ADVERTISEMENT

‘ಉದ್ಯೋಗ ಖಾತರಿ’ ಬಜೆಟ್ ಸಂಕಟ: ಸರ್ಕಾರದಿಂದ ಬಾರದ ಆದೇಶ

ಅಡಕತ್ತರಿಯಲ್ಲಿ ಉದ್ಯೋಗ ಖಾತರಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 0:30 IST
Last Updated 11 ಫೆಬ್ರುವರಿ 2026, 0:30 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಎಂಎನ್‌ಆರ್‌ಇಜಿ ಬಜೆಟ್: ಅ.2ರಂದೇ ಆರಂಭಗೊಳ್ಳುತ್ತಿತ್ತು | ಜನವರಿ ಅಂತ್ಯದೊಳಗೆ ಜಿಲ್ಲಾ ಮಟ್ಟದ ಬಜೆಟ್ ಅಂತಿಮಗೊಳ್ಳುತ್ತಿತ್ತು

ಮಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಎಂಎನ್‌ಆರ್‌ಇಜಿ) ಯೋಜನೆ ರದ್ದುಗೊಳಿಸಿ, ವಿಕಸಿತ ಭಾರತ – ಉದ್ಯೋಗ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತರಿ (ವಿಬಿ – ಜಿ ರಾಮ್ ಜಿ)  ಕಾಯ್ದೆ ಜಾರಿಗೊಳಿಸುವ ಪ್ರಕ್ರಿಯೆಯ ಗೊಂದಲದಿಂದಾಗಿ ಗ್ರಾಮೀಣ ಜನರಿಗೆ ಉದ್ಯೋಗ ಖಾತರಿ ನೀಡುವ ಯೋಜನೆಯ ಬಜೆಟ್ ರೂಪಿಸುವ ಪ್ರಕ್ರಿಯೆ ಇನ್ನೂ ನಡೆದಿಲ್ಲ.

ADVERTISEMENT

ವಿಬಿ – ಜಿ ರಾಮ್ ಜಿ ಯೋಜನೆಗೂ ಹಿಂದಿನ ಪ್ರಕಾರವೇ ಬಜೆಟ್ ರೂಪಿಸಲಾಗುತ್ತದೋ ಇಲ್ಲವೊ ಎಂಬ ಗೊಂದಲ ಅಧಿಕಾರಿಗಳನ್ನು ಕಾಡುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಎನ್ಆರ್‌ಇಜಿ ಯೋಜನೆಯಡಿ 2025–26ರಲ್ಲಿ ₹ 65.36 ಕೋಟಿ ಬಜೆಟ್‌ ಅನಮೋದನೆಗೊಂಡಿತ್ತು. ಅದರಲ್ಲಿ ₹ 64.69 ಕೋಟಿ ಇದುವರೆಗೆ ವೆಚ್ಚವಾಗಿದೆ. ಒಟ್ಟು 13 ಲಕ್ಷ ಮಾನವ ದಿನಗಳ ಕೆಲಸಗಳು ನಡೆದಿವೆ.  

ಸಾಮಾನ್ಯವಾಗಿ ಮುಂದಿನ ಆರ್ಥಿಕ ವರ್ಷದ ಬಜೆಟ್‌ ರೂಪಿಸುವ ಪ್ರಕ್ರಿಯೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅ.2ರಂದೇ ಆರಂಭಿಸಲಾಗುತ್ತದೆ. ಈ ಹಿಂದಿನ ಮೂರು ವರ್ಷಗಳ ವೆಚ್ಚದ ಸರಾಸರಿಯನ್ನು ನೋಡಿಕೊಂಡು ಮುಂದಿನ ವರ್ಷದ ಬಜೆಟ್‌ ನಿಗದಿಗೊಳಿಸಲಾಗುತ್ತದೆ. ವಾರ್ಡ್‌ ಸಭೆಯಲ್ಲಿ ಕಾಮಗಾರಿ ಪ್ರಸ್ತಾವ ಸ್ವೀಕರಿಸಿ, ಅದಕ್ಕೆ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ತಾಲ್ಲೂಕು ಪಂಚಾಯಿತಿಗೆ ಕಳುಹಿಸಲಾಗುತ್ತದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಜನವರಿ ಮೊದಲ ವಾರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಾಲ್ಲೂಕಿನ ಬಜೆಟ್ ಅನ್ನು ಪ್ರಸ್ತುತಪಡಿಸುತ್ತಿದ್ದರು. ಜನವರಿ ಎರಡನೇ ಅಥವಾ ಮೂರನೇ ವಾರದಲ್ಲಿ ಜಿಲ್ಲಾ ಮಟ್ಟದ ಬಜೆಟ್‌ ಅನ್ನು ಪಂಚಾಯತ್‌ ರಾಜ್ ಇಲಾಖೆ ಆಯುಕ್ತರ ಮುಂದೆ ಪ್ರಸ್ತುತಪಡಿಸಲಾಗುತ್ತಿತ್ತು. ರಾಜ್ಯದ ಗ್ರಾಮೀಣ ಖಾತರಿ ಯೋಜನೆಯ ಮುಂದಿನ ವರ್ಷದ ಬಜೆಟ್‌ ಎಷ್ಟು ಎಂಬುದು ಕೇಂದ್ರ ಬಜೆಟ್‌ ಮಂಡನೆಗೂ ಮುನ್ನವೇ ಅಂತಿಮಗೊಳ್ಳುತ್ತಿತ್ತು.

‘ಮುಂದಿನ ವರ್ಷ ಯಾವೆಲ್ಲ ಕಾಮಗಾರಿಗಳನ್ನು ಉದ್ಯೋಗ ಖಾತರಿ ಅಡಿ ಕೈಗೆತ್ತಿಕೊಳ್ಳಬಹುದು ಎಂಬ ನಮೂನೆಯೇ ನಮಗೆ ತಲುಪಿಲ್ಲ. ಗ್ರಾಮ ಮಟ್ಟದಲ್ಲಿ ಕಾಮಗಾರಿಗಳನ್ನು ಗುರುತಿಸುವ ಪ್ರಕ್ರಿಯೆ ಒಂದು ಹಂತಕ್ಕೆ ನಡೆದಿದೆ. ಆದರೆ, ವಿಬಿ – ಜಿ ರಾಮ್ ಜಿ ಯೋಜನೆಯಡಿ ಈ ಕಾಮಗಾರಿಗಳನ್ನು ಸೇರಿಸಬಹುದೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲು ನಮ್ಮ ಜಿಲ್ಲೆಗೆ ಎಷ್ಟು ಬಜೆಟ್‌ ಬೇಕಾಗಬಹುದು ಎಂಬುದು ಇನ್ನೂ ಅಂತಿಮಗೊಂಡಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಜಿಲ್ಲೆಯಲ್ಲಿ 2022ರಲ್ಲಿ ಗರಿಷ್ಠ 17.5 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿತ್ತು. ಆ ಬಳಿಕ ಉದ್ಯೋಗದ ಬೇಡಿಕೆ ಕುಸಿಯುತ್ತಾ ಬಂದಿದೆ. ಮೂರು ವರ್ಷಗಳ ಸರಾಸರಿ ತೆಗೆದರೂ 2026–27ನೇ ಸಾಲಿಗೆ ₹60 ಕೋಟಿಗೂ ಹೆಚ್ಚು ಅನುದಾನ ನಮ್ಮ ಜಿಲ್ಲೆಗೆ ಬೇಕಾಗುತ್ತಿತ್ತು. ಹೊಸ ಯೋಜನೆಯಡಿ ಎಷ್ಟು ಹಣ ಬಿಡುಗಡೆಯಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಅವರು ತಿಳಿಸಿದರು. 

ಬಾಕಿ ಕಾಮಗಾರಿಗೆ ಪೂರ್ಣ ಹೇಗೆ?  

ಎಂಎನ್ಆರ್‌ಇಜಿ ಯೋಜನೆಯಡಿ ಕೈಗೆತ್ತಿಕೊಂಡ ಕೆಲ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಅವುಗಳನ್ನು ಪೂರ್ಣಗೊಳಿಸಲು ಅನುದಾನ ಹೊಂದಿಸುವುದು ಹೇಗೆ ಎಂಬ ಗೊಂದಲವೂ ಕೆಲವು ಗ್ರಾಮ ಪಂಚಾಯಿತಿಗಳನ್ನು ಕಾಡುತ್ತಿದೆ.‌

‘ಹಿಂದೆಲ್ಲ ನಾವು ಎಂಎನ್‌ಆರ್‌ಇಜಿ ಯೋಜನೆಯಡಿ ಮುಂದುವರಿದ ಕಾಮಗಾರಿಗಳಿಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡುತ್ತಿದ್ದೆವು. ಕೇಂದ್ರ ಸರ್ಕಾರ 2026–27ನೇ ಸಾಲಿನಲ್ಲಿ ವಿಬಿ – ಜಿ ರಾಮ್ ಜಿ ಯೋಜನೆಗೆ ಬಜೆಟ್‌ನಲ್ಲಿ ₹95 ಸಾವಿರ ಕೋಟಿ ಮೀಸಲಿಟ್ಟಿದೆ. ಅದರ ಜೊತೆಗೆ ಎಂಎನ್ಆರ್‌ಇಜಿ  ಯೋಜನೆಗೂ ₹30 ಸಾವಿರ ಕೋಟಿ ಮೀಸಲಿಟ್ಟಿದೆ. ಅದನ್ನು ಮುಂದುವರಿದ ಕಾಮಗಾರಿಗಳಿಗೆ ಒದಗಿಸುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಸ್ಪಷ್ಟ  ಮಾಹಿತಿ ನಮಗೆ ಇನ್ನೂ ತಲುಪಿಲ್ಲ’ ಎಂದು ಜಿಲ್ಲಾ ಪಂಚಾಯಿತಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.