ADVERTISEMENT

ಆನೆ ತುಳಿತ | ಕೇರಳದ ಕುಟುಂಬಕ್ಕೆ ₹15 ಲಕ್ಷ: ಬಿಜೆಪಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 23:37 IST
Last Updated 20 ಫೆಬ್ರುವರಿ 2024, 23:37 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಬೆಂಗಳೂರು: ‘ಕೇರಳದ ವಯನಾಡ್‌ನಲ್ಲಿ ‘ಕರ್ನಾಟಕದ ಆನೆ’ಯ ತುಳಿತದಿಂದ ಅಜೀಶ್ ಮೃತಪಟ್ಟಿದ್ದು, ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ₹15 ಲಕ್ಷ ಪರಿಹಾರ ನೀಡಲಾಗಿದೆ’ ಎಂಬ ವಿಷಯ ವಿವಾದಕ್ಕೆ ತಿರುಗಿದ್ದು, ಸರ್ಕಾರದ ನಡೆಗೆ ಬಿಜೆಪಿ ಕಿಡಿಕಾರಿದೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ವಯನಾಡ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ಪರಿಹಾರದ ಕುರಿತು ಬರೆದ ಪತ್ರ ತಕರಾರಿನ ಮೂಲ. ಕರ್ನಾಟಕದ ಆನೆ ತುಳಿದಿದ್ದರಿಂದಾಗಿ, ಪರಿಹಾರ ಕೊಡುವಂತೆ ಅಲ್ಲಿನ ಸರ್ಕಾರ, ಕರ್ನಾಟಕದ ಅರಣ್ಯ ಇಲಾಖೆಯನ್ನು ಕೋರಿತ್ತು. ಅದನ್ನು ಸರ್ಕಾರ ನಿರಾಕರಿಸಿತ್ತು. ಆದರೆ, ಆನೆಗೆ ಅಳವಡಿಸಲಾಗಿದ್ದ ರೇಡಿಯೊ ಕಾಲರ್‌ ನೀಡಿದ್ದ ಮಾಹಿತಿ ಆನೆಯು ಕರ್ನಾಟಕ ಮೂಲದ್ದೆಂದು ಹೇಳಿತ್ತು. ಹೀಗಾಗಿ, ಪರಿಹಾರ ಕೊಡುವ ಅನಿವಾರ್ಯ ಸೃಷ್ಟಿಯಾಯಿತು ಎಂದೂ ಹೇಳಲಾಗುತ್ತಿದೆ.

ADVERTISEMENT

‘ನಿಮ್ಮ ಸೂಚನೆಯ ಮೇರೆಗೆ ಕೆ.ಸಿ.ವೇಣುಗೋಪಾಲ್ ಅವರು ನನಗೆ ದೂರವಾಣಿ ಕರೆ ಮಾಡಿದ್ದಾರೆ. ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ನೀವು ಹೇಳಿದ್ದೀರಿ ಎಂಬುದನ್ನು ನನ್ನ ಗಮನಕ್ಕೆ ತಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ ಸಂತ್ರಸ್ತ ಕುಟುಂಬಕ್ಕೆ ₹15 ಲಕ್ಷ ಪರಿಹಾರ ಘೋಷಿಸಿದ್ದೇವೆ’ ಎಂದು ಈಶ್ವರ ಖಂಡ್ರೆ ಅವರು ರಾಹುಲ್‌ಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

‘ಕೇರಳದಲ್ಲಿ ನಡೆದಿರುವುದು ದುರದೃಷ್ಟಕರ ಘಟನೆ. ಮಕ್ನಾ ಹೆಸರಿನ ಸಲಗವನ್ನು ಹಾಸನ ಜಿಲ್ಲೆ ಬೇಲೂರು ಬಳಿ ಸೆರೆ ಹಿಡಿಯಲಾಗಿತ್ತು. ಆ ಬಳಿಕ 2023ರ ನವೆಂಬರ್‌ನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಿಡಲಾಗಿತ್ತು. ಅದಕ್ಕೆ ರೇಡಿಯೊ ಕಾಲರ್‌ ಕೂಡ ಅಳವಡಿಸಲಾಗಿತ್ತು. ಇದಾಗಿ ಎರಡು ತಿಂಗಳ ಬಳಿಕ ಆನೆಯು ಕೇರಳದ ವಯನಾಡ್‌ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದೂ ಅಲ್ಲದೆ, ಅಜೀಶ್‌ ಮೇಲೆ ದಾಳಿ ಮಾಡಿತ್ತು. ಅದರಿಂದ ಅಜೀಶ್‌ ಮೃತಪಟ್ಟಿದ್ದರು’ ಎಂದಿದ್ದಾರೆ.

‘ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು (6395) ಆನೆಗಳಿವೆ. ವಿವಿಧ ಕಾರಣಗಳಿಂದ ಕಾಡಿನ ವ್ಯಾಪ್ತಿ ಕುಗ್ಗುತ್ತಾ ಹೋಗಿದೆ. ಇದರ ಪರಿಣಾಮ ಆನೆಗಳು ಜನವಸತಿ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇರಳ ಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಸಚಿವರ ಸಭೆಯೊಂದನ್ನು ನಡೆಸಲು ಉದ್ದೇಶಿಸಿದ್ದು, ಮಾನವ–ವನ್ಯಜೀವಿ ಸಂಘರ್ಷ ತಗ್ಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಪತ್ರದಲ್ಲಿ ಖಂಡ್ರೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.