
ಬೆಂಗಳೂರು: ಗ್ರಾಹಕರಿಂದ ₹ 927 ಕೋಟಿ ಸಂಗ್ರಹಿಸಿ, ಫ್ಲ್ಯಾಟ್ ನೀಡದೆ ವಂಚಿಸಿದ ಪ್ರಕರಣದಲ್ಲಿ ಓಝೋನ್ ಅರ್ಬಾನಾ ಇನ್‌ಫ್ರಾ ಡೆವಲಪರ್ಸ್‌ನ ಪ್ರವರ್ತಕ ಎಸ್. ವಾಸುದೇವನ್ ಅವರ ಕುಟುಂಬಕ್ಕೆ ಸೇರಿದ ₹ 423 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಓಝೋನ್ ಅರ್ಬಾನಾ ಡೆವಲಪರ್ಸ್ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದೆ. 2015–16ರ ವೇಳೆ ಸಾವಿರಾರು ಗ್ರಾಹಕರಿಗೆ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿತ್ತು.
2018ರ ಅಂತ್ಯದ ವೇಳೆಗೆ ಗ್ರಾಹಕರಿಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸಬೇಕಿತ್ತು. ಆದರೆ 2024ರ ವೇಳೆಗೆ ಶೇ 49ರಷ್ಟು ಫ್ಲ್ಯಾಟ್‌ಗಳು ಮಾತ್ರ ಪೂರ್ಣವಾಗಿದ್ದವು. ಕಂಪನಿಯ ವಿರುದ್ಧ ಗ್ರಾಹಕರು ಹಲವು ದೂರುಗಳನ್ನು ನೀಡಿದ್ದರು. ಆ ದೂರುಗಳ ಆಧಾರದಲ್ಲಿ ಇ.ಡಿ ತನಿಖೆ ಆರಂಭಿಸಿತ್ತು. ಇದೇ ಆಗಸ್ಟ್ 10ರಂದು ದೇಶದ ಹಲವೆಡೆ ಶೋಧ ಕಾರ್ಯ ನಡೆಸಿತ್ತು.
‘ಗ್ರಾಹಕರಿಂದ ಪಡೆದ ಮುಂಗಡ ಠೇವಣಿ. ಫ್ಲ್ಯಾಟ್‌ಗಳ ಮೇಲೆ ಪಡೆದ ಸಾಲದ ಮೊತ್ತ ಎಲ್ಲವನ್ನೂ ವಾಸುದೇವನ್ ಅವರು ತಮ್ಮ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ವಂಚನೆಯ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆ’ ಎಂದು ಇ.ಡಿ ಮೂಲಗಳು ಖಚಿತಪಡಿಸಿವೆ.
‘ವಂಚಿಸಿದ ಹಣದಲ್ಲಿ ವಾಸುದೇವನ್ ಕುಟುಂಬದವರು ದೇಶದ ಹಲವೆಡೆ ಮತ್ತು ವಿದೇಶಗಳಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಿದ್ದಾರೆ. ಹಲವು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಷೇರು ಮಾರುಕಟ್ಟೆ ಮತ್ತು ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಎಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಮಾಹಿತಿ ನೀಡಿವೆ.
‘ಬೆಂಗಳೂರು, ದೇವನಹಳ್ಳಿ, ಮುಂಬೈನಲ್ಲಿರುವ ಸ್ಥಿರಾಸ್ತಿಗಳನ್ನು ಈಗ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಾಣಿಜ್ಯ ಸಂಕೀರ್ಣ, ನಿರ್ಮಾಣ ಹಂತದ ವಸತಿ ಸಮುಚ್ಚಯ, ನಿವೇಶನ ಮತ್ತು ವಿಲ್ಲಾಗಳು ಇದರಲ್ಲಿ ಸೇರಿವೆ’ ಎಂದಿವೆ.
‘ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ತನಿಖೆ ಪೂರ್ಣಗೊಂಡ ನಂತರ, ವಂಚನೆಗೆ ಒಳಗಾದ ಗ್ರಾಹಕರಿಗೆ ಅವರ ಹಣ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಇ.ಡಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.