ADVERTISEMENT

ಉಪ ಚುನಾವಣೆ: ‘ಮೈತ್ರಿ’ಗೆ ಮತ್ತೊಂದು ಸವಾಲು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:23 IST
Last Updated 19 ಏಪ್ರಿಲ್ 2019, 19:23 IST
   

ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ನಾಯಕರು ವಿಧಾನಸಭಾ ಉಪಚುನಾವಣೆಯ ಸವಾಲನ್ನು ಎದುರಿಸಬೇಕಿದೆ.

ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ನಿಧನದಿಂದ ತೆರವಾಗಿರುವ ಕುಂದಗೋಳ ಹಾಗೂ ಡಾ. ಉಮೇಶ ಜಾಧವ ರಾಜೀನಾಮೆಯಿಂದ ಖಾಲಿಯಾಗಿರುವ ಚಿಂಚೋಳಿ ಕ್ಷೇತ್ರಗಳ ಉಪಚುನಾವಣೆ ಮೇ 19ರಂದು ನಡೆಯಲಿದೆ. ಇದೇ22ರಂದು ಅಧಿಸೂಚನೆ ಜಾರಿಯಾಗಲಿದೆ. ನಾಮಪತ್ರ ಸಲ್ಲಿಸಲು 29 ಕೊನೆಯ ದಿನ. ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್‌ ಹಿಡಿತದಲ್ಲಿತ್ತು. ಈ ಕ್ಷೇತ್ರಗಳು ಕೈ ತಪ್ಪದಂತೆ ನೋಡಿಕೊಳ್ಳುವುದು ಕಾಂಗ್ರೆಸ್‌ ನಾಯಕರಿಗೆ ಪ್ರತಿಷ್ಠೆಯಾಗಲಿದೆ.

ಬಿಜೆಪಿ ಲೆಕ್ಕಾಚಾರ ಏನು: ಸರ್ಕಾರ ರಚನೆಯಾದ ಆರಂಭದಲ್ಲಿ ಮೈತ್ರಿಕೂಟದ ಬಲ 120 ಇತ್ತು. ಬಿಜೆಪಿ 104 ಶಾಸಕರನ್ನು ಹೊಂದಿದೆ. ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಕೆ‍ಪಿಜೆಪಿ ಶಾಸಕ ಆರ್‌.ಶಂಕರ್ ಹಾಗೂ ಪಕ್ಷೇತರ ಶಾಸಕ ಎಚ್.ನಾಗೇಶ್‌ ವಾಪಸ್‌ ಪಡೆದಿದ್ದರು. ಬಳಿಕ ಕಾಂಗ್ರೆಸ್‌ ಪಾಳಯದಲ್ಲಿ ಕಾಣಿಸಿಕೊಂಡ ನಾಗೇಶ್, ‘ಕಾಂಗ್ರೆಸ್‌ನ ಸಹ ಸದಸ್ಯನಾಗುತ್ತೇನೆ’ ಎಂದು ಆ ಪ‍ಕ್ಷದ ನಾಯಕರಿಗೆ ಪತ್ರ ನೀಡಿದ್ದಾರೆ. ಮೈತ್ರಿ ಸರ್ಕಾರದ ಬಲ 117 ಕ್ಕೆ ಇಳಿದಿದೆ.

ADVERTISEMENT

ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು ಉತ್ತರದಿಂದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೀದರ್‌ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಒಂದು ವೇಳೆ ಅವರಿಬ್ಬರು ಗೆದ್ದರೆ ಬ್ಯಾಟರಾಯನಪುರ ಹಾಗೂ ಬಾಲ್ಕಿ ಕ್ಷೇತ್ರಗಳಲ್ಲೂ ಉಪಚುನಾವಣೆ ನಡೆಯಲಿವೆ.

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ.

‘ಆಪರೇಷನ್‌ ಕಮಲ ಮಾಡುವುದಿಲ್ಲ. ಉಭಯ ಪಕ್ಷಗಳ ನಾಯಕರ ಅಸಮಾಧಾನ ಸ್ಫೋಟಗೊಳ್ಳಲಿದೆ’ ಎಂಬುದು ಅವರ ನುಡಿ. ಕಾಂಗ್ರೆಸ್‌ನ ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ಗುಂಪು ಲೋಕಸಭಾ ಚುನಾವಣೆಯ ಬಳಿಕ ರಾಜೀನಾಮೆ ನೀಡಲಿದೆ ಎಂಬ ವಿಶ್ವಾಸದಲ್ಲಿದೆ. ಉಪಚುನಾವಣೆಗಳಲ್ಲಿ ಗೆಲುವು, ಅತೃಪ್ತ ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ರಚನೆಗೆ ಅನುಕೂಲವಾಗಲಿದೆ ಎಂಬುದು ಪಕ್ಷದ ನಾಯಕರ ಲೆಕ್ಕಾಚಾರ ಎಂದುಮೂಲಗಳು ತಿಳಿಸಿವೆ.

ರತ್ನಪ್ರಭಾ, ಚಿಕ್ಕನಗೌಡ ಕಣಕ್ಕೆ ಸಾಧ್ಯತೆ
ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ಬಳಿಕ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ಸಿ.ಎಸ್‌.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯಿಂದ ಎಸ್‌.ಐ. ಚಿಕ್ಕನಗೌಡರ ಹಾಗೂ ಎಂ.ಆರ್‌. ಪಾಟೀಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಚಿಂಚೋಳಿ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಉಮೇಶ ಜಾಧವ ಎದುರು ಬಿಜೆಪಿಯ ಸುನೀಲ್‌ ವಲ್ಯಾಪುರೆ ಸೋತಿದ್ದರು. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರನ್ನು ಕಣಕ್ಕೆ ಇಳಿಸುವ ಬಗ್ಗೆಯೂ ಪಕ್ಷದ ವಲಯದಲ್ಲಿ ಪ್ರಾಥಮಿಕ ಹಂತದ ಚರ್ಚೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.