ADVERTISEMENT

ಕೋವ್ಯಾಕ್ಸಿನ್‌ ಪೇಟೆಂಟ್‌ ರದ್ದತಿಗೆ ಚಿಂತನೆ: ಡಿ.ವಿ.ಸದಾನಂದಗೌಡ

ಅಮೆರಿಕಾ ಮಾದರಿಯಲ್ಲಿ ಕೇಂದ್ರದ ಹೆಜ್ಜೆ?

ಅಕ್ರಂ ಮೊಹಮ್ಮದ್
Published 13 ಮೇ 2021, 21:40 IST
Last Updated 13 ಮೇ 2021, 21:40 IST
ಡಿ.ವಿ.ಸದಾನಂದಗೌಡ
ಡಿ.ವಿ.ಸದಾನಂದಗೌಡ    

ಬೆಂಗಳೂರು: ಭಾರತ್‌ ಬಯೋಟೆಕ್‌ ಕೋವಿಡ್‌–19ಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಕೋವ್ಯಾಕ್ಸಿನ್‌’ ಲಸಿಕೆಯ ಬೌದ್ಧಿಕ ಸನ್ನದು ರಕ್ಷಣೆಯ ಪೇಟೆಂಟ್‌ ರದ್ದುಪಡಿಸಬೇಕೆಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಅಮೆರಿಕದಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಲಸಿಕೆಗಳು ಮತ್ತು ಮಹತ್ವದ ಔಷಧಗಳ ಮೇಲಿನ ಪೇಟೆಂಟ್‌ ರದ್ದುಪಡಿಸಿದ ಕ್ರಮದ ಬೆನ್ನಲ್ಲೇ ಕೋವ್ಯಾಕ್ಸಿನ್‌ ಪೇಟೆಂಟ್‌ ರದ್ದುಪಡಿಸುವುದರ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ಕೇಂದ್ರ ರಚಿಸಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಗ್ಗೆ ನೀತಿ ಆಯೋಗ, ಭಾರತೀಯ ಔಷಧ ಸಂಶೋಧನಾ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತಿನಿಧಿಗಳು ಚರ್ಚೆ ನಡೆಸುತ್ತಿದ್ದಾರೆ’ ಎಂದರು.

ADVERTISEMENT

ದೇಶದಲ್ಲಿ ಬೇಡಿಕೆಗೆ ತಕ್ಕಷ್ಟು ಲಸಿಕೆಗಳು ಉತ್ಪಾದನೆ ಆಗುತ್ತಿಲ್ಲ. ಇದರಿಂದಾಗಿ 18–44 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಕೋವ್ಯಾಕ್ಸಿನ್‌ ಪೇಟೆಂಟ್‌ ರದ್ದು ಮಾಡಿದರೆ ಇತರ ಕಂಪನಿಗಳ ಮೂಲಕ ಹೆಚ್ಚು ಲಸಿಕೆ ತಯಾರಿಸಲು ಸಾಧ್ಯವಾಗಬಹುದು ಎಂಬ ಚರ್ಚೆ ನಡೆದಿದೆ ಎಂದರು.

ವಿದೇಶಗಳಿಂದ ಲಸಿಕೆ ಪಡೆಯಲು ತಮಿಳುನಾಡು ಮತ್ತು ಮಹಾರಾಷ್ಟ್ರ ಮಾತ್ರ ಜಾಗತಿಕ ಟೆಂಡರ್‌ ಕರೆದಿವೆ. ಕರ್ನಾಟಕ ಜಾಗತಿಕ ಟೆಂಡರ್‌ ಕರೆದಿಲ್ಲ. ಈ ಸಂಬಂಧ ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.