ADVERTISEMENT

ಬೆಂಗಳೂರು| ಪರಿಸರ ನಾಶ ಮಾಡುವ ಪ್ರಗತಿ ಬೇಡ: ಪಿ.ಎಂ. ನರೇಂದ್ರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 13:57 IST
Last Updated 18 ನವೆಂಬರ್ 2025, 13:57 IST
<div class="paragraphs"><p>‘ಸಂಪನ್ಮೂಲ ಮರುಬಳಕೆ ಆರ್ಥಿಕತೆ ಮತ್ತು ಸುಸ್ಥಿರತೆ’ ಕುರಿತ ವಿಚಾರ ಸಂಕಿರಣವನ್ನು ಈಶ್ವರ ಬಿ. ಖಂಡ್ರೆ, ಶಾಲಿನಿ ರಜನೀಶ್, ಪಿ.ಎಂ. ನರೇಂದ್ರ ಸ್ವಾಮಿ ಅವರು ಮಂಗಳವಾರ ಉದ್ಘಾಟಿಸಿದರು. ಶ್ರೀನಿವಾಸುಲು, ಸೆಲ್ವಕುಮಾರ್, ನ್ಯಾ. ಸುಭಾಷ್ ಅಡಿ ಉಪಸ್ಥಿತರಿದ್ದರು </p></div>

‘ಸಂಪನ್ಮೂಲ ಮರುಬಳಕೆ ಆರ್ಥಿಕತೆ ಮತ್ತು ಸುಸ್ಥಿರತೆ’ ಕುರಿತ ವಿಚಾರ ಸಂಕಿರಣವನ್ನು ಈಶ್ವರ ಬಿ. ಖಂಡ್ರೆ, ಶಾಲಿನಿ ರಜನೀಶ್, ಪಿ.ಎಂ. ನರೇಂದ್ರ ಸ್ವಾಮಿ ಅವರು ಮಂಗಳವಾರ ಉದ್ಘಾಟಿಸಿದರು. ಶ್ರೀನಿವಾಸುಲು, ಸೆಲ್ವಕುಮಾರ್, ನ್ಯಾ. ಸುಭಾಷ್ ಅಡಿ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪರಿಸರ ಸಂಪತ್ತು ನಾಶ ಮಾಡುವ ಪ್ರಗತಿ ಬೇಡ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಈ ಸುವರ್ಣ ಗುರಿಯನ್ನು ಮರು ನಿಗದಿಪಡಿಸೋಣ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.

ADVERTISEMENT

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ‘ಸಂಪನ್ಮೂಲ ಮರುಬಳಕೆ ಆರ್ಥಿಕತೆ ಮತ್ತು ಸುಸ್ಥಿರತೆ’ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಸವನ್ನು ಅವಕಾಶವನ್ನಾಗಿಸಿಕೊಂಡು, ಆವಿಷ್ಕಾರ ಸಂಪ್ರದಾಯವಾಗಿಸಿ, ಸುಸ್ಥಿರತೆಯನ್ನು ನಮ್ಮ ಮೂಲಮಂತ್ರವಾಗಿಸಿಕೊಳ್ಳಬೇಕು. ಈ ಮೂಲಕ ಸಂಪನ್ಮೂಲಗಳ ಸುದೀರ್ಘ ಬಳಕೆ, ಮರುಬಳಕೆಯಿಂದ ನಮ್ಮ ರಾಜ್ಯವನ್ನು ಸ್ವಚ್ಛ, ಹಸಿರು, ಸುಸ್ಥಿರವನ್ನಾಗಿ ರೂಪಿಸಿ, ಮುಂದಿನ ಪೀಳಿಗೆ ನಮ್ಮನ್ನು ಕೃತಜ್ಞತೆಯೊಂದಿಗೆ ನೆನಪಿಸಿಕೊಳ್ಳುವಂತೆ ಮಾಡಬೇಕು’ ಎಂದು ಹೇಳಿದರು.

ಹವಾಮಾನ ಬದಲಾವಣೆ ಸಮಸ್ಯೆ, ಜೀವವೈವಿಧ್ಯ ರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಗೆ ಸಮರ್ಪಕ, ಕ್ರಾಂತಿಕಾರಿ ಪರಿಹಾರ ಮಾರ್ಗ ಕಂಡುಕೊಳ್ಳಬೇಕಿದೆ. ತ್ಯಾಜ್ಯವನ್ನು ಕಡಿಮೆ ಮಾಡಿ, ವಸ್ತುಗಳ ಮರುಬಳಕೆಯನ್ನು ಗರಿಷ್ಠಗೊಳಿಸಿ, ಸಂಪನ್ಮೂಲಗಳನ್ನು ದೀರ್ಘಾವಧಿ ಸಕ್ರಿಯವಾಗಿರಿಸಿಕೊಂಡರೆ ಸಂಪನ್ಮೂಲ ಸಂರಕ್ಷಣೆ ಮತ್ತು ಪರಿಸರ ಸುಧಾರಣೆ ಸಾಧ್ಯವಾಗುತ್ತದೆ ಎಂದರು.

‘1974ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಮಾಲಿನ್ಯ ನಿಯಂತ್ರಿಸಲು ಮೊದಲ ಬಾರಿಗೆ ರಾಜ್ಯಗಳಲ್ಲಿ ಮಂಡಳಿಗಳನ್ನು ಸ್ಥಾಪಿಸಿದರು. ಅಂದಿನಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಈ ಸುವರ್ಣ ಮಹೋತ್ಸವದ ಅಂಗವಾಗಿ, ಪರಿಸರದ ಬಗ್ಗೆ ಅರಿವು ಮೂಡಿಸಲು 25 ಜಿಲ್ಲೆಗಳನ್ನು ಒಳಗೊಂಡಂತೆ 14 ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರ ಸಮಾರೋಪ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.19ರಂದು ನಡೆಯಲಿದೆ’ ಎಂದು ತಿಳಿಸಿದರು.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳು, ಹಸಿರು ಪಟಾಕಿ ಬಳಕೆ ಇದಕ್ಕೆ ಉತ್ತಮ ನಿದರ್ಶನ. ಇದರಿಂದ, ಮೊದಲ ಬಾರಿಗೆ ಬೆಂಗಳೂರು ಹಾಗೂ ರಾಜ್ಯದೆಲ್ಲೆಡೆ ಪರಿಸರದ ಮೇಲಿನ ಮಾಲಿನ್ಯ ಕಡಿಮೆಯಾಯಿತು’ ಎಂದರು.

ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು, ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.