ಆನೆ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಒಂದು ಹೆಣ್ಣಾನೆಗಾಗಿ ಎರಡು ಮಠಗಳ ಮಧ್ಯೆ ಜಗ್ಗಾಟ ಆರಂಭವಾಗಿದ್ದು, ಅರಣ್ಯ ಇಲಾಖೆ ಈಗ ಇಕ್ಕಟ್ಟಿಗೆ ಸಿಲುಕಿದೆ.
‘ಸುಭದ್ರೆ’ ಎಂಬ ಹೆಣ್ಣು ಆನೆಗಾಗಿ ಜಗ್ಗಾಟ ಆರಂಭಿಸಿರುವ ಎರಡು ಮಠಗಳೆಂದರೆ ಉಡುಪಿಯ ಕೃಷ್ಣಮಠ ಮತ್ತು ದಾವಣಗೆರೆ ಜಿಲ್ಲೆ ಹೊನ್ನಾಳಿಯ ಹಿರೇಕಲ್ಮಠ. ಈ ವ್ಯಾಜ್ಯಕ್ಕೆ ಭಕ್ತರು ಮತ್ತು ರಾಜಕಾರಣಿಗಳೂ ಮಧ್ಯ ಪ್ರವೇಶಿಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ.
ಹಿರೇಕಲ್ಮಠದ ಸುಪರ್ದಿಯಲ್ಲಿರುವ ‘ಸುಭದ್ರೆ’ ಆನೆಯನ್ನು ಉಡುಪಿಯ ಅಷ್ಟ ಮಠಗಳಿಗೆ ಹಿಂದಿರುಗಿಸಬೇಕು ಎಂದು ಅರಣ್ಯ ಇಲಾಖೆ ಆದೇಶ ಹೊರಡಿಸಿದ್ದು, ಇದು ತಕರಾರಿಗೆ ಕಾರಣವಾಗಿದೆ.
ಹಿನ್ನೆಲೆ ಏನು?
1993ರಲ್ಲಿ ಉಡುಪಿಯ ಕೃಷ್ಣಮಠದ ಕೋರಿಕೆಯ ಮೇರೆಗೆ ಅರಣ್ಯ ಇಲಾಖೆ ಹೆಣ್ಣಾನೆಯೊಂದನ್ನು ನೀಡಿತ್ತು. ಅದಕ್ಕೆ ‘ಸುಭದ್ರೆ’ ಎಂದು ಹೆಸರಿಟ್ಟು ಮಠವೇ ಸಾಕುತ್ತಿತ್ತು. 2015ರಲ್ಲಿ ಆನೆಯ ಆರೋಗ್ಯ ಕ್ಷೀಣಿಸಿದಾಗ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿಗೆ ಕಳಿಸಲಾಗಿತ್ತು. ವರ್ಷದಲ್ಲಿ ಆನೆಯು ಗುಣಮುಖವಾಗಿದ್ದರಿಂದ ಬಳಿಕ ಮತ್ತೆ ಉಡುಪಿ ಮಠಕ್ಕೆ ಹಸ್ತಾಂತರಿಸಲು ಅರಣ್ಯ ಇಲಾಖೆ ಪತ್ರ ಬರೆಯಿತು. ಆದರೆ, ಉಡುಪಿ ಅಷ್ಟ ಮಠಗಳು 2018ರಲ್ಲಿ ಅರಣ್ಯ ಇಲಾಖೆಗೆ ಪತ್ರ ಬರೆದು ಆನೆಯ ವೆಚ್ಚ ಭರಿಸಲು ಕಷ್ಟವಾಗಿರುವುದರಿಂದ ಇಲಾಖೆಗೆ ಶಾಶ್ವತವಾಗಿ ಒಪ್ಪಿಸಲು ಸಿದ್ಧರಿದ್ದೇವೆ ಎಂದು ಪ್ರತಿಕ್ರಿಯೆ ನೀಡಿತ್ತು.
ಆದರೆ, ಆನೆಯ ಪಾಲನೆ ಮತ್ತು ಪೋಷಣೆ ವೆಚ್ಚ ಭರಿಸಬೇಕು ಎಂದು ಅರಣ್ಯ ಇಲಾಖೆ ತಿಳಿಸಿತ್ತು. 2019ರ ಏಪ್ರಿಲ್‌ನಲ್ಲಿ ಅಷ್ಟಮಠ ಮತ್ತೆ ಪತ್ರಬರೆದು ಆನೆಯ ವೆಚ್ಚ ಭರಿಸಲು ಕಷ್ಟವಾಗಿರುವುದರಿಂದ ಹೊನ್ನಾಳಿಯ ಹಿರೇಕಲ್ಮಠಕ್ಕೆ ಸಾಗಿಸಲು ಸಮ್ಮತಿ ನೀಡಿತ್ತು. ಹಿರೇಕಲ್ಮಠದಲ್ಲಿ ಆನೆ ಸಾಕಲು ಸೂಕ್ತ ವ್ಯವಸ್ಥೆ ಇರುವುದರಿಂದ ಆನೆಯ ಹಿತದೃಷ್ಟಿಯಿಂದ ಸ್ಥಳಾಂತರಿಸಬಹುದು ಎಂದೂ ಹೇಳಿತ್ತು. ಹೀಗಾಗಿ ಮುಂದಿನ ಆದೇಶದವರೆಗೆ ಹಿರೇಕಲ್ಮಠಕ್ಕೆ ಸಾಗಿಸಲು ಒಪ್ಪಿಗೆ ನೀಡಿ ಅರಣ್ಯ ಇಲಾಖೆಯು ಆದೇಶ ಹೊರಡಿಸಿತ್ತು.
ಆ ಬಳಿಕ ಹಿರೇಕಲ್ಮಠದಲ್ಲಿ ಆನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿರುವ ಕಾರಣ, ಆ ಮಠದಲ್ಲೇ ಮುಂದುವರೆಸಲು ಮತ್ತು ಅವರ ಹೆಸರಿನಲ್ಲಿಯೇ ಆನೆಯ ಒಡೆತನ ಪ್ರಮಾಣ ಪತ್ರ ನೀಡಿ ಆದೇಶವನ್ನೂ ಹೊರಡಿಸಲಾಗಿತ್ತು.
ಉಡುಪಿ ಮಠದ ಕೋರಿಕೆ:
ಉಡುಪಿ ಕೃಷ್ಣಮಠದ ಉತ್ಸವಗಳಿಗೆ ಹೆಣ್ಣಾನೆ ಮರಿಯೊಂದನ್ನು ಇಲಾಖಾವತಿಯಿಂದ ನೀಡಬೇಕು ಎಂದು ಉಡುಪಿ ಮಠ ಅರಣ್ಯ ಇಲಾಖೆಗೆ ಪತ್ರ ಬರೆಯಿತು. ಆದರೆ, ಸರ್ಕಾರದ ನಿಯಮಗಳ ಅನ್ವಯ ಹೆಣ್ಣಾನೆ ಮರಿಯನ್ನು ಇಲಾಖಾ ವತಿಯಿಂದ ನೀಡಲು ಅವಕಾಶ ಇಲ್ಲ ಎಂದು ಉತ್ತರ ನೀಡಿತ್ತು.
ಆ ಬಳಿಕ, ಉಡುಪಿ ಶೀರೂರು ಮಠದ ದಿವಾನರು ಅರಣ್ಯ ಇಲಾಖೆಗೆ ಪತ್ರ ಬರೆದು, 2026–28ರ ಪರ್ಯಾಯವು ಶೀರೂರು ಮಠದಿಂದ ನಡೆಯಲಿದ್ದು, ಪರ್ಯಾಯ ಮೆರವಣಿಗೆ ಮತ್ತು ಇತರೆ ಧಾರ್ಮಿಕ ಉದ್ದೇಶಗಳಿಗೆ ಸಂಪ್ರದಾಯದಂತೆ ಮಠದ ಆನೆಯಾದ ‘ಸುಭದ್ರೆ’ ಅವಶ್ಯಕತೆ ಇದೆ. ಆದ್ದರಿಂದ ಅದನ್ನು ಹಿಂತಿರುಗಿಸಬೇಕು ಎಂದು ಮನವಿ ಮಾಡಿತ್ತು.
ಈ ಮನವಿಯನ್ನು ಆಧರಿಸಿ ‘ಸುಭದ್ರೆ’ ಆನೆಯನ್ನು ಉಡುಪಿ ಮಠಕ್ಕೆ ಹಿಂದಿರುಗಿಸುವಂತೆ ಅರಣ್ಯ ಇಲಾಖೆ ಇದೇ 10ರಂದು ಆದೇಶ ಹೊರಡಿಸಿತ್ತು. ಆ ಆದೇಶದ ಬಗ್ಗೆ ಹಿರೇಕಲ್ಮಠ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತು. ‘ಯಾವುದೇ ಕಾರಣಕ್ಕೂ ಆನೆಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ’ ಎಂದು ಮಠದ ಭಕ್ತರೂ ಹೇಳಿದ್ದಾರೆ.
ಭಾನುವಾರ ಉಡುಪಿ ಮಠದ ಸಿಬ್ಬಂದಿ ‘ಸುಭದ್ರೆ’ ಆನೆಯನ್ನು ಒಯ್ಯಲು ಬಂದಾಗ ಉದ್ವಿಗ್ನದ ಸ್ಥಿತಿ ಉಂಟಾಯಿತು.‘ಸುಭದ್ರೆ’ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿದೆ. ಉಡುಪಿ ಮಠದವರ ಜತೆ ಮಾತುಕತೆ ನಡೆಸಿ, ಸೌಹಾರ್ದವಾಗಿ ವಿವಾದ ಇತ್ಯರ್ಥ ಮಾಡಿಕೊಳ್ಳುವುದಾಗಿ ಮಠವು ಸಂದೇಶ ನೀಡಿದೆ. ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಧ್ಯ ಪ್ರವೇಶಿಸಿ ದೂರವಾಣಿ ಮೂಲಕ ಅರಣ್ಯ ಸಚಿವ ಈಶ್ವರ ಖಂಡ್ರೆ ಜತೆ ಮಾತನಾಡಿ ಆನೆಯನ್ನು ಹಿರೇಕಲ್ಮಠದಲ್ಲೇ ಉಳಿಸಿಕೊಳ್ಳಲು ಆದೇಶ ಮಾಡಬೇಕು ಎಂದು ಒತ್ತಾಯಿಸಿದರು. ‘ಅದಕ್ಕೆ ಸಚಿವರು ಒಪ್ಪಿಗೆ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಅರಣ್ಯ ಇಲಾಖೆ ಆದೇಶವೇನು?
‘ಉಡುಪಿಯ ಕೃಷ್ಣ ಮಠವು ಸುಮಾರು 26 ವರ್ಷಗಳ ಕಾಲ ‘ಸುಭದ್ರೆ’ ಆನೆಯನ್ನು ಪೋಷಿಸಿದೆ. ಆನೆಯ ಆರೋಗ್ಯದ ಹಿತದೃಷ್ಟಿಯಿಂದ ಹೊನ್ನಾಳಿ ಹಿರೇಕಲ್ಮಠಕ್ಕೆ ಹಸ್ತಾಂತರಿಸಲಾಗಿತ್ತು. ಈಗ ಕೃಷ್ಣಮಠದಲ್ಲಿ ಆನೆ ಇಲ್ಲದಿರುವುದರಿಂದ ಮಠದ ಪರಂಪರೆ ನಿಂತು ಹೋಗಿದೆ. ಆನೆಯನ್ನು ಒದಗಿಸುವಂತೆ ಮಠ ಮತ್ತೆ ಕೋರಿದೆ. ಆದ್ದರಿಂದ ಹಿರೇಕಲ್ಮಠಕ್ಕೆ ನೀಡಿದ ಆದೇಶ ರದ್ದುಪಡಿಸಲಾಗಿದೆ. ಆನೆಯನ್ನು ಉಡುಪಿ ಕೃಷ್ಣಮಠಕ್ಕೆ ಹಿಂತಿರುಗಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.