ADVERTISEMENT

ಚುನಾವಣೆಯಲ್ಲಿ ಮತ ಕಳವು ತಡೆಯಲು ಕಾವಲು ಸಮಿತಿ ರಚಿಸಬೇಕು: ಕೆ.ಎಚ್‌. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 14:38 IST
Last Updated 9 ಆಗಸ್ಟ್ 2025, 14:38 IST
ಕೆಪಿಸಿಸಿ ಕಚೇರಿಯಲ್ಲಿ ನಡೆದ ‘ಕ್ವಿಟ್ ‌ಇಂಡಿಯಾ’ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ರಾಣಿ ಸತೀಶ್, ಸಲೀಂ ಅಹ್ಮದ್, ಬಿ.ಕೆ. ಹರಿಪ್ರಸಾದ್‌, ಜಿ.ಸಿ. ಚಂದ್ರಶೇಖರ್‌ ಅವರು ಪುಷ್ಪನಮನ ಸಲ್ಲಿಸಿದರು 
ಕೆಪಿಸಿಸಿ ಕಚೇರಿಯಲ್ಲಿ ನಡೆದ ‘ಕ್ವಿಟ್ ‌ಇಂಡಿಯಾ’ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ರಾಣಿ ಸತೀಶ್, ಸಲೀಂ ಅಹ್ಮದ್, ಬಿ.ಕೆ. ಹರಿಪ್ರಸಾದ್‌, ಜಿ.ಸಿ. ಚಂದ್ರಶೇಖರ್‌ ಅವರು ಪುಷ್ಪನಮನ ಸಲ್ಲಿಸಿದರು    

ಬೆಂಗಳೂರು: ‘ಚುನಾವಣೆಯಲ್ಲಿ ಮತ ಕಳ್ಳತನ ತಡೆಯಲು ಬೂತ್ ಮಟ್ಟದಲ್ಲಿ ‘ಕಾವಲು ಸಮಿತಿ’ ಹೆಸರಿನಲ್ಲಿ 10-15 ಜನರ ತಂಡ ರಚಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಸಲಹೆ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ‘ಕ್ವಿಟ್ ‌ಇಂಡಿಯಾ’ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಮತ ಕಳ್ಳತನ ಹೇಗೆ ನಡೆಯುತ್ತಿದೆ ಎಂಬುದನ್ನು ರಾಹುಲ್ ಗಾಂಧಿಯವರು ಸವಿಸ್ತಾರವಾಗಿ ಹೇಳಿದ್ದಾರೆ. ಬಿಜೆಪಿಯವರು ನಡೆಸುವ ಅಕ್ರಮಗಳನ್ನು ತಡೆಯಲು ನಾವು ಮುಂದಾಗಿದ್ದೇವೆ. ಇದನ್ನು ಎದುರಿಸಲು ಪಕ್ಷ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

‘ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ನಡೆಯುವ ಅಕ್ರಮಗಳ ಮೇಲೆ ಕಣ್ಣಿಡಲು ಕಾವಲು ಸಮಿತಿಗಳು ಸಹಕಾರಿ ಆಗಲಿವೆ. ಬಿಜೆಪಿ ದೇಶದ ಸ್ವತಂತ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಹೊಸ ರೂಪುರೇಷೆ ಸಿದ್ಧಪಡಿಸಬೇಕಿದೆ’ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ‘ದೇಶಪ್ರೇಮದ ಬಗ್ಗೆ ಮಾತನಾಡುವ ಬಿಜೆಪಿಯವರು, ಸ್ವಾತಂತ್ರ್ಯ ಪೂರ್ವದಲ್ಲೇ ಕಾಂಗ್ರೆಸ್ ಅನ್ನು ಮುಗಿಸಲು ಯತ್ನಿಸಿದ್ದರು. ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಅವಕಾಶ ನೀಡಬಾರದೆಂದು ಸಾವರ್ಕರ್ ಅವರು ಬ್ರಿಟಿಷರಿಗೆ ಪತ್ರ ಬರೆದಿದ್ದರು. ಇಂಥವರು ನಮಗೆ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ತ್ರಿವರ್ಣ ಧ್ವಜವನ್ನೇ ವಿರೋಧಿಸಿದವರು, ಈಗ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದಾರೆ. ಸಂವಿಧಾನ ಮತ್ತು ತ್ರಿವರ್ಣ ಧ್ವಜವನ್ನು ನಾಶ ಮಾಡಲು ಬಿಜೆಪಿ ಹೊರಟಿದೆ. ನಾವು ಪ್ರಾಣ ಕೊಟ್ಟಾದರೂ ಅವೆರಡನ್ನೂ ಉಳಿಸಿಕೊಳ್ಳುತ್ತೇವೆ’ ಎಂದರು.

ಕೇವಲ ಅಧಿಕಾರ ಹಿಡಿಯುವುದಷ್ಟೇ ಅಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ಸಾಂವಿಧಾನಿಕ ವಿರೋಧಿ ನಡೆಯನ್ನು ಪ್ರದರ್ಶಿಸಲು ಬಿಜೆಪಿ ಹೊರಟಿದೆ.
-ಸಲೀಂ ಅಹ್ಮದ್, ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ
ಮತ ಕಳ್ಳತನ ತಡೆಯಲು ನಾವು ಐದು ಸಮಿತಿಗಳನ್ನು ರಚಿಸಿದ್ದೇವೆ. ಈ ಸಮಿತಿಗಳು ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಡಲಿದೆ.
-ಜಿ.ಸಿ. ಚಂದ್ರಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.