ADVERTISEMENT

ಮತ ಕಳವು ಗಮನಿಸದೇ ಹೋಗಿದ್ದರೆ ಸೋಲುತ್ತಿದ್ದೆ: ಬಿ.ಆರ್.‌ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 7:24 IST
Last Updated 19 ಸೆಪ್ಟೆಂಬರ್ 2025, 7:24 IST
ಬಿ.ಆರ್. ಪಾಟೀಲ
ಬಿ.ಆರ್. ಪಾಟೀಲ   

ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆ ವೇಳೆ ಮತ ಕಳವು ಪ್ರಯತ್ನ‌ ನಡೆದಿತ್ತು. ಆಗ ಎಚ್ಚೆತ್ತುಕೊಳ್ಳದೇ ಹೋಗಿದ್ದರೆ ನಾನು ಸೋಲುತ್ತಿದ್ದೆ. ಈ‌‌ ಷಡ್ಯಂತ್ರದ ಹಿಂದೆ ಬಿಜೆಪಿ ಹಾಗೂ ಚುನಾವಣಾ ಆಯೋಗ ಶಾಮೀಲಾಗಿರುವ ಶಂಕೆ‌ ಇದೆ ಎಂದು ಶಾಸಕ ಬಿ.ಆರ್. ಪಾಟೀಲ ಗಂಭೀರ ಆರೋಪ ಮಾಡಿದರು.

ಸುದ್ದಿಗಾರರ ಜತೆ ಶುಕ್ರವಾರ‌ ಮಾತನಾಡಿದ ಅವರು, ಅರ್ಹರಾಗಿರುವ 6,018 ಮತದಾರರನ್ನು ಪಟ್ಟಿಯಿಂದ ತೆಗೆಸಿಹಾಕಲು ನಕಲಿ ಐಡಿಗಳನ್ನು ಬಳಸಿ ನಕಲಿ ದೂರುಗಳನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿತ್ತು.‌ ಸಕಾಲಕ್ಕೆ ಎಚ್ಚೆತ್ತುಕೊಂಡು ಆಯೋಗದ ಗಮನಕ್ಕೆ ತಂದೆವು. ನಾನು ನೀಡಿದ ದೂರಿನ ಆಧಾರದಲ್ಲಿ ಅಂದಿನ‌ ಉಪ ವಿಭಾಗಾಧಿಕಾರಿ ಎಫ್ಐಆರ್ ದಾಖಲು ಮಾಡಿದ್ದರು. ಮತದಾರರ ಪಟ್ಟಿಯಿಂದ ಅರ್ಹರನ್ನು ತೆಗೆಯುವ ಕೆಲಸ ಕೈಬಿಡಲಾಯಿತು. ಆದರೆ, ಮತ ಕಳವಿಗೆ ಯತ್ನಿಸಿದವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಆಯೋಗ ಸ್ಪಂದಿಸಲಿಲ್ಲ ಎಂದು ಪಾಟೀಲ‌ ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗೃಹ‌ ಸಚಿವ ಡಾ.ಜಿ.‌ಪರಮೇಶ್ವರ ಪ್ರಕರಣವನ್ನು ಸಿಐಡಿಗೆ ವಹಿಸಿದರು. ಸಿಐಡಿ ಹಲವು ಬಾರಿ ಪತ್ರ ಬರೆದರೂ ಚುನಾವಣಾ ಆಯೋಗ ಉತ್ತರ ನೀಡಿಲ್ಲ.‌ ಈಗ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ‌ ಮಾಡಿದ ಮತರ ರಾಜ್ಯ ಚುನಾವಣಾಧಿಕಾರಿ ಉತ್ತರ ನೀಡಿರುವುದಾಗಿ ಸುಳ್ಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅವರು ಯಾವ ಉತ್ತರವನ್ನೂ ನೀಡಿಲ್ಲ ಎಂದು ದೂರಿದರು.

ADVERTISEMENT

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಆಳಂದ ಕ್ಷೇತ್ರದ ಮತ‌ ಕಳವು ಪ್ರಯತ್ನ ಕುರಿತು ಭಾರತದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದರೂ ಸ್ಪಂದನೆ ಸಿಗಲಿಲ್ಲ. ಪ್ರಕರಣದ‌ ಆರೋಪಿಗಳನ್ನು ಪತ್ತೆ ಮಾಡಲು ಸಹಕಾರ ನೀಡಲಿಲ್ಕ ಎಂದು ‌ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.