ಬೆಂಗಳೂರು: ಮಾದಕ ವಸ್ತುಗಳ (ಡ್ರಗ್ಸ್) ಮಾರಾಟ, ಪೂರೈಕೆ ಜಾಲಕ್ಕೆ ಸಂಪೂರ್ಣ ಕಡಿವಾಣ ಹಾಕಲು ಗೃಹ ಸಚಿವ ಜಿ. ಪರಮೇಶ್ವರ ನೇತೃತ್ವದಲ್ಲಿ ಏಳು ಸಚಿವರ ಕಾರ್ಯಪಡೆ ರಚಿಸಿ ಮೂರು ತಿಂಗಳು ಕಳೆದಿದ್ದರೂ ರಾಜ್ಯದಲ್ಲಿ ನೈಸರ್ಗಿಕ ಹಾಗೂ ಸಿಂಥೆಟಿಕ್ ಡ್ರಗ್ಸ್ ಮಾರಾಟವು ನಿರಾತಂಕವಾಗಿ ನಡೆಯುತ್ತಲೇ ಇದೆ.
ಅಫೀಮು, ಗಾಂಜಾ, ಮಾರ್ಫಿನ್, ಹೆರಾಯಿನ್, ಎಂಡಿಎಂಎ, ಎಲ್‌ಎಸ್‌ಡಿ, ಕೊಕೇನ್‌ನಂತಹ ಡ್ರಗ್ಸ್‌ಗಳ ಮಾರಾಟ ಹಾಗೂ ಪೂರೈಕೆಗೆ ಕಡಿವಾಣ ಬಿದ್ದಿಲ್ಲ. ಡ್ರಗ್ಸ್ ಪೆಡ್ಲರ್‌ಗಳು (ಪೂರೈಕೆದಾರರು) ಸುಲಭವಾಗಿ ಹಣ ಗಳಿಸಲು ಕರ್ನಾಟಕ ರಾಜ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ವರ್ಷಾಂತ್ಯದಲ್ಲಿ ರಾಜ್ಯದ ಪೊಲೀಸರು ನಡೆಸಿದ ದಾಳಿ ವೇಳೆ ಅಪಾರ ಪ್ರಮಾಣದ ಡ್ರಗ್ಸ್ ಜಪ್ತಿ ಆಗಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಮಾದಕವಸ್ತುಗಳ ಪೂರೈಕೆ ಮತ್ತು ಮಾರಾಟದ ಆರೋಪಗಳ ಅಡಿಯಲ್ಲಿ 2024ರಲ್ಲಿ ವಿವಿಧ ಠಾಣೆಗಳಲ್ಲಿ 3,500ಕ್ಕೂ ಎಫ್‌ಐಆರ್‌ಗಳು ದಾಖಲಾಗಿವೆ. 2,417 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ತಿಂಗಳಲ್ಲೇ 527 ಪ್ರಕರಣಗಳು ದಾಖಲಾಗಿವೆ.
ಕಳೆದ ವರ್ಷ (2024) ಒಟ್ಟು 3,081 ಕೆ.ಜಿ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಡ್ರಗ್ಸ್ ಸೇವಿಸಿದ್ದ 1,392 ಮಂದಿ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಮಾದಕ ದ್ರವ್ಯ ನಿಗ್ರಹ ಕಾಯ್ದೆ ಅಡಿ (ಎನ್‌ಡಿಪಿಎಸ್) ಮಂಗಳೂರು ನಗರದಲ್ಲೇ ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ ಜಿಲ್ಲೆ ನಂತರದ ಸ್ಥಾನದಲ್ಲಿದೆ.
ಮಾದಕ ವಸ್ತು ಬಳಕೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ, ಕಳೆದ ತಿಂಗಳು ‘ನಶೆ ಮುಕ್ತ ಕರ್ನಾಟಕ’ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿತ್ತು. ಆ್ಯಪ್ ಮೂಲಕ ಸಾರ್ವಜನಿಕರೇ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಗಾಂಜಾ ಬೆಳೆಯುತ್ತಿರುವ ಬೆಳೆಗಾರರು, ಮಾರಾಟಗಾರರು, ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್ ತಯಾರಿಸುವ ಪ್ರಯೋಗಾಲಯಗಳು, ಸಂಗ್ರಹಣೆ ಮಾಡುತ್ತಿರುವ ಸಂಗ್ರಹಕಾರರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಆಗುತ್ತಿದ್ದಾರೆ. ನಶೆ ಮುಕ್ತ ಆ್ಯಪ್‌ಗೆ ಪ್ರತಿನಿತ್ಯ ನೂರಾರು ಸಂದೇಶಗಳು ಬರುತ್ತಿದ್ದು, ಕಾರ್ಯಾಚರಣೆಗೆ ಅನುಕೂಲವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಡ್ರಗ್ಸ್ ನಿಯಂತ್ರಣಕ್ಕೆ ಕಾರ್ಯಪಡೆ ರಚನೆ ಆಗಿದ್ದರೂ, ಡ್ರಗ್ಸ್ ಹಾವಳಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಡ್ರಗ್ಸ್ ಪೆಡ್ಲರ್‌ಗಳಿಗೆ ಮಾದಕ ವಸ್ತುಗಳನ್ನು ಪೂರೈಸಲು ಮಹಾನಗರಗಳು ಪ್ರಮುಖ ಕೇಂದ್ರಗಳಾಗಿವೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದತ್ತ ಯುವ ಸಮೂಹ ವಾರಾಂತ್ಯದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದು, ಪೆಡ್ಲರ್‌ಗಳು ಈ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಪೂರೈಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಹೊಸ ವರ್ಷಾಚರಣೆ ವೇಳೆ ಮಾದಕ ವಸ್ತುಗಳ ಸಾಗಾಣಿಕೆ ತಡೆಯಲು ತನಿಖಾ ಠಾಣೆಗಳನ್ನು ಸ್ಥಾಪಿಸಿ ತಪಾಸಣೆ ಕೈಗೊಳ್ಳಲಾಗಿತ್ತು. ಹೋಟೆಲ್, ರೆಸ್ಟೋರೆಂಟ್‌ಗಳನ್ನು ತಪಾಸಣೆ ನಡೆಸಲಾಗಿತ್ತು. ಆದರೂ, ಅಪಾರ ಪ್ರಮಾಣದ ಡ್ರಗ್ಸ್ ಪೂರೈಕೆ ಆಗಿದೆ ಎಂದು ಮೂಲಗಳು ತಿಳಿಸಿವೆ.
ಹೇಗೆ ಬರುತ್ತಿದೆ?: ಕೊರಿಯರ್ ಕಂಪನಿಗಳ ಪಾರ್ಸೆಲ್, ಹೊರ ರಾಜ್ಯಗಳಿಂದ ಬಸ್, ಸರಕು ಸಾಗಣೆ ಲಾರಿ, ವಿದೇಶಗಳಿಂದ ಅಂಚೆಗಳ ಮೂಲಕ ಪಾರ್ಸೆಲ್‌ನಲ್ಲಿ ಡ್ರಗ್ಸ್ ಬರುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.
‘ಡ್ರಗ್ಸ್ ದಂಧೆ ತಡೆಗೆ ಸಿಐಡಿ ಘಟಕದಲ್ಲಿ ಎಡಿಜಿಪಿ ಮತ್ತು ಡಿಐಜಿಪಿ (ಮಾದಕ ವಸ್ತು ಹಾಗೂ ಸೈಬರ್ ಅಪರಾಧ) ಹುದ್ದೆಗಳನ್ನು ಸೃಜಿಸಲಾಗಿದೆ. ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಮಾದರಿಯಲ್ಲಿ ರಾಜ್ಯದಲ್ಲೂ ಮಾದಕ ದೃವ್ಯ ನಿಗ್ರಹ ಪಡೆ(ಎಎನ್‌ಟಿಎಫ್) ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಡ್ರಗ್ಸ್ ನಿಯಂತ್ರಣಕ್ಕೆ ಕ್ರಮ ವಹಿಸಿದ್ದೇವೆ. ಒಂದೂವರೆ ತಿಂಗಳಿಂದ ಕಾರ್ಯಾಚರಣೆ ಚುರುಕು ಮಾಡಿದ್ದೇವೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡ್ರಗ್ಸ್ ಪೂರೈಕೆ ಹೆಚ್ಚಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.–ಜಿ.ಪರಮೇಶ್ವರ, ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.