ADVERTISEMENT

ವಿದ್ಯುತ್‌ ದರ ಹೆಚ್ಚಳಕ್ಕೆ ಎಸ್ಕಾಂ ಪ್ರಸ್ತಾವ: ಗ್ರಾಹಕರಿಗೆ ದರ ಏರಿಕೆಯ ಬಿಸಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2024, 23:30 IST
Last Updated 6 ಡಿಸೆಂಬರ್ 2024, 23:30 IST
<div class="paragraphs"><p> ವಿದ್ಯುತ್‌</p></div>

ವಿದ್ಯುತ್‌

   

ಬೆಂಗಳೂರು: ರಾಜ್ಯದ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ) ವಿದ್ಯುತ್‌ ದರ ಹೆಚ್ಚಳ ಮಾಡುವಂತೆ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವ ಸಲ್ಲಿಸಿವೆ. ಈ ಪ್ರಸ್ತಾವಗಳಿಗೆ ಆಯೋಗದ ಒಪ್ಪಿಗೆ ದೊರೆತರೆ ಗ್ರಾಹಕರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ.

ಪ್ರತಿ ವರ್ಷ ನವೆಂಬರ್‌ನಲ್ಲಿ ರಾಜ್ಯದ ಎಲ್ಲ ಎಸ್ಕಾಂಗಳು ದರ ಹೆಚ್ಚಳ ಪ್ರಸ್ತಾವವನ್ನು ಸಲ್ಲಿಸುತ್ತವೆ. ಇತ್ತೀಚೆಗೆ  ಬಹುವಾರ್ಷಿಕ ದರ (ಎಂವೈಟಿ) ವ್ಯವಸ್ಥೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರ ನಂತರದ ಮೊದಲ ಪರಿಷ್ಕರಣೆಯ ಪ್ರಕ್ರಿಯೆ ಇದಾಗಿದೆ.

ADVERTISEMENT

ಮೊದಲ ವರ್ಷ ಪ್ರತಿ ಯೂನಿಟ್‌ಗೆ 65-70 ಪೈಸೆ ಹಾಗೂ ಎರಡನೇ ವರ್ಷ 70-75 ಪೈಸೆ ಮತ್ತು ಮೂರನೇ ವರ್ಷ 85-90 ಪೈಸೆ ಆಸುಪಾಸಿನಲ್ಲಿ ಹೆಚ್ಚಳಕ್ಕೆ ಅನುಮತಿ ನೀಡುವಂತೆ ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ. 

ವಾರ್ಷಿಕ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಸ್ತಾವ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿತ್ತು. ನಿಗದಿತ ಗಡುವಿನಲ್ಲಿ ಐದೂ ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿವೆ. ಮುಂದಿನ ಮೂರು ವರ್ಷಗಳಲ್ಲಿ ಆಗಲಿರುವ ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ಹಾಗೂ ಕೊರತೆಯಾಗಬಹುದಾದ ವಿದ್ಯುತ್ ಖರೀದಿಯನ್ನು ಅಂದಾಜು ಮಾಡಿ ದರ ಪರಿಷ್ಕರಣೆಯ ಬೇಡಿಕೆಯನ್ನು ಲೆಕ್ಕಹಾಕಿ ನೀಡಿವೆ. 2025-26ನೇ ಸಾಲಿಗೆ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸಿರುವ ಬೇಡಿಕೆ ಒಂದೇ ಮಾದರಿಯಾಗಿದ್ದು, ಉಳಿದೆರಡು ವರ್ಷಗಳಲ್ಲಿ ಮಾತ್ರ ಕೆಲವು ಪೈಸೆಗಳಷ್ಟು ವ್ಯತ್ಯಾಸ ಇದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯಮಿಗಳು, ತಜ್ಞರು, ಸಾಮಾನ್ಯ ಗ್ರಾಹಕರ ಅಹವಾಲುಗಳನ್ನು ಆಲಿಸಿ ವಾಸ್ತವಾಂಶಗಳನ್ನು ಪರಿಶೀಲಿಸಿ 2025ರ ಮಾರ್ಚ್ ವೇಳೆಗೆ ಆಯೋಗವು ಪರಿಷ್ಕರಣೆಗೆ ಸಂಬಂಧಿಸಿದಂತೆ ಆದೇಶ ಪ್ರಕಟಿಸಲಿದೆ. 

ಆಕ್ಷೇಪ: 

ಬಹುವಾರ್ಷಿಕ ದರ ಪದ್ಧತಿಗೆ ಕೈಗಾರಿಕೋದ್ಯಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಮೂರು ವರ್ಷಗಳ ವಿದ್ಯುತ್ ದರ ಪರಿಷ್ಕರಣೆಯನ್ನು ಮುಂಚಿತವಾಗಿಯೇ ಮಾಡುವುದರಿಂದ ಹೊರೆ ಹೆಚ್ಚಲಿದೆ. ದೇಶದ ಇತರೆ ರಾಜ್ಯಗಳು ಕಾದುನೋಡುವ ತಂತ್ರ ಅನುಸರಿಸುತ್ತಿವೆ. ಕರ್ನಾಟಕದಲ್ಲಿ ಮಾತ್ರ ತರಾತುರಿಯಲ್ಲಿ ಅಳವಡಿಸಿಕೊಳ್ಳುತ್ತಿರುವುದು ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ಪೂರಕ ಕ್ರಮವಲ್ಲ ಎಂದು ಆಕ್ಷೇಪದಲ್ಲಿ ತಿಳಿಸಲಾಗಿತ್ತು. ಅದರ ನಡುವೆ ದರ ಪರಿಷ್ಕರಣೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ.

‘ಬಹುವಾರ್ಷಿಕ ದರ ಪದ್ಧತಿಯು ಈಗಿರುವ ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕದ (ಎಫ್‌ಪಿಪಿಸಿಎ) ಮುಂದುವರಿದ ಭಾಗವಾಗಿದೆ. ಎಫ್‌ಪಿಪಿಸಿಎನಲ್ಲಿ ಆಯಾ ಎಸ್ಕಾಂಗಳಿಗೆ ಪ್ರತಿ ತಿಂಗಳು ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಎಂವೈಟಿ ಅಡಿ ಒಮ್ಮೆ ಪರಿಷ್ಕರಣೆಗೆ ಅನುಮೋದನೆ ನೀಡಿದರೆ, ಮುಂದಿನ ಮೂರು ವರ್ಷಗಳ ಕಾಲ ಮತ್ತೆ ಯಾವುದೇ ರೀತಿಯ ದರ ಪರಿಷ್ಕರಣೆ ಮಾಡುವುದಿಲ್ಲ. ಹೆಚ್ಚೆಂದರೆ ವಾರ್ಷಿಕ ಕಾರ್ಯಸಾಧನೆ ಪರಿಶೀಲನೆ (ಎಪಿಆರ್)ಯಲ್ಲಿ ಕಂಡುಬರುವ ವ್ಯತ್ಯಾಾಸಗಳನ್ನು ಸರಿದೂಗಿಸಲು ನಾಲ್ಕೈದು ಪೈಸೆ ಹೆಚ್ಚು-ಕಡಿಮೆ ಮಾಡಲಾಗುತ್ತದೆ ಅಷ್ಟೇ’ ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹೊಸತಲ್ಲ:

‘ವಿದ್ಯುತ್‌ ದರ ಪರಿಷ್ಕರಣೆಯ ಪ್ರಸ್ತಾವ ಸಲ್ಲಿಸುವುದು ಪ್ರತಿವರ್ಷ ನವೆಂಬರ್‌ನಲ್ಲಿ ನಡೆಸುವ ಪ್ರಕ್ರಿಯೆ. ಈ ಬಾರಿ ಮೂರು ವರ್ಷಕ್ಕೆ ಸಂಬಂಧಿಸಿದಂತೆ ಪ್ರಸ್ತಾವ ಮಂಡಿಸಲಾಗಿದೆ ಎಂಬುದನ್ನು ಹೊರತುಪಡಿಸಿದರೆ ಪ್ರಸ್ತಾವ ಸಲ್ಲಿಸುವುದು ಹೊಸ ಪ್ರಕ್ರಿಯೆಯಂತು ಅಲ್ಲ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಎಸ್ಕಾಂಗಳಿಂದ ಪ್ರಸ್ತಾವ ಸಲ್ಲಿಕೆಯಾಗಿದೆ. ಸಾರ್ವಜನಿಕ ಪ್ರಕಟಣೆ ನೀಡಿ ಜನರ ಅಹವಾಲು ಆಲಿಸಿ ತಜ್ಞರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುವುದು
ಪಿ. ರವಿಕುಮಾರ್‌ ಅಧ್ಯಕ್ಷ ಕೆಇಆರ್‌ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.