ADVERTISEMENT

ಬೆಂಗಳೂರು | ಅಬಕಾರಿ ಪೊಲೀಸರ ಕಾರ್ಯಾಚರಣೆ: ₹46.01 ಲಕ್ಷದ ಅಕ್ರಮ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 4:31 IST
Last Updated 1 ಫೆಬ್ರುವರಿ 2025, 4:31 IST
ಅಬಕಾರಿ ಪೊಲೀಸರು ವಶಕ್ಕೆ ಪಡೆದ ಅಕ್ರಮ ಮದ್ಯ
ಅಬಕಾರಿ ಪೊಲೀಸರು ವಶಕ್ಕೆ ಪಡೆದ ಅಕ್ರಮ ಮದ್ಯ   

ಬೆಂಗಳೂರು: ನಗರದ ಕೆಂಗೇರಿ, ಮಾಗಡಿ ರಸ್ತೆ ದಾಸರಹಳ್ಳಿ, ಕಾಮಾಕ್ಷಿಪಾಳ್ಯ ಮತ್ತು ಬಸವೇಶ್ವರ ನಗರದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಅಬಕಾರಿ ಇಲಾಖೆ ಪೊಲೀಸರು, ₹46.01 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಅಬಕಾರಿ ವಿಭಾಗ ಬಿಯುಡಿ–3ರ ವ್ಯಾಪ್ತಿಯಲ್ಲಿ ಇದೇ 29 ಮತ್ತು 30ರಂದು ಒಟ್ಟು ನಾಲ್ಕು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ‘ಆರೋಪಿಗಳು ಸುಂಕ ರಹಿತ (ಡ್ಯೂಟಿ ಫ್ರೀ) ಮದ್ಯ ಮತ್ತು ಸೇನಾ ಮದ್ಯವನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಮಾರಾಟದ ಸ್ಥಳ ಮತ್ತು ಮದ್ಯ ಸಂಗ್ರಹಿಸಿದ್ದ ಗೋದಾಮುಗಳ ಮೇಲೆ ದಾಳಿ ನಡೆಸಲಾಯಿತು ಎಂದು ಅಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನ ಮುನೇಶ್ವರ ಗುಡಿಯ ಬಳಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ, ಸ್ಕೂಟರ್ ಮತ್ತು 8.25 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ದಾಸರಹಳ್ಳಿಯ ರಹೇಜಾ ಪಾರ್ಕ್‌ ವಸತಿ ಸಮುಚ್ಚಯದ ಎದುರು ಮಾರಾಟ ಮಾಡುತ್ತಿದ್ದಾಗ ಸ್ಕೂಟರ್‌ ಮತ್ತು 7 ಲೀಟರ್‌ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

ADVERTISEMENT

ಕಾಮಾಕ್ಷಿಪಾಳ್ಯದ ಶಾರದಾಂಭ ಪಿಜಿ ಕಟ್ಟಡದ ನೆಲಮಹಡಿಯಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿ 163 ಲೀಟರ್‌ ಮದ್ಯ, ಬಸವೇಶ್ವರನಗರದ ಮನೆಯೊಂದರಲ್ಲಿ 538 ಲೀಟರ್‌ ಸುಂಕರಹಿತ ವಿದೇಶಿ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದಿದೆ.

ಕಾರ್ಯಾಚರಣೆ ವೇಳೆ ಒಟ್ಟು 716.25 ಲೀಟರ್‌ನಷ್ಟು ಅಕ್ರಮ ಮದ್ಯ ಪತ್ತೆಯಾಗಿದೆ. ಮದ್ಯದ ಜತೆಗೆ ಎರಡು ದ್ವಿಚಕ್ರ ವಾಹನಗಳನ್ನು (₹1.60 ಲಕ್ಷ ಮೌಲ್ಯ) ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಮದ್ಯ ಮತ್ತು ವಾಹನಗಳ ಮೌಲ್ಯ ₹47.70 ಲಕ್ಷವಾಗುತ್ತದೆ. ಈ ಕಾರ್ಯಾರಣೆಯಿಂದ ರಾಜ್ಯ ಸರ್ಕಾರಕ್ಕೆ ಆಗಬಹುದಾಗಿದ್ದ ₹28 ಲಕ್ಷದಷ್ಟು ಸುಂಕ ನಷ್ಟವನ್ನು ತಪ್ಪಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಆತ್ಮಹತ್ಯೆಗೆ ಯತ್ನಿಸಿದ ಆರೋಪಿ
ರಹೇಜಾ ಪಾರ್ಕ್‌ ಕಾಮಾಕ್ಷಿಪಾಳ್ಯ ಮತ್ತು ಬಸವೇಶ್ವರನಗರದ ಪ್ರಕರಣಗಳಲ್ಲಿ ಕೆ.ವಿ.ಜಗನ್ನಾಥ ಅವರನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ಪೊಲೀಸರ ವಶದಲ್ಲಿ ಇದ್ದಾಗಲೇ ಫಿನಾಯಿಲ್‌ ಕುಡಿದ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ. ಆರೋಪಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.  ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಆತ್ಮಹತ್ಯೆಗೆ ಯತ್ನಿಸಿದ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.