಿಂದ ಪಾದಯಾತ್ರೆ ನಡೆಸುತ್ತಿದ್ದಾರೆ. ಇಂಥ ಮೋಸದ ಯಾತ್ರೆಗಳು ಫಲ ನೀಡುವುದಿಲ್ಲ. ಕಾನೂನು ಬಲ್ಲವರಿಂದಲೇ ಕಾನೂನು ಉಲ್ಲಂಘನೆ ಆಗುತ್ತಿರುವುದು ವಿಷಾದನೀಯ ಎಂದರು.

ಈ ಯೋಜನೆ ಕುರಿತು ಚೆನ್ನೈನ ಹಸಿರುಪೀಠದಲ್ಲಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ. ಆದರೆ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿ ಇದೆ. ಇದರ ವಿಲೇವಾರಿ ಆಗದೇ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಈ ರೀತಿ ಇರುವಾಗ ಪಾದಯಾತ್ರೆ ಎಷ್ಟರ ಮಟ್ಟಿಗೆ ಸರಿ. ಸಂವಿಧಾನ ಓದಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರಿಗೆ ತಮ್ಮ ಬೆನ್ನು ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶೃತಿ ಮಾತನಾಡಿ, ಕೋವಿಡ್‌ನ ಎರಡು ಅಲೆಗಳಿಂದ ಜನರು ಸಂಷಕ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಲಾಕ್‌ಡೌನ್‌ ಯಾರಿಗೂ ಬೇಕಾಗಿಲ್ಲ. ಈ ಸಂದರ್ಭದಲ್ಲಿ ಪಾದಯಾತ್ರೆ ಸರಿಯಲ್ಲ. ಮೇಕೆದಾಟು ಯೋಜನೆಗೆ ಯಾವ ಕನ್ನಡಿಗನ ವಿರೋಧವೂ ಇಲ್ಲ. ಆದರೆ ಜಾಥಾ ಹೆಸರಿನಲ್ಲಿ ದಾರಿ ತಪ್ಪಿಸುವ ಪ್ರವೃತ್ತಿ ಸಲ್ಲದು ಎಂದು ಹೇಳಿದರು.

‘ಕಾವೇರಿ ನಮ್ಮ ತಾಯಿ. ಕಾವೇರಿ ವಿಚಾರ, ನಾಡಿನ ವಿಚಾರ ಬಂದಾಗ ಎಲ್ಲರೂ ಜತೆಗೂಡಬೇಕು. ಪಕ್ಷ ಕಟ್ಟುವ ಕೆಲಸಕ್ಕಾಗಿ ಇದನ್ನು ಬಳಸಿಕೊಳ್ಳಬಾರದು. ಅಮಾಯಕರ ಜೀವವನ್ನು ಬಲಿ ಕೊಡಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.