ಬೆಂಗಳೂರು: ಜುಲೈನಲ್ಲಿ 3,489 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಿದ್ದು, ಅವುಗಳಲ್ಲಿ 17 ಮಾದರಿಗಳು ಅಸುರಕ್ಷಿತ ಮತ್ತು 18 ಮಾದರಿಗಳು ಕಳಪೆ ಮಟ್ಟದ್ದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ವಿವರ ನೀಡಿದರು.
ರಾಜ್ಯದಾದ್ಯಂತ ಬೀದಿ ಬದಿಯ 1,557 ಆಹಾರ ತಯಾರಿಕಾ ಘಟಕಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಲೋಪ ಕಂಡು ಬಂದಿರುವ 406 ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ, ಸ್ಥಳದಲ್ಲೇ ₹44,500 ದಂಡ ವಿಧಿಸಲಾಗಿದೆ. 240 ಬೀದಿ ಬದಿ ಆಹಾರ ವ್ಯಾಪಾರಿಗಳಿಗೆ ನೈರ್ಮಲ್ಯ ಮತ್ತು ಗುಣಮಟ್ಟ ಕುರಿತ ತರಬೇತಿ ನೀಡಲಾಗಿದೆ ಎಂದರು.
ರಾಜ್ಯದ ವಿವಿಧೆಡೆ 186 ಬಸ್ ನಿಲ್ದಾಣಗಳಲ್ಲಿ 889 ಆಹಾರ ಮಳಿಗೆಗಳನ್ನು ಪರೀಕ್ಷಿಸಲಾಗಿದ್ದು, ಲೋಪಗಳು ಕಂಡು ಬಂದಿರುವ 206 ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸ್ಥಳದಲ್ಲೇ ₹55 ಸಾವಿರ ದಂಡ ವಿಧಿಸಲಾಗಿದೆ. 99 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ 736 ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದ್ದು, ಲೋಪಗಳು ಕಂಡು ಬಂದಿರುವ 190 ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸ್ಥಳದಲ್ಲೇ ₹21,500 ದಂಡ ವಿಧಿಸಲಾಗಿದೆ. 291 ಕುಡಿಯುವ ನೀರಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ದಿನೇಶ್ ಹೇಳಿದರು.
ಅಧಿಕ ಅಪಾಯಕಾರಿ ಆಹಾರ ಉದ್ದಿಮೆಗಳ ವರ್ಗದಡಿ ಬರುವ 1,685 ಆಹಾರ ಉದ್ದಿಮೆಗಳನ್ನು ತಪಾಸಣೆ ಮಾಡಲಾಗಿದ್ದು, ಅವುಗಳಲ್ಲಿ ಲೋಪ ಕಂಡುಬಂದಿರುವ 465 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದರು.
ಔಷಧಿ ಮಾದರಿ ವಿಶ್ಲೇಷಣೆ:
ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಒಟ್ಟು 1,433 ಔಷಧಗಳ ಮಾದರಿಗಳನ್ನು ವಿಶ್ಲೇಷಿಸಲಾಗಿದೆ. ಅವುಗಳಲ್ಲಿ 1,366 ಉತ್ತಮ ಗುಣಮಟ್ಟದೆಂದು, 59 ಔಷಧ ಮಾದರಿಗಳು ಕಳಪೆ ಗುಣಮಟ್ಟದೆಂದು ಘೋಷಿಸಲಾಗಿದೆ ಎಂದರು.
‘ಎಂಪೈರ್ ಕಬಾಬ್ ಅಸುರಕ್ಷಿತ’
ಬೆಂಗಳೂರು ನಗರ ವ್ಯಾಪ್ತಿಯ ಎಂಪೈರ್ ಹೋಟೆಲ್‌ಗಳಲ್ಲಿ 6 ಕಬಾಬ್ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದೆ. ಆರೂ ಮಾದರಿಗಳು ಕೃತಕ ಬಣ್ಣಗಳನ್ನು ಹೊಂದಿದ್ದರಿಂದ ಅಸುರಕ್ಷಿತ ಎಂಬ ವರದಿ ಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನಾತ್ಮಕ ಪ್ರಕ್ರಿಯೆ ಜರುಗಿಸುವುದಕ್ಕಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುವುದು. ಇದಕ್ಕಾಗಿ ಎಂಪೈರ್ ಹೋಟೆಲ್‌ಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.